ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸಡಗರ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

ಮಕ್ಕಳಿಗೆ ರಾಧಾಕೃಷ್ಣರ ವೇಷ ಹಾಕಿ ಸಂಭ್ರಮಿಸಿದ ಪೋಷಕರು
Last Updated 23 ಆಗಸ್ಟ್ 2019, 15:21 IST
ಅಕ್ಷರ ಗಾತ್ರ

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸಡಗರ ಸಂಭ್ರಮದಿಂಚ ಆಚರಿಸಲಾಯಿತು. ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆಯರ ವೇಷ ತೊಡಿಸಿ ಕಣ್ತುಂಬಿಕೊಂಡರು.

ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕೃಷ್ಣನ ಟ್ರೇಡ್‌ಮಾರ್ಕ್‌ ರೂಪವಾದ ನವಿಲಿನ ಗರಿಯನ್ನು ಮಕ್ಕಳ ತಲೆಗೂ ಸಿಕ್ಕಿಸಲಾಗಿತ್ತು. ಶಾಲೆಗಳಲ್ಲಿ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಟಾಣಿಗಳು ಕೃಷ್ಣ, ರಾಧೆಯರ ವೇಷದಲ್ಲಿ ತಮ್ಮ ತಂದೆ–ತಾಯಿಯೊಂದಿಗೆ ಶಾಲೆಗಳಿಗೆ ತೆರಳುತ್ತಿದ್ದರೆ ದಾರಿಹೋಕರು ಅವರನ್ನೇ ತದೇಕಚಿತ್ತದಿಂದ ನೋಡುತ್ತಿದ್ದರು.

ಜಿಲ್ಲಾಡಳಿತ: ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಯಾದವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಉದನೂ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಜಯಂತಿಯ ಹಣ ಪ್ರವಾಹ ಸಂತ್ರಸ್ತರಿಗೆ: ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತಿಗಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡುವ ಹಣವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಲು ಜಿಲ್ಲಾ ಯಾದವ ಸಮಾಜವು ನಿರ್ಣಯ ಕೈಗೊಂಡಿದ್ದರಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾ ಯಾದವ ಸಮಾಜದ ಕಾರ್ಯದರ್ಶಿ ಕಲ್ಲಪ್ಪ ಯಾದವ, ವಾಸುದೇವ ಯಾದವ, ಶ್ರೀಮಂತ ಗಂಗಲ್, ಆರ್.ಆರ್. ಯಾದವ, ಶಿವಶರಣ ಯಾದವ, ಲಕ್ಷ್ಮಿಕಾಂತ ಇದ್ದರು.

ಕೃಷ್ಣಮಂದಿರದಲ್ಲಿ ಪೂಜೆ: ವಿದ್ಯಾನಗರದ ಕೃಷ್ಣಮಂದಿರದಲ್ಲಿ 50ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ನಿಮಿತ್ತ ಜ್ಞಾನ ಸತ್ರ, ವಿಶೇಷ ಪೂಜೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.ಗುರುರಾಜಾಚಾರ್ಯ ಅದ್ವೈತ ಅವರಿಂದ ಭಾಗವತ ಪ್ರವಚನ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT