ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಇತರೆ ವಲಯಗಳಿಗೂ ಕೆಕೆಆರ್‌ಡಿಬಿ ಅನುದಾನ

ಪ್ರಸ್ತಾವ ಸಲ್ಲಿಸಲು ಸೂಚನೆ ನೀಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ
Last Updated 31 ಮಾರ್ಚ್ 2021, 4:45 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಈಗಾಗಲೇ ಅನುದಾನ ನೀಡುತ್ತಿರುವ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲದೆ ಇತರೆ ಹೊಸವಲಯಗಳಿಗೂ ಅನುದಾನ ನಿಗದಿ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮಂಡಳಿಯು ಅನೇಕ ವರ್ಷಗಳಿಂದ ಶಾಲಾ, ಕಾಲೇಜು, ಗ್ರಂಥಾಲಯ, ಪಿ.ಎಚ್.ಸಿ, ಸಿ.ಎಚ್.ಸಿ, ತಾಲ್ಲೂಕು ಆಸ್ಪತ್ರೆ, ಸಿಸಿ ರಸ್ತೆ, ಸೇತುವೆ ನಿರ್ಮಾಣ, ಕುಡಿಯುವ ನೀರು, ಕೆರೆಗಳ ನಿರ್ಮಾಣ ಸೇರಿದಂತೆ ಸಾಮಾಜಿಕ ಮತ್ತು ಸಾಮಾಜಿಕೇತರ ಕ್ಷೇತ್ರಗಳಿಗೆ ಹಣ ಮೀಸಲಿರಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಹೊಂದಬೇಕಾದರೆ ಇವುಗಳನ್ನು ಹೊರತುಪಡಿಸಿ ಬೇರೆ ವಲಯಗಳಿಗೂ ಅನುದಾನ ನಿಗದಿ ಮಾಡಬೇಕು’ ಎಂದು ಅವರು ಹೇಳಿದರು.

‘ಮಂಡಳಿ ವ್ಯಾಪ್ತಿಯ ಕೆಲ ಶಾಸಕರು ಕೂಡ ಇತರೆ ವಲಯಗಳಿಗೂ ಅನುದಾನ ನೀಡಬೇಕು ಎಂದು ಕೋರಿದ್ದಾರೆ’ ಎಂದರು.

ಮಂಡಳಿಯ ಕಾರ್ಯದರ್ಶಿ ಎನ್.ವಿ. ಪ್ರಸಾದ್‌ ಮಾತನಾಡಿ, ‘ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಮುಂತಾದ ವಲಯಗಳಿಗೂ ಅನುದಾನ ನಿಗದಿ ಮಾಡಬೇಕು. ಪ್ರಮುಖವಾಗಿ ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್‍ಗಳ ಕೊರತೆ ಇದೆ. ಈ ಭಾಗದಲ್ಲಿ 5 ಕೋಲ್ಡ್ ಸ್ಟೋರೇಜ್‍ಗಳಿದ್ದು, ಜಿಲ್ಲೆಯಲ್ಲಿ ಎರಡು ಮಾತ್ರ ಇವೆ. ಮುಂದಿನ ದಿನಗಳಲ್ಲಿ ಕಲಬುರ್ಗಿ ವಿಮಾನ ನಿಲ್ದಾಣದಿಂದ ವಿದೇಶಗಳಿಗೆ ಕಾರ್ಗೊ ವಿಮಾನಯಾನ (ಸರಕು ಸಾಗಾಣೆ ವಿಮಾನ) ಶುರುವಾಗಲಿದ್ದು, ಕೋಲ್ಡ್ ಸ್ಟೋರೇಜ್‍ಗಳನ್ನು ನಿರ್ಮಿಸುವ ಅಗತ್ಯವಿದೆ. ಅಳಂದದಲ್ಲಿ ಬೆಳೆಯುವ ದಾಳಿಂಬೆ, ದ್ರಾಕ್ಷಿ ಸೇರಿದಂತೆ ಜಿಲ್ಲೆಯಲ್ಲಿ ಬೆಳೆಯುವ ಹಣ್ಣು– ಹಂಪಲುಗಳನ್ನು ರಪ್ತು ಮಾಡಲು ಅವಕಾಶ ಸಿಗಲಿದೆ’ ಎಂದರು.

‘ಮಂಡಳಿಯ ಮೈಕ್ರೋ– ಮ್ಯಾಕ್ರೋ ಯೋಜನೆ ಅಡಿಯಲ್ಲಿ ಕಲಬುರ್ಗಿ ವಿಮಾನ ನಿಲ್ದಾಣ, ಜಯದೇವ ಹೃದ್ರೋಗ ಆಸ್ಪತ್ರೆಯಂತಹ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಈ ಭಾಗದ ಇತರೆ ಜಿಲ್ಲೆಗಳಲ್ಲೂ ₹ 100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಬೃಹತ್ ಕಾಮಗಾರಿಗಳ ನಡೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ’ ಎಂದರು.

ಮಂಡಳಿ ಜಂಟಿ ನಿರ್ದೇಶಕಿ ಪ್ರವೀಣಪ್ರಿಯಾ ಡೇವಿಡ್ ಹಾಗೂ ಮಂಡಳಿಯ ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT