ಭಾನುವಾರ, ಜೂಲೈ 5, 2020
23 °C

ಸಂಸದರಿಂದ ಸಿಎಂ ಭೇಟಿ:ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: 'ಸಂಸದ ಡಾ.ಉಮೇಶ ಜಾಧವ ಹಾಗೂ ಜಿಲ್ಲೆಯ ಕೆಲ ಬಿಜೆಪಿ ನಾಯಕರು ಬೆಂಗಳೂರಿಗೆ ದೌಡಾಯಿಸಿ ಮುಖ್ಯಮಂತ್ರಿ ಅವರ ಭೇಟಿ ಮಾಡುವ ಧಾವಂತ ಏನಿತ್ತು? ಇದು ಜಿಲ್ಲಾಧಿಕಾರಿ ವರ್ಗಾವಣೆಯ ಪ್ರಹಸನದ ಇನ್ನೊಂದು ಭಾಗ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ತಮ್ಮ ಟ್ವೀಟರ್‌ನಲ್ಲಿ ಮೂದಲಿಸಿದ್ದಾರೆ.

‘ಮಾಲೀಕಯ್ಯ ಗುತ್ತೇದಾರ ಅವರು ನನ್ನನ್ನು ‘ಟ್ವೀಟರ್‌ ಶಾಸಕ’ ಎಂದು ವ್ಯಂಗ್ಯ ಮಾಡಿದ್ದರು. ಈಗ ಅವರೇನು ಮಾಡುತ್ತಿದ್ದಾರೆ ಎಂದು ಜನರಿಗೆ ಗೊತ್ತಾಗುತ್ತಿದೆ. ಡಿಸಿ ವರ್ಗಾವಣೆಯಿಂದ ಜನರಲ್ಲಿ ಆಕ್ರೋಶ ಹುಟ್ಟಿತು. ಇದರಿಂದ ಬೆಚ್ಚಿಬಿದ್ದ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಿ ಬಂದಿದ್ದಾರೆ’ ಎಂದೂ ತಿರುಗೇಟು ನೀಡಿದ್ದಾರೆ.

‘ಇಂಥ ಸಂದಿಗ್ಧ ಸ್ಥಿತಿಯಲ್ಲೂ ಜಿಲ್ಲಾಧಿಕಾರಿ ವರ್ಗಾವಣೆ ಏಕೆ ಮಾಡಲಾಗಿತ್ತು? ವರ್ಗಾವಣೆಯಲ್ಲಿ ತಮ್ಮದೇನು ಪಾತ್ರ ಇಲ್ಲ ಎಂದು ಹೇಳಿಕೊಂಡ ಬಿಜೆಪಿ ನಾಯಕರು‌ ವಿಡಿಯೊ ಬಿಡುಗಡೆ ಮಾಡಿದ್ದು ಏಕೆ? ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿದ್ದು ಯಾರು? ಜನರ ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕು’ ಎಂದು  ಒತ್ತಾಯಿಸಿದ್ದಾರೆ.

ಪ್ಯಾಕೇಜ್‌ ಕೊಡಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುಡಿಯುವ ವರ್ಗವನ್ನು ಸಂಪೂರ್ಣ ನಿರ್ಲಕ್ಷ ಮಾಡಿವೆ. ರಾಜ್ಯದಲ್ಲಿ ವಲಸೆ ಕಾರ್ಮಿಕರು ಅನ್ನ, ಆಶ್ರಯಕ್ಕೆ ‍ಪರದಾಡುವಂತಾಗಿದೆ. ಊರುಗಳಿಗೆ ಬರಲಾಗದೇ ದೊಡ್ಡ ನಗರಗಳಲ್ಲಿ‌ ಸಿಲುಕಿರುವ ಜನ ಒಂದೆಡೆಯಾದರೆ, ಊರಿಗೆ ಬಂದು ನಿರುದ್ಯೋಗಿಗಳಾಗಿರುವ ಕಾರ್ಮಿಕರು ಮತ್ತೊಂದು ಕಡೆ ಇದ್ದಾರೆ. ಕೂಡಲೇ ಅವರ ಅನುಕೂಲಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು