ಶುಕ್ರವಾರ, ನವೆಂಬರ್ 22, 2019
20 °C
ಸಹಸ್ರಾರು ಭಕ್ತರು ಭಾಗಿ; ಮುಗಿಲು ಮುಟ್ಟಿದ ಜಯಘೋಷ

ಜೇವರ್ಗಿ: ಮಹಾಲಕ್ಷ್ಮಿ ರಥೋತ್ಸವ

Published:
Updated:
Prajavani

ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಮಹಾಲಕ್ಷ್ಮಿ (ಕಲ್ಕತ್ತದೇವಿ) ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಸಂಭ್ರಮದಿಂದ ಜರುಗಿತು.

ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಸಿದ್ಧ ಜಾತ್ರೋತ್ಸವಗಳಲ್ಲಿ ಒಂದಾದ ಮಹಾಲಕ್ಷ್ಮಿ ದೇವಿಯ 5 ದಿನಗಳ ಜಾತ್ರೆ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ನಿಮಿತ್ತ ಶನಿವಾರ ಬೆಳಗಿನ ಜಾವ 5ಗಂಟೆಯಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡರು. ಮಂಗಳವಾರ ರಾತ್ರಿ 10 ಗಂಟೆಗೆ ಪಟ್ಟಣದ ಬಡಿಗೇರ ಮನೆಯಲ್ಲಿ ಶ್ರೀದೇವಿಯ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡ ಜಾತ್ರಾ ಮಹೋತ್ಸವ ಶನಿವಾರದವರೆಗೆ ಸಂಪ್ರದಾಯದಂತೆ ನಡೆಯಿತು.

ಬೆಳಿಗ್ಗೆ 11 ಗಂಟೆಗೆ ಮಹಾಲಕ್ಷ್ಮಿ (ಕಲ್ಕತ್ತದೇವಿ)ಗೆ ವಿಶೇಷ ಪೂಜೆ ನೆರವೇರಿಸಲಾಯಿತು. ತಹಶೀಲ್ದಾರ್ ಸಿದ್ದರಾಯ ಭೋಸಗಿ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಮಹಾಲಕ್ಷ್ಮಿ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಸಂಜೆ 5 ಗಂಟೆ ವೇಳೆಗೆ ಬುಟ್ನಾಳ ರಸ್ತೆಗೆ ತಲುಪಿತು. ಸಹಸ್ರಾರು ಭಕ್ತರು ರಥದ ಮೇಲೆ ಬಾದಾಮಿ, ಉತ್ತುತ್ತಿ, ಬಾಳೆಹಣ್ಣು ಹಾರಿಸುವ ಮೂಲಕ ಹರಕೆ ತೀರಿಸಿದರು.

ಡೊಳ್ಳಿನ ವಾದ್ಯ, ವಿವಿಧ ಬಾಜಾ, ಬಜಂತ್ರಿಗಳ ಸದ್ದು ರಥೋತ್ಸವದ ಸೊಬಗನ್ನು ಇಮ್ಮಡಿಸಿದ್ದವು. ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದ ಮುಖ್ಯ ರಸ್ತೆಗಳು ಹಾಗೂ ಮಹಾಲಕ್ಷ್ಮಿ ದೇಗುಲವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಜನಸಾಗರ: ರಥೋತ್ಸವದಲ್ಲಿ ಜೇವರ್ಗಿ ಪಟ್ಟಣ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಸಹಸ್ರಾರು ಜನ ಪಾಲ್ಗೊಂಡಿದ್ದರು.

ಅನ್ನ ಸಂತರ್ಪಣೆ: ಜಾತ್ರಾ ಮಹೋತ್ಸವ, ರಥೋತ್ಸವ ನಿಮಿತ್ತ ಮಹಾಲಕ್ಷ್ಮಿ ಜಾತ್ರಾ ಕಮಿಟಿ ಹಾಗೂ ಸದ್ಭಕ್ತ ಮಂಡಳಿ ವತಿಯಿಂದ ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣದ ವರ್ತಕರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಪಟ್ಟಣದ ವಿವಿಧ ಭಾಗಗಳಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಭಕ್ತರ ಬಂಟಿಗ್ಸ್ ಗಳು, ಬ್ಯಾನರ್‌ಗಳು ರಾರಾಜಿಸುತ್ತಿದ್ದವು.

ರಾತ್ರಿ 8 ಗಂಟೆಗೆ ಡೊಳ್ಳಿನ ಪದಗಳು, ಲಾವಣಿ ಪದಗಳ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ನಾಟಕ, ಬಯಲಾಟಗಳ ಪ್ರದರ್ಶನ ನಡೆದವು.

ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಬುರ್ಗಿ ಗ್ರಾಮೀಣ ಡಿವೈಎಸ್‌ಪಿ ಎಸ್ಎಸ್‌ ಹುಲ್ಲೂರ, ಜೇವರ್ಗಿ ಸಿಪಿಐ ರಮೇಶ ರೊಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)