ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 300 ಬಸ್‌ ಖರೀದಿಗೆ ಮುಂದಾದ ಕೆಕೆಆರ್‌ಟಿಸಿ

1800 ನೂತನ ಸಿಬ್ಬಂದಿ ನೇಮಕಕ್ಕೆ ಸಿದ್ಧತೆ; ಕಲಬುರಗಿಯಲ್ಲಿ ಸಂಸ್ಥೆಯ ಹೊಸ ಕಟ್ಟಡ
Last Updated 26 ಜನವರಿ 2022, 2:51 IST
ಅಕ್ಷರ ಗಾತ್ರ

ಕಲಬುರಗಿ: ಕೋವಿಡ್‌–19 ಸೋಂಕಿನಿಂದ ಇತ್ತೀಚಿನ ವರ್ಷಗಳಲ್ಲಿ ಹೊಸ ಬಸ್‌ ಖರೀದಿಯನ್ನು ಮುಂದೂಡುತ್ತಲೇ ಬಂದಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೊಸದಾಗಿ 300 ಬಸ್‌ಗಳ ಖರೀದಿಗೆ ಸಿದ್ಧತೆ ನಡೆಸಿದೆ.

ಅಲ್ಲದೇ, 1800 ನೂತನ ಬಸ್‌ ಚಾಲಕ, ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಯ ನೇಮಕಾತಿಗೂ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಪ್ರಸ್ತುತ 4531 ಬಸ್‌ಗಳಿವೆ. 12900 ಚಾಲಕ, ನಿರ್ವಾಹಕರು ಇದ್ದಾರೆ. ಪ್ರತಿ ತಿಂಗಳು ಕೆಲವರು ನಿವೃತ್ತಿ, ಇನ್ನು ಕೆಲವರು ನಿಧನರಾಗಿದ್ದರಿಂದ ಹೊಸದಾಗಿ ಸಿಬ್ಬಂದಿ ನೇಮಕಾತಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಬಸ್‌ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಇದೀಗ ನಿರ್ಬಂಧಗಳು ತೆರವಾಗಿರುವುದರಿಂದ ಮಹಾರಾಷ್ಟ್ರ ಹೊರತುಪಡಿಸಿ ಉಳಿದ ಕಡೆ ಕೆಕೆಆರ್‌ಟಿಸಿಯು ನಿತ್ಯ ಬಸ್‌ ಸಂಚಾರವನ್ನು ನಡೆಸುತ್ತಿದೆ. ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಬಸ್‌ಗಳನ್ನು ಗರಿಷ್ಠ 9 ಲಕ್ಷ ಕಿ.ಮೀ. ಓಡಿಸಬಹುದು. ಅದನ್ನು ಮೀರುತ್ತಿದ್ದಂತೆಯೇ ಗುಜರಿಗೆ ಹಾಕಬೇಕಾಗುತ್ತದೆ. ಹಲವು ಬಸ್‌ಗಳು ಈ ಮಿತಿಯನ್ನು ಮೀರಿದ್ದರಿಂದ ಹೊಸ ಬಸ್‌ಗಳ ಖರೀದಿಗೆ ಸಂಸ್ಥೆಯು ಸಿದ್ಧತೆ ನಡೆಸಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಅಂದಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಇಂದಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ)ಗೆ ಐಷರ್ ಕಂಪನಿಯ ಬಸ್‌ಗಳನ್ನು ಖರೀದಿ ಮಾಡಲಾಗಿತ್ತು. ಇದೀಗ ಹೊಸ ಬಸ್‌ಗಳ ಅವಶ್ಯಕತೆ ಇರುವುದರಿಂದ ಹೊಸ ಬಸ್‌ಗಳ ಖರೀದಿ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದರಿಂದ ಶೀಘ್ರವೇ ಬಸ್‌ ಖರೀದಿಗೆ ಟೆಂಡರ್‌ ಕರೆಯಲಾಗುತ್ತಿದೆ ಎಂದು ರಾಜಕುಮಾರ ಪಾಟೀಲ ತಿಳಿಸಿದರು.

₹ 20 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ: ಕಲಬುರಗಿಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯ ‘ಸಾರಿಗೆ ಸದನ’ದ ಕಟ್ಟಡವು ಹಳೆಯದಾಗಿದ್ದರಿಂದ ಅದನ್ನು ನೆಲಸಮಗೊಳಿಸಿ ಹೊಸದಾಗಿ ₹ 20 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲೂ ತೀರ್ಮಾನಿಸಲಾಗಿದೆ. ಎರಡು ತಿಂಗಳೊಳಗಾಗಿ ಕಾಮಗಾರಿ ಆರಂಭವಾಗಲಿದೆ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT