ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಕಾನೂನು ಚೌಕಟ್ಟಿನಲ್ಲಿ ಸಹಕಾರ ಸಂಘಗಳು ಕೆಲಸ ಮಾಡಲಿ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕಿ ಶಕುಂತಲಾ ಬೆಲ್ದಾಳೆ ಸಲಹೆ
Last Updated 19 ಮಾರ್ಚ್ 2023, 5:39 IST
ಅಕ್ಷರ ಗಾತ್ರ

ಕಲಬುರಗಿ: ‘ಸಹಕಾರ ಸಂಘಗಳು ಕಾಯ್ದೆ, ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕಿ ಶಕುಂತಲಾ ಬೆಲ್ದಾಳೆ ಹೇಳಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ಕಚೇರಿ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಮತ್ತು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪತ್ತಿನ ಸಹಕಾರ ಸಂಘ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸಹಕಾರ ಕ್ಷೇತ್ರದಲ್ಲಿ ಯುವಕರು, ಮಹಿಳೆಯರು ಮುಂದೆ ಬರಬೇಕು. ಹೊಸ ಸಹಕಾರ ಸಂಘಗಳನ್ನು ಕಟ್ಟುವ ಮೂಲಕ ಸಂಘಗಳನ್ನು ಹೆಚ್ಚಿಸಬೇಕು’ ಎಂದು ಅವರು ಸಲಹೆ ನೀಡಿದರು.

ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿ, ‘ಪ್ರಾಮಾಣಿಕ, ನಿಸ್ವಾರ್ಥದಿಂದ ಜನರ ಸೇವೆ ಮಾಡಿದರೆ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಪತ್ತಿನ ಮತ್ತು ನೌಕರರ ಪತ್ತಿನ ಸಹಕಾರ ಸಂಘಗಳು ಜಿಲ್ಲೆಯಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

‘ಸದಸ್ಯರಿಂದ ಅವಶ್ಯಕತೆ ಇರುವ ವಸ್ತುಗಳು ಸಹಕಾರ ಸಂಘಗಳ ಮೂಲಕ ಪೂರೈಸಬೇಕು. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೃಷಿ ಅಭಿವೃದ್ಧಿ ಸಹಕಾರ ಸಂಘದ ಮೂಲಕ ಕೃಷಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ನೀಡುತ್ತಿರುವುದು ಸಂತೋಷದ ವಿಷಯ. ನಮ್ಮ ಜಿಲ್ಲೆಯಲ್ಲಿ ಇಂಥ ಸಹಕಾರ ಸಂಘವನ್ನು ಸ್ಥಾಪಿಸಲು ಮುಂದಾಗಬೇಕು’ ಎಂದು ಅವರು ತಿಳಿಸಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವೀರಾರಡ್ಡಿ ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷೆ ವರಲಕ್ಷ್ಮಿ ಆರ್.ಪಾಟೀಲ, ಸಹಕಾರ ಸಂಘಗಳ ಲೆಕ್ಕ ಪರಿಶೋಧಕ ಶರಣಬಸವ ಮಡೋಳ, ಸಿಬ್ಬಂದಿ ತರಬೇತಿ ಕಾಲೇಜು ಪ್ರಾಂಶುಪಾಲ ಪಿ.ಸಿ. ಗಂಗಾಧರಪ್ಪ, ಎಂ.ಎಂ. ಅಲೀಮ್ ಇದ್ದರು.

ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಜಾ ಆರ್. ಚವ್ಹಾಣ ಪ್ರಾಸ್ತವಿಕ ಮಾತನಾಡಿದರು. ಒಕ್ಕೂಟದ ಶಿಕ್ಷಕಿ ಸುಜಾತಾ ಮಠ ಸ್ವಾಗತಿಸಿದರು. ಇಸ್ಮಾಯಿಲಬಿ ನಿರೂಪಿಸಿದರು. ಒಕ್ಕೂಟದ ವ್ಯವಸ್ಥಾಪಕ ಚಂದ್ರಶೇಖರ ಜಿ. ಹಾವೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT