ಭಾನುವಾರ, ಸೆಪ್ಟೆಂಬರ್ 15, 2019
27 °C

ತೆಲಂಗಾಣದಲ್ಲಿ ಕಲಬುರ್ಗಿ ಮಹಿಳೆ ಕೊಲೆ

Published:
Updated:

ಕಲಬುರ್ಗಿ: ನಗರದಿಂದ ಈಚೆಗೆ ಕಾಣೆಯಾಗಿದ್ದ ಯುವತಿಯೊಬ್ಬಳು ನೆರೆಯ ತೆಲಂಗಾಣದ ರಾಜ್ಯದ ಪರಗಿ ಪಟ್ಟಣದ ಬಳಿ ಶವವಾಗಿ ಪತ್ತೆಯಾಗಿದ್ದಾಳೆ.

ಇಲ್ಲಿನ ಕುವೆಂಪು ನಗರದ ನಿವಾಸಿ ಶಿಬಾ ಜಯಪ್ರಭು (22) ಎಂಬುವರೇ ಕೊಲೆಯಾಗಿರುವ ಯುವತಿ. ಸೆ 3ರಂದು ಶಿಬಾ ಕಾಣೆಯಾಗಿದ್ದಳು. ಸೆ 6ರಂದು ಮಗಳು ನಾಪತ್ತೆಯಾಗಿರುವ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು. ಈಗ ಆಕೆ ಕೊಲೆಯಾಗಿರುವುದಾಗಿ ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಶಿಬಾಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ಅಲ್ಲಿನ ಅರಣ್ಯ ಪ್ರದೇಶದಲ್ಲಿ ಬಿಸಾಕಿ ಶವಕ್ಕೆ ಬೆಂಕಿ ಹಚ್ಚುವ ಮೂಲಕ ಸಾಕ್ಷಿ ನಾಶಪಡಿಸಲು ಯತ್ನಿಸಿದ್ದಾರೆ. ಈ ಕುರಿತು ತೆಲಂಗಾಣದ ಪರಗಿ ಠಾಣೆಯಲ್ಲಿ ಕೊಲೆ ಮಾಡಿ, ಸಾಕ್ಷಿ ನಾಶಪಡಿಸಲು ಯತ್ನಿಸಲಾಗಿದೆ ಎಂಬ ದೂರು ದಾಖಲಾಗಿದೆ.

ರಾಜಾಪುರದ ಮಹರ್ಷಿ ವಿದ್ಯಾಮಂದಿರ ಬಳಿಯ ರವಿ ಮತ್ತು ಶಿಬಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕೊಲೆ ಯಾರು ಮಾಡಿದ್ದಾರೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ತೆಲಂಗಾಣದಲ್ಲಿ ಶವ ಪತ್ತೆಯಾಗಿದೆ ಎಂಬ ಮಾಹಿತಿಯಂತೆ ಬ್ರಹ್ಮಪುರ ಠಾಣೆಯ ಇನ್‍ಸ್ಪೆಕ್ಟರ್ ಶ್ರೀಮಂತ ಇಲ್ಲಾಳ ಹಾಗೂ ಸಿಬ್ಬಂದಿ ಅಲ್ಲಿಗೆ ಹೋಗಿ ಬಂದಿದ್ದಾರೆ.

Post Comments (+)