ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಪ್‌ಟಾಪ್‌ ವಿತರಿಸಲು ಒತ್ತಾಯಿಸಿ ಪ್ರತಿಭಟನೆ

ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯಮಟ್ಟದ ಪ್ರತಿಭಟನಾ ದಿನ
Last Updated 19 ಫೆಬ್ರುವರಿ 2020, 11:59 IST
ಅಕ್ಷರ ಗಾತ್ರ

ಕಲಬುರ್ಗಿ:ಸರ್ಕಾರಿ ಕಾಲೇಜುಗಳ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಕೂಡಲೇ ಉಚಿತ ಲ್ಯಾಪ್‍ಟಾಪ್ ವಿತರಿಸಬೇಕೆಂದು ಆಗ್ರಹಿಸಿರಾಜ್ಯವ್ಯಾಪಿ ‘ಪ್ರತಿಭಟನಾ ದಿನ’ದ ಅಂಗವಾಗಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಸರ್ಕಾರ 2019–2020ನೇ ವರ್ಷದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡುತ್ತಿರುವುದು ಶ್ಲಾಘನೀಯ. ಆದರೆ ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ಯೋಜನೆಯ ಫಲ ಸಿಗದೇ ಇರುವುದು ವಿಷಾದನೀಯ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಪದವಿ ಮುಗಿಸಿಕೊಂಡು ಇನ್ನು ಕೇವಲ 2–3 ತಿಂಗಳಲ್ಲಿ ಹೊರ ಹೋಗುತ್ತಾರೆ. ಅವರಿಗೆ ಉಚಿತ ಲ್ಯಾಪ್‍ಟಾಪ್ ನೀಡುವುದರಿಂದ ಅವರು ತಮ್ಮ ಉನ್ನತ ವ್ಯಾಸಾಂಗ ನಡೆಸಲು ಅನುಕೂಲವಾಗುತ್ತದೆ. ತಮ್ಮ ಸರ್ಕಾರದ ಉಚಿತ ಲ್ಯಾಪ್‍ಟಾಪ್ ನೀಡುವ ಯೋಜನೆ ಈ ವಿದ್ಯಾರ್ಥಿಗಳನ್ನು ಒಳಗೊಳ್ಳಬೇಕಾಗಿತ್ತು. ಆದರೆ ಕೇವಲ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡಿ, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನೀಡದಿದ್ದರೆ ಒಂದು ರೀತಿಯ ತಾರತಮ್ಯ ನೀತಿಯಾಗುತ್ತದೆ ಎಂದರು.

‘2016ರ ಸಾಲಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ, ಈಗ ಎರಡು ವರ್ಷಗಳ ನಂತರ ಮತ್ತೆ ರಾಜ್ಯ ಸರ್ಕಾರ ಲ್ಯಾಪ್‍ಟಾಪ್ ವಿತರಣೆಯ ಬಗ್ಗೆ ಪ್ರಸ್ತಾಪ ಮಾಡಿದೆ. ಹಾಗಾದರೆ ಎರಡು ವರ್ಷಗಳಿಂದ ಉಚಿತ ಲ್ಯಾಪ್‍ಟಾಪ್ ವಿತರಣೆಗಾಗಿ ಮೀಸಲಿಟ್ಟ ಹಣ ಏನಾಯಿತು? ವಿವೇಕಾನಂದ ಜಯಂತಿಯ ದಿನದಂದು ರಾಜ್ಯ ಸರ್ಕಾರ ಒಂದು ಕಾರ್ಯಕ್ರಮವನ್ನು ಆಯೋಜಿಸಿ, ಲ್ಯಾಪ್‍ಟಾಪ್ ವಿತರಣೆಯನ್ನು ನಡೆಸಿತ್ತು. ಆದರೆ, ಎಲ್ಲಾ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡಲು ಸರ್ಕಾರ ವಿಫಲವಾಗಿದೆ. ಹೆಸರಿಗೆ ಮಾತ್ರ ಕೆಲವರಿಗೆ ನೀಡಿ, ಬಹುಪಾಲು ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ಈರಣ್ಣ ಇಸಬಾ, ಜಿಲ್ಲಾ ಸಮಿತಿ ಸದಸ್ಯರಾದ ಪ್ರೀತಿ ದೊಡ್ಡಮನಿ, ಮಂಜುಳಾ, ಸುಷ್ಮಾ, ಪೂಜಾ, ಅಶ್ವಿನಿ, ರೇವಣಸಿದ್ದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT