ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಸಲು ವಾಡಿ ಪುರಸಭೆ ವಿಫಲ

Last Updated 12 ಏಪ್ರಿಲ್ 2022, 4:04 IST
ಅಕ್ಷರ ಗಾತ್ರ

ವಾಡಿ: ಮಳೆಗಾಲದಲ್ಲಿ ಸುರಿದ ಯಥೇಚ್ಛ ಮಳೆಯಿಂದಾಗಿ ಭೀಮಾ ನದಿಯ ಒಡಲು ಸದ್ಯ ಹಿನ್ನೀರಿನಿಂದ ಭರ್ತಿಯಾಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿ ಕೊಂಡಿಲ್ಲ. ಆದರೆ, ವಾಡಿ ಪಟ್ಟಣದ ನಿವಾಸಿಗಳಿಗೆ ನಿತ್ಯ ನೀರು ಪೂರೈಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.

ನದಿ ತೀರದ ವಾಡಿ, ಕುಂದನೂರು, ಕಡಬೂರು, ಇಂಗಳಗಿ, ಚಾಮನೂರು, ಮಳಗ, ಕೊಲ್ಲುರು ಹಾಗೂ ಸನ್ನತಿ ಗ್ರಾಮಗಳಲ್ಲಿ ಸದ್ಯ ನೀರಿನ ಕೊರತೆ ಕಂಡು ಬಂದಿಲ್ಲ. ಈ ಗ್ರಾಮಗಳಿಗೆ ಸನ್ನತಿ ಬಳಿಯ ಬ್ರಿಡ್ಜ್‌ ಕಂ ಬ್ಯಾರೇಜ್‌ ವರವಾಗಿದೆ. ‌

ಬ್ಯಾರೇಜ್‌ನಲ್ಲಿ ಸಾಕಷ್ಟು ಪ್ರಮಾಣದ ನೀರು ಶೇಖರಣೆಯಾಗಿದ್ದು, ಇದು ಹೀಗೆ ಮುಂದುವರೆದರೆ ಬೇಸಿಗೆಯಲ್ಲಿ ನೀರನ ಅಭಾವ ಕಾಣಿಸದು. ಒಂದು ವೇಳೆ ಬ್ಯಾರೇಜ್ ಗೇಟ್ ತೆಗೆದು ನೀರು ಹೊರಬಿಟ್ಟು ಭೀಮಾ ಒಡಲು ಖಾಲಿಯಾದರೆ ಸುಮಾರು 50 ಸಾವಿರ ಜನಸಂಖ್ಯೆಯ ವಾಡಿ ಪಟ್ಟಣ ಹಾಗೂ 10ಕ್ಕೂ ಅಧಿಕ ಗ್ರಾಮಗಳಲ್ಲಿ ಜಲಸಂಕಷ್ಟ ಎದುರಾಗಲಿದೆ.

ಬೇಸಿಗೆ ಶುರುವಾಗಿ ಒಂದು ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ನೀರು ನಿರ್ವಹಣೆ ಕುರಿತು ಪುರಸಭೆಯು ಪೂರ್ವಭಾವಿ ಸಭೆ ನಡೆಸಿಲ್ಲ. ಈಗಿರುವ ಸಂಗ್ರಹ ನೀರು ಹರಿದು ಹೋದರೆ ಮುಂದೆ ಎದುರಾಗಬಹುದಾದ ಜಲಸಂಕಷ್ಟದ ಬಗ್ಗೆಯೂ ಪುರಸಭೆ ನಿರ್ಲಕ್ಷ್ಯ ವಹಿಸಿದೆ. ಯಾವುದೇ ಕ್ರಿಯಾಯೋಜನೆ ಸಹ ರೂಪಿಸಿಲ್ಲ ಎಂಬುವುದು ಸ್ಥಳೀಯರ
ಆರೋಪ.

ಪಟ್ಟಣಕ್ಕೆ ಸನ್ನತಿಯ ಬ್ಯಾರೇಜ್ ನೀರಿನ ಆಸರೆ ಹಾಗೂ ಸಂಗ್ರಹಣೆಯ ಅವಶ್ಯಕತೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಪುರಸಭೆ ಆಸಕ್ತಿ ತೋರಿಲ್ಲ. ನೀರಿನ ಸಮಸ್ಯೆ ಉದ್ಬವಿಸಿದ ತಕ್ಷಣ ಇಲ್ಲಿನ ಎಸಿಸಿ ಕಾರ್ಖಾನೆಯು ಜಾಕ್‌ವೆಲ್ ಬಳಿ ಸಂಗ್ರಹಿಸಿರುವ ನೀರನ್ನು ಸಾರ್ವಜನಿಕರ ಬಳಕೆಗೆ ಪೂರೈಸುವ ಬಗ್ಗೆ ಮಾತುಕತೆ ನಡೆಸುವುದಾಗಿ ಕಳೆದ ವರ್ಷ ತೀರ್ಮಾನವಾಗಿತ್ತು. ಆದರೆ, ಪುರಸಭೆ ಅಧಿಕಾರಿಗಳು ಕೇವಲ ಸಭೆಗೆ ಸೀಮಿತಗೊಳಿಸಿದ್ದಾರೆ. ಕಾರ್ಖಾನೆಯು ಆಡಳಿತ ಮಂಡಳಿಯ ಜತೆಗೆ ಈ ಬಗ್ಗೆ ಚರ್ಚಿಸಿಲ್ಲ. ಒಂದು ವೇಳೆ ಮಾತುಕತೆ ನಡೆದರೇ ‌ಕೊಳವೆ ಜೋಡಣೆ ಕಾರ್ಯ ಕಳೆದ ವರ್ಷ ಮುಗಿದು, ನೀರಿನ ಲಭ್ಯ ಇರುತ್ತಿತ್ತು ಎಂಬುದು ಸ್ಥಳೀಯರ ಹೇಳಿಕೆ.

ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹದ ಇದೆ. ಆದರೆ, ವಾಡಿ ನಿವಾಸಿಗಳಿಗೆ 4–5 ದಿನಗಳಿಗೆ ಒಮ್ಮೆ ನೀರು ಸರಬರಾಜು ಆಗುತ್ತಿದೆ. ಕೊಳವೆ ಮಾರ್ಗ ದುರಸ್ತಿ ಹೆಸರಲ್ಲಿ ಪುರಸಭೆ ಲಕ್ಷಾಂತರ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಆದರೆ, ಸಮರ್ಪಕ ನೀರು ಪೂರೈಕೆ ಗಗನಕುಸುಮವಾಗಿದೆ. ಪೈಪ್‌ಲೈನ್ ದುರಸ್ತಿಯ ನೆಪದಲ್ಲಿ ವಾರಗಟ್ಟಲೇ ನೀರು ಹರಿಸದೆ ಸಾರ್ವಜನಿಕರ ಆಕ್ರೋಶಕ್ಕೂ ತುತ್ತಾಗಿದೆ. ಟ್ಯಾಂಕರ್ ನೀರನ ವ್ಯವಸ್ಥೆ ಮಾಡುವಲ್ಲಿಯೂ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಆಪಾದನೆ ಇದೆ.

‘ನದಿ ನೀರು ಹರಿಯುವ ತಡೆಗೆ ಪತ್ರ’

ಭೀಮಾ ನದಿಯಲ್ಲಿ ನೀರಿನ ಸಂಗ್ರಹ ಇದ್ದು ಪಟ್ಟಣಕ್ಕೆ ನೀರಿನ ಸಮಸ್ಯೆ ಇಲ್ಲ. ನೀರು ಖಾಲಿಯಾದರೆ ಸಮಸ್ಯೆ ಕಾಣಿಸಿಕೊಳ್ಳಲಿದೆ. ನೀರಿನ ಹರಿಯುವಿಕೆ ತಡೆಯಲು ಯೋಜನಾ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು. 4–5 ದಿನಗಳಲ್ಲಿ ನೀರಿನ ಪೂರ್ವಭಾವಿ ಸಭೆ ಕರೆಯಲಾಗುವುದು. ಪೂರೈಕೆಯ ಸಮಸ್ಯೆ ಕಂಡುಬಂದಲ್ಲಿ ಎಸಿಸಿ ಕಾರ್ಖಾನೆಯು ತನ್ನ ಸಂಗ್ರಹದಲ್ಲಿನ ನೀರು ಬಿಟ್ಟುಕೊಡಲು ಒಪ್ಪಿಗೆ ನೀಡಿದೆ ಎನ್ನುತ್ತಾರೆ ವಾಡಿ ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಸ್ವಾಮಿ.

ಬೇಸಿಗೆ ವೇಳೆ ಪಟ್ಟಣದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳದಂತೆ ಪುರಸಭೆ ಕೂಡಲೇ ಮುಂಜಾಗೃತೆ ಕ್ರಮ ತೆಗೆದುಕೊಳ್ಳಬೇಕು.
–ರಾಜು ಒಡೆಯರ, ಎಐಡಿವೈಒ ಯುವಜನ ಸಂಘಟನೆ ಉಪಾಧ್ಯಕ್ಷ

4–5 ದಿನಕ್ಕೆ ಒಮ್ಮೆ ನೀರು ಪೂರೈಸಲಾಗುತ್ತಿದೆ. ಈ ಹಿಂದೆ ಪೈಪ್ ಲೈನ್ ದುರಸ್ತಿಯ ಹೆಸರಲ್ಲಿ ವಾರಗಟ್ಟಲೆ ನೀರು ಹರಿಸಲಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.
–ಮಹಾದೇವಿ ಬಸ್ಸಣ್ಣ, ವಾರ್ಡ್ ಸಂಖ್ಯೆ 15ರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT