ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿಗೂ ಕೆಕೆಆರ್‌ಡಿಬಿ ಅನುದಾನ

ಕೆಕೆಆರ್‌ಡಿಬಿ; 2022–23ನೇ ಸಾಲಿನ ಪ್ರಥಮ ಸಭೆಯಲ್ಲಿ ದತ್ತಾತ್ರೇಯ ಪಾಟೀಲ ರೇವೂರ ಹೇಳಿಕೆ
Last Updated 20 ಮಾರ್ಚ್ 2022, 4:54 IST
ಅಕ್ಷರ ಗಾತ್ರ

ಕಲಬುರಗಿ:‌ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಮೈಕ್ರೊ ಯೋಜನೆಗಳಿಗೆ ನೀಡಿರುವ ₹1,500 ಕೋಟಿಯನ್ನು ಈ ವರ್ಷದ ಅವಧಿಯಲ್ಲೇ ಖರ್ಚು ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೆಳಿದರು. ‌

ಶನಿವಾರ ಇಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2022–23 ನೇ ಸಾಲಿನ ಪ್ರಥಮ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.‌‌

ಹಿಂದಿನ ವರ್ಷದ ಅನುದಾನದಲ್ಲಿ ಈಗಾಗಲೇ ₹1,000 ಕೋಟಿ ಖರ್ಚು ಮಾಡಲಾಗಿದೆ. ಮ್ಯಾಕ್ರೊ ಯೋಜನೆ ಅಡಿ ಕಲಬುರಗಿಯಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿ ಸಂಕೀರ್ಣ ನಿರ್ಮಾಣ, ರಾಯಚೂರು ವಿಮಾನ ನಿಲ್ದಾಣ, ನೀರಾವರಿ ಯೋಜನೆಗಳಿಗೆ ಮಂಡ
ಳಿಯಿಂದ ಅನುದಾನ ನೀಡಲಾಗುವುದು ತಿಳಿಸಿದರು.

ಕಾಮಗಾರಿಗಳ ತ್ವರಿತ ಅನುಷ್ಠಾನ ಮತ್ತು ಅನುದಾನ ಸಮರ್ಪಕವಾಗಿ ಬಳಕೆ ಮಾಡಲು ಕೆಕೆಆರ್‌ಡಿಬಿಗೆ ಪ್ರತ್ಯೇಕ ಎಂಜಿನಿಯರಿಂಗ್ ಕೋಶವನ್ನು ನೀಡಬೇಕು ಮತ್ತು ಜಿಲ್ಲಾವಾರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ನೇಮಕ ಮಾಡಬೇಕು ಎಂದು ಈಚೆಗೆ ನಡೆದ 371 (ಜೆ) ಸಂಪುಟ ಉಪ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷ ಬಿ.ಶ್ರೀರಾಮುಲು ಅವರಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

‘₹3,000 ಸಾವಿರ ಕೋಟಿಯನ್ನು ಈ ಭಾಗದ ಅಭಿವೃದ್ಧಿಗೆ ಖರ್ಚು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಆ ಮಾತಿಗೆ ಬದ್ಧವಾಗಿ ನಡೆದುಕೊಳ್ಳುತ್ತೇವೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಮಂಡಳಿಗೆ ₹1,500 ಕೋಟಿ ಅನುದಾನ ಘೋಷಣೆ ಮಾಡಿ ಕೇವಲ ₹1,000 ಕೋಟಿ ನೀಡಲಾಗಿತ್ತು. ಹಿಂದುಳಿದ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡದೇ ಕೇವಲ ಜಾತಿ ರಾಜಕಾರಣ ಮಾಡಿದರು’ ಎಂದು ಟೀಕಿಸಿದರು.

‘ವಿಶೇಷ ಅಭಿವೃದ್ಧಿ ಯೋಜನೆಗಳಿಗೆ (ಎಸ್‌ಡಿಪಿ) ಮಂಡಳಿಯ ಹಣ ಹೋಗಲು ಬಿಡುವುದಿಲ್ಲ. ಮೈಕ್ರೊ ಮತ್ತು ಮ್ಯಾಕ್ರೋ ಯೋಜನೆಗಳಿಗೆ ತಲಾ ₹1,500 ಕೋಟಿಯನ್ನು ಪ್ರತ್ಯೇಕವಾಗಿ ಘೋಷಣೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು’ ಎಂದು ಹೇಳಿದರು.

ಪ್ರವಾಸೋದ್ಯಮ ಕಾರಿಡಾರ್‌ಗೆ ಅನುದಾನ: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಮತ್ತು ಕಲಬುರಗಿ ಕೋಟೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಅದರ ಜತೆಗೆ ಕಲಬುರಗಿಯ ದೇವಲ ಗಾಣಗಾಪುರ, ಸನ್ನತಿ, ಬೀದರ್‌ನ ನರಸಿಂಹ ಝರಣಾ ಸೇರಿದಂತೆ ಇನ್ನಿತರ ಪ್ರವಾಸಿ ಸ್ಥಳಗಳನ್ನು ಒಳಗೊಂಡ ಪ್ರವಾಸೋದ್ಯಮ ಕಾರಿಡಾರ್ ಮಾಡಬೇಕು ಎಂಬುದು ಬಹಳ ದಿನಗಳ ಬೇಡಿಕೆ ಆಗಿದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆಯು ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿದರೆ ಕೆಕೆಆರ್‌ಡಿಬಿ ಪರಿಗಣಿಸಲಿದೆ ಎಂದರು.‌‌ ಕಲಬುರಗಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಬಹಮನಿ ಕೋಟೆಯ ಆವರಣದಲ್ಲಿ ವಾಸ ಆಗಿರು
ವವರು ಮನೆಗಳನ್ನು ತೆರವುಗೊಳಿಸಬೇಕು. ಅಲ್ಲಿನ ನಿವಾಸಿಗಳಿಗೆ ಸರ್ಕಾರ ಪುನರ್ವಸತಿ ಕಲ್ಪಿಸಲಿದೆ ಎಂದು ಅವರು ಹೇಳಿದರು.

ಕಲಬುರಗಿಯಲ್ಲಿ ಎರಡನೇ ಹೊರ ವರ್ತುಲ ರಸ್ತೆ ನಿರ್ಮಿಸುವುದು ಈ ಭಾಗದ ಬಹುದಿನಗಳ ಬೇಡಿಕೆ ಆಗಿದೆ. ಈ ಕುರಿತು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿ ಮತ್ತು ಕೇಂದ್ರಕ್ಕೆ ನಿಯೋಗ ಹೋಗಿ ಭೂಸ್ವಾಧೀನಕ್ಕೆ ಬೇಕಾಗುವ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕು ಮತ್ತು ಜಿಎಸ್‌ಟಿ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಲಾಗುವುದು ಎಂದು ಹೇಳಿದರು.

ಬೀದರ್‌ನಿಂದ ಕಲಬುರಗಿ, ಸೇಡಂ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ. ಹೀಗಾಗಿ ಬೀದರ್‌ನಿಂದ ಕಲಬುರಗಿ ಜಿಲ್ಲೆಯ ಕಮಲಾಪುರ, ಮಹಾಗಾಂವ ಮೂಲಕ ಬೆಂಗಳೂರಿಗೆ ಹೊಸ ರೈಲು ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಸಂಸದರ ನೇತೃತ್ವದಲ್ಲಿ ನಿಯೋಗ ತೆರಳಿ ಮನವಿ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT