ಸೋಮವಾರ, ಸೆಪ್ಟೆಂಬರ್ 16, 2019
26 °C

ಖರ್ಗೆ ಸಂವಿಧಾನಕ್ಕೆ ಎಷ್ಟು ಗೌರವ ಕೊಟ್ಟಿದ್ದಾರೆ: ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆ

Published:
Updated:

ಕಲಬುರ್ಗಿ: ‘ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡುವ ಸಂಸದ ಮಲ್ಲಿಕಾರ್ಜುನ ಖರ್ಗೆ ಸಂವಿಧಾನಕ್ಕೆ ಎಷ್ಟು ಗೌರವ ಕೊಟ್ಟಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ 40ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಪ್ರಧಾನಿ ನೇಣು ಹಾಕಿಕೊಳ್ಳುತ್ತಾನಾ ಎಂದು ಏಕವಚನದಲ್ಲೇ ಪ್ರಶ್ನಿಸುತ್ತೀರಿ. ಹಾಗಾದರೆ, ಸಂವಿಧಾನಕ್ಕೆ ನೀವೆಷ್ಟು ಗೌರವ ಕೊಟ್ಟಿದ್ದೀರಿ’ ಎಂದರು.

‘ಬಿಜೆಪಿ ಪ್ರಧಾನಿ, ಕಾಂಗ್ರೆಸ್ ಪ್ರಧಾನಿ ಎಂದು ಇರುವುದಿಲ್ಲ. ಪಕ್ಷ ಯಾವುದಿದ್ದರೂ ಅವರು ದೇಶಕ್ಕೆ ಪ್ರಧಾನಿಯಾಗಿರುತ್ತಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದರು.

‘ನೀವು ಕಾಂಗ್ರೆಸ್‌ನ ಹಿರಿಯ ನಾಯಕರು, ಎಲ್ಲಾ ಅರ್ಹತೆ ಇದ್ದರೂ ಏಕೆ ಮುಖ್ಯಮಂತ್ರಿ ಆಗಲಿಲ್ಲ. ಹೊರಗಿನಿಂದ ಬಂದವರು ಮುಖ್ಯಮಂತ್ರಿ ಆಗಿದ್ದಾರೆ. ಮುಂದೆಯೂ ಅವರೇ ಮುಖ್ಯಮಂತ್ರಿ ಎಂದು ಕೆಲವರು ಘಂಟಾಘೋಷವಾಗಿ ಹೇಳುತ್ತಿದ್ದಾರಲ್ಲ ಏಕೆ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ಸಂವಿಧಾನ ಬದಲಾವಣೆ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ಅನಗತ್ಯವಾಗಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ಹೇಳದೆ ಇರುವ ವಿಷಯವನ್ನು ನನ್ನ ಬಾಯಿಗೆ ಹಾಕುತ್ತಿದ್ದಾರೆ. ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಈ ದೇಶದಲ್ಲಿ ರಕ್ತಕ್ರಾಂತಿ ಆಗುತ್ತದೆ ಎಂದು ಹೇಳಿಕೆ ನೀಡಿ ಜನರನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಸವಣ್ಣನಷ್ಟೇ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆಯೂ ನಾನು ಗೌರವ ಹೊಂದಿದ್ದೇನೆ. ಕಾಲಕಾಲಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಮಾಡುತ್ತ ಬರಲಾಗಿದೆ. ರಾಜೀವ್‌ಗಾಂಧಿ ಕೂಡ ಈ ಹಿಂದೆ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. ಸ್ವಾತಂತ್ರ್ಯ ಬಂದಾಗಿನಿಂದ ಮನಮೋಹನ್‌ ಸಿಂಗ್‌ ಸರ್ಕಾರದವರೆಗೆ ಎಷ್ಟು ಬಾರಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ ಎಂಬುದನ್ನು ಖರ್ಗೆ ಅವರು ಹೇಳಬೇಕು’ ಎಂದು ಒತ್ತಾಯಿಸಿದರು.

‘ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಿಮ್ಮ ಕ್ಷೇತ್ರದ ದಲಿತರಿಗೆ ಎಷ್ಟು ಮನೆಗಳನ್ನು ಕಟ್ಟಿಸಿಕೊಟ್ಟಿದ್ದೀರಿ, ಉದ್ಯೋಗ ಸೃಷ್ಟಿಸಲು ಏನು ಮಾಡಿದ್ದೀರಿ, ನಿಮ್ಮ ತಂದೆ ಎಂಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕರಾಗಿದ್ದರು ಎಂದು ಹೇಳುತ್ತೀರಿ. ಹಾಗಾದರೆ ಎಂಎಸ್‌ಕೆ ಮಿಲ್ ಪುನಶ್ಚೇತನಕ್ಕೆ ಏಕೆ ಕ್ರಮಕೈಗೊಳ್ಳಲಿಲ್ಲ’ ಎಂದು ಪ್ರಶ್ನಿಸಿದರು.

ಮುಖಂಡರಾದ ಮಹಾಂತಗೌಡ ಪಾಟೀಲ, ಸಂಗಮೇಶ ಕುಲಕರ್ಣಿ ಪ್ರೇಮಸಿಂಗ್ ರಾಠೋಡ, ಮಾಧ್ಯಮ ಪ್ರಮುಖ್ ಸಂಗನ್ಣ ಇಜೇರಿ, ಸಹ ಪ್ರಮುಖ್ ಬಾಬುರಾವ ಹಾಗರಗುಂಡಗಿ ಇದ್ದರು.

Post Comments (+)