ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನಣ್ಣ ಜನಿಸಿದ ಮನೆ ಸ್ಮಾರಕವಾಗಲಿ

Last Updated 30 ನವೆಂಬರ್ 2019, 10:30 IST
ಅಕ್ಷರ ಗಾತ್ರ

ಕಲಬುರ್ಗಿ: ಈಚೆಗಷ್ಟೇ ನಿಧನರಾದ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ಅವರ ಹುಟ್ಟೂರು ಶಂಕರವಾಡಿಯಲ್ಲಿರುವ ಅವರ ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಬೇಕು ಮತ್ತು ಅವರ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಸಾಹಿತಿಗಳು ಹಾಗೂ ಅವರ ಶಿಷ್ಯರು ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಇಲ್ಲಿ ಆಯೋಜಿಸಿದ್ದ ‘ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ಅವರಿಗೆ ನುಡಿ– ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕರು,‘ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಅವರ ಹೆಸರಿಡಬೇಕು. ಬದುಕು–ಬರಹ ಕುರಿತು ಗೋಷ್ಠಿಯನ್ನೂ ಆಯೋಜಿಸಬೇಕು’ ಎಂದು ಆಗ್ರಹಿಸಿದರು.

‘ಚೆನ್ನಣ್ಣ ಅವರು ಕಲ್ಯಾಣ ಕರ್ನಾಟಕದ ಹೋರಾಟದ ಶಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಪ್ರಗತಿಪರ ವಿಚಾರಧಾರೆ ತಿಳಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಾನು ಪ್ರತಿಷ್ಠಾನಕ್ಕೆ ₹1 ಲಕ್ಷ ವಂತಿಗೆ ಕೊಡಲು ಸಿದ್ಧ’ ಎಂದು ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ ಹೇಳಿದರು.

ಹಿರಿಯ ಚಿತ್ರಕಲಾವಿದ ವಿ.ಜಿ.ಅಂದಾನಿ ಮಾತನಾಡಿ, ‘ಚೆನ್ನಣ್ಣ ಮುಗ್ಧ ಮನಸ್ಸಿನ ವ್ಯಕ್ತಿಯಾಗಿದ್ದರು. ಯಾದಗಿರಿಯಲ್ಲಿ ಬಯಲಾಟ ಸಂಸ್ಥೆಯನ್ನು ತೆರೆಯುವ ಕನಸು ಅವರದ್ದಾಗಿತ್ತು. ಆದರೆ ಆ ಕನಸು ಈಡೇರಿಲಿಲ್ಲ. ಬಂಡಾಯ ಸಾಹಿತಿಯಾಗಿದ್ದ ಅವರು ಮಾನವತಾವಾದಿಯಾಗಿದ್ದರು’ ಎಂದರು.

ಕನ್ನಡ ನಾಡು ಲೇಖಕರ ಓದುಗರ ಸಂಘದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಮಾತನಾಡಿ, ‘1963ರಿಂದ ಚೆನ್ನಣ್ಣ ಪಿಯುಸಿ ಓದುತ್ತಿರುವಾಗ ನಾನು ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದೆ. ವಿದ್ಯಾರ್ಥಿ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅವರು ಆಗಿನಿಂದಲೇ ನನಗೆ ಪರಿಚಿತರಾಗಿದ್ದರು. ಯಕ್ಷಗಾನ ನೀತಿಯಲ್ಲಿ ಬಯಲಾಟ ಅಭಿವೃದ್ಧಿ ಪ್ರಾಧಿಕಾರ ತೆರೆಯುವ ಪ್ರಸ್ತಾವನೆಯನ್ನು ಅವರು ಮುಂದಿಟ್ಟಿದ್ದರು. ಅವುಗಳ ಪ್ರದರ್ಶನದ ಜವಾಬ್ದಾರಿ ಹೊರುವುದಾಗಿ ತಿಳಿಸಿದ್ದರು’ ಎಂದು ಸ್ಮರಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಎಚ್.ಟಿ.ಪೋತೆ ಮಾತನಾಡಿ, ‘ಚೆನ್ನಣ್ಣ ಅವರಿಗೆ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶವಿತ್ತು. ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗುವ ಎಲ್ಲ ಅರ್ಹತೆಗಳಿದ್ದವು. ಆದರೆ, ಅವರಿಗೆ ರಾಜಕೀಯ ಮಾಡುವುದು ಗೊತ್ತಿರಲಿಲ್ಲ. ಅವರ ಪ್ರಕಟಣೆಯಾಗದ ಕೃತಿಗಳನ್ನು ಪ್ರಕಟಿಸಲು ಸರ್ಕಾರ ಮತ್ತು ಅವರ ಹಿತೈಷಿಗಳು ಮುಂದೆ ಬರಬೇಕು. ಅವರ ಎಲ್ಲ ಕೃತಿಗಳನ್ನು ಅನುವಾದ ಮಾಡುವ ಕಾರ್ಯವಾಗಬೇಕು’ ಎಂದರು.

ಹಿರಿಯ ಪತ್ರಕರ್ತ ಶ್ರೀನಿವಾಸ ಶಿರನೂರಕರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಚಿ.ಸಿ.ಲಿಂಗಣ್ಣ, ಬಾಬುರಾವ್, ಪದ್ಮರಾಜ್ ರಾಸನಗಿ, ವಕೀಲ ಅಪ್ಪಾಸಾಹೇಬ ವಾಲೀಕಾರ,ಪ್ರಾಚಾರ್ಯೆ ಬಸಂತಬಾಯಿ ವಾಲೀಕಾರ ಇದ್ದರು.

ಟ್ರಸ್ಟ್‌ ರಚನೆಗೆ ನಿರ್ಧಾರ

‘ಡಾ.ಚೆನ್ನಣ್ಣ ವಾಲೀಕಾರ ಸ್ಮಾರಕ ಟ್ರಸ್ಟ್‌’ ರಚಿಸುವ ನಿರ್ಧಾರ ಕೈಗೊಳ್ಳಲಾಯಿತು. ಈ ಟ್ರಸ್ಟ್‌ಗೆ ಸಾಹಿತಿ ಸ್ವಾಮಿರಾವ್‌ ಕುಲಕರ್ಣಿ ಮತ್ತು ಸ್ನೇಹಿತರು ₹1 ಲಕ್ಷ, ಬಾಬುರಾವ ಜಮಾದಾರ ಮತ್ತು ಸ್ನೇಹಿತರು ₹1 ಲಕ್ಷ ಹಾಗೂ ನಾನು ₹50 ಸಾವಿರ ವಂತಿಗೆ ನೀಡಲು ನಿರ್ಧರಿಸಿದೆವು. ಒಟ್ಟಾರೆ ₹10 ಲಕ್ಷ ಹಣ ಸಂಗ್ರಹಿಸಿ ಟ್ರಸ್ಟ್‌ಗೆ ಭದ್ರ ಆರ್ಥಿಕ ಬುನಾದಿ ಹಾಕಲು ನಿರ್ಧರಿಸಿದ್ದೇವೆ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT