ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಡಿಬಿ: ₹200 ಕೋಟಿ ಮಾತ್ರ ಖರ್ಚು

ಕಮಲಾಪುರ: ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ
Last Updated 7 ಫೆಬ್ರುವರಿ 2023, 4:48 IST
ಅಕ್ಷರ ಗಾತ್ರ

ಕಮಲಾಪುರ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹ 3 ಸಾವಿರ ಕೋಟಿ ಅನುದಾನ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಅದರಲ್ಲಿ ಖರ್ಚಾಗಿದ್ದು ಬರೀ ₹ 213 ಕೋಟಿ. ಉಳಿದ ಶೇ 93 ಅನುದಾನ ನಿರರ್ಥಕವಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿಮ್ಮ ಅನುದಾನವು ಘೋಷಣೆಗೆ ಮಾತ್ರ ಸೀಮಿತ. ಈವರೆಗಿನ ಮಾಹಿತಿ ಪ್ರಕಾರ, ಕೆಕೆಆರ್‌ಡಿಬಿ ಅನುದಾನದಲ್ಲಿ ಶೇ 7.1 ರಷ್ಟು ಹಣ ಮಾತ್ರ ಖರ್ಚಾಗಿದೆ. ಉಳಿದ ಶೇ 93 ರಷ್ಟು ಅನುದಾನ ಬಳಕೆಗೆ ಕ್ರಿಯಾಯೋಜನೆ ಸಿದ್ಧವಾಗಿಲ್ಲ’ ಎಂದರು.

‘ಚುನಾವಣೆಗೆ ಮುನ್ನ ನೀಡಿದ್ದ 600 ಭರವಸೆಗಳಲ್ಲಿ 40 ರಿಂದ 50 ಭರವಸೆಗಳು ಈಡೇರಿವೆ. ತಾಂಡಾ ಕಂದಾಯ ಗ್ರಾಮಗಳನ್ನಾಗಿಸಿ, ವಾಸಿಸುವವನೇ ಮನೆ ಒಡೆಯ, ಸೇವಾಲಾಲ್‌ ಜಯಂತಿ ಆಚರಣೆ, ಸೊರಗೊಂಡಕೊಪ್ಪ ಅಭಿವೃದ್ಧಿಗೆ
₹ 100 ಕೋಟಿ, ಲಂಬಾಣಿ ಅಭಿವೃದ್ಧಿ ನಿಗಮಕ್ಕೆ ₹ 400 ಕೋಟಿ, ಎಸ್‌ಸಿಪಿ, ಟಿಎಸ್‌ಪಿ ಕಾಮಗಾರಿಗೆ 5 ವರ್ಷದಲ್ಲಿ ₹ 88 ಸಾವಿರ ಕೋಟಿ ಅನುದಾನ, ಗುತ್ತಿಗೆದಾರರಿಗೆ ಮೀಸಲಾತಿ, ರೈತರ ₹ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ’ ಎಂದು ಅವರು ಹೇಳಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ₹ 2 ಸಾವಿರ, ಉಚಿತ 200 ಯುನಿಟ್‌ ವಿದ್ಯುತ್‌, 10 ಕೆಜಿ ಪಡಿತರ ಅಕ್ಕಿ, ಕಲ್ಯಾಣ ಕರ್ನಾಟಕ ಭಾಗದ 36 ಸಾವಿರ ಹುದ್ದೆ ಭರ್ತಿ, ಪ್ರತಿ ಗ್ರಾಮ ಪಂಚಾಯಿತಿಗೆ ವರ್ಷಕ್ಕೆ ₹ 1 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಪ್ರಿಯಾಂಕ್‌ ಖರ್ಗೆ, ಅಜಯಸಿಂಗ್‌, ಜಮೀರ ಅಹಮ್ಮದ್‌, ಡಾ.ಶರಣಪ್ರಕಾಶ ಪಾಟೀಲ, ಮುಖಂಡ ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಬ್ಲಾಕ್‌ ಅಧ್ಯಕ್ಷ ವೈಜನಾಥ ತಡಕಲ್‌, ವಿಜಯಕುಮಾರ ಜಿ.ರಾಮಕೃಷ್ಣ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಾಬು ಹೊನ್ನಾನಾಯಕ, ಕನ್ನಿರಾಮ ರಾಠೋಡ್‌, ರವಿ ಚೌವಾಣ್‌, ತಿಪ್ಪಣಪ್ಪ ಕಮಕನೂರ, ಬಾಬುರಾವ ಚೌವಾಣ್‌, ಸಿ.ಬಿ. ಪಾಟೀಲ ಓಕಳಿ, ಮಲ್ಲಿನಾಥ ಪಾಟೀಲ, ಶರಣಬಸಪ್ಪ ಪಾಟೀಲ, ರಶೀದ ಪಟೇಲ್‌, ಗುರು ಮಾಟೂರ, ರಾಜು ಚಿಂಚೋಳಿ, ಶರಬಸಪ್ಪ ಹಾಗರಗಿ, ಶರಣಗೌಡ ಪಾಟೀಲ, ಆನಂದ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT