ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಯುವಜನ ನಾಡು, ನುಡಿಯತ್ತ ಆಸಕ್ತಿ ತೋರಲಿ

ಯುವ ಸಾಹಿತ್ಯ ಸಮ್ಮೇಳನದಲ್ಲಿ ಪೊಲೀಸ್ ಆಯುಕ್ತ ಆರ್. ಚೇತನ್‌ ಸಲಹೆ
Last Updated 12 ಫೆಬ್ರುವರಿ 2023, 4:49 IST
ಅಕ್ಷರ ಗಾತ್ರ

ಕಲಬುರಗಿ: ‘ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡವು ಜನಮನದ ಭಾಷೆಯಾಗಬೇಕು’ ಎಂದು ನಗರ ಪೊಲೀಸ್ ಆಯುಕ್ತ ಆರ್.ಚೇತನ್‌ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ಇಲ್ಲಿನ ಕನ್ನಡ ಭವನದಲ್ಲಿ ಶನಿವಾರ ಪ್ರೊ. ಎಂ.ಬಿ.ಅಂಬಲಗಿ ವೇದಿಕೆಯಡಿ ಆಯೋಜಿಸಿದ್ದ ಒಂದು ದಿನದ ಜಿಲ್ಲಾ ಮಟ್ಟದ ಪ್ರಥಮ ಯುವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂಗ್ಲಿಷ್ ಪ್ರಭಾವ ವ್ಯಾಪಿಸುತ್ತಿದ್ದು, ಇಂದಿನ ದಿನಗಳಲ್ಲಿ ಎಲ್ಲರೂ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಿದೆ. ಕನ್ನಡ ಬಳಸಿದರೆ ಎಲ್ಲಿ ನಮ್ಮ ಘನತೆಗೆ ಕುತ್ತು ಬರುವುದೋ ಎಂಬ ಸಂಕುಚಿತ ಮನೋಭಾವದಿಂದ ಯುವ ಜನ ಹೊರಬರಬೇಕು’ ಎಂದರು.

‘ಬ್ಲಾಗ್‌, ಸಾಮಾಜಿಕ ಜಾಲತಾಣದಲ್ಲಿಯೂ ಸಣ್ಣ ಸಣ್ಣ ಸಾಹಿತ್ಯ, ಕಥೆ, ಕವನಗಳು ಪ್ರಕಟವಾಗುತ್ತವೆ. ಅವುಗಳನ್ನೂ ಓದಿ, ಮತ್ತೆ ಬರೆಯುವ ಮೂಲಕ ಭಾಷೆ ಉಳಿಸಲು ಕಂಕಣಬದ್ಧರಾಗಬೇಕು. ಅನ್ಯ ಭಾಷೆಗೆ, ಭಾಷಿಕರಿಗೆ ಧಕ್ಕೆಯಾಗದ ರೀತಿಯಲ್ಲಿ ವರ್ತಿಸಬೇಕು’ ಎಂದರು.

‘ಯುವ ಬರಹಗಾರರು ಸಹ ಸಾಮಾಜಿಕ ಸಮಸ್ಯೆಗಳ ಕುರಿತು ಹೆಚ್ಚು ಹೆಚ್ಚು ಗುಣಾತ್ಮಕ ಕೃತಿಗಳನ್ನು ಹೊರತರುವ ಮೂಲಕ ಜನರಲ್ಲಿ ಓದುವ ಆಸಕ್ತಿಯನ್ನು ಬೆಳೆಸಬೇಕು. ಇದರಿಂದ ಜಾತಿ ಪದ್ಧತಿ, ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಬರಹಗಾರರಿಗೆ ಸಾಮಾಜಿಕ ಬದ್ಧತೆ ಇರಬೇಕು. ಸುತ್ತಮುತ್ತಲಿನ ಸಮಾಜದ ಬಗ್ಗೆ ಕಾಳಜಿ ಹೊಂದಿರಬೇಕು. ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಗುಣವಿರಬೇಕು’ ಎಂದರು.

‘ಕವಿ-ಸಾಹಿತಿಗಳು ಬರವಣಿಗೆಗೆ ಸೀಮಿತವಾಗದೆ ಪ್ರಸ್ತುತ ಸಾಮಾಜಿಕ ಸಮಸ್ಯೆಗಳಿಗೆ ದನಿಯಾಗಬೇಕು. ಇಂದಿನ ಸಮಾಜಕ್ಕೆ ಪೂರಕವಾದುದ್ದನ್ನು ಬರೆದು ಯುವಜನರನ್ನು ಹೊಸ ಬದುಕಿನತ್ತ ಸಾಗುವಂತೆ ಮಾಡಬೇಕು’ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪ ಅವರು ರಚಿಸಿದ ‘ಕವಲೊಡೆದ ದಾರಿ ಮತ್ತು ಬದುಕು’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

‘ನಮ್ಮ ಜಿಲ್ಲೆಗೆ ಬರುವ ಐಎಎಸ್‌, ಐಪಿಎಸ್‌ ಅಧಿಕಾರಿಗಳು ನಮ್ಮ ನಾಡಿನ ಮಾತೃಭಾಷೆಯ ಕಲಿಕೆಗೆ ಆಸಕ್ತಿ ತೋರು ತ್ತಾರೆ. ಆದರೆ, ನಮ್ಮವರೇ ಆದ ಕೆಎಎಸ್‌ ಅಧಿಕಾರಿಗಳು ಕನ್ನಡ ಭಾಷೆಯ ಬಳಕೆ ಯಲ್ಲಿ ಆಸಕ್ತಿ ತೋರುತ್ತಿಲ್ಲ’ ಎಂದರು.

ಡಾ. ಜ್ಯೋತಿ ತೆಗನೂರ, ಚೇತನ ಸೋಮಶೇಖರ ಗೋನಾಯಕ, ರಾಜಶೇಖರ ಚೌಧರಿ, ಜೋತ್ಸ್ನಾ ಹೇರೂರಕರ್‌, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಕುಪೇಂದ್ರ ಬರಗಾಲಿ, ಶರಣಬಸಪ್ಪ ನರೂಣಿ, ವಿಶ್ವನಾಥ ತೊಟ್ನಳ್ಳಿ, ಬಾಬುರಾವ ಪಾಟೀಲ, ವಿನೋದ ಜನವರಿ, ರಾಜೇಂದ್ರ ಮಾಡಬೂಳ ಇದ್ದರು. ನೀಲ ಕಂಠ ಅವಂಟಿ ಸಾಹು ಸ್ವಾಗತಿಸಿದರು. ಲಚ್ಚಪ್ಪ ಜಮಾದಾರ ವಂದಿಸಿದರು.

‘ಹವ್ಯಾಸ ಬದಲಾಯಿಸಿದರೆ ಬದುಕು ಸುಂದರ’

‘ನಮ್ಮ ಹಣೆಬರಹದಲ್ಲಿ ಇದ್ದಂತೆ ನಡೆಯುತ್ತದೆ ಎಂದು ಅಂದುಕೊಂಡರೆ ಬದುಕು ಬದಲಾಗುವುದಿಲ್ಲ. ನಮ್ಮ ಅಭಿರುಚಿ, ಹವ್ಯಾಸಗಳನ್ನು ಗುಣಾತ್ಮಕವಾಗಿ ಬದಲಾಯಿಸಿಕೊಂಡರೆ ಮಾತ್ರ ಬದುಕು ಸುಂದರವಾಗುತ್ತದೆ’ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಹೇಳಿದರು.

ಯುವ ಸಮ್ಮೇಳನದಲ್ಲಿ ನಡೆದ ‘ಹೊಸ ತಲೆಮಾರಿನ ಸಾಹಿತ್ಯ ಸ್ಪಂದನೆ’ ವಿಷಯದ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, ‘ಯುವ ಜನಾಂಗ ಮೊಬೈಲ್ ಬಳಕೆ ಕಡಿಮೆ ಮಾಡಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಆಗ ಬದುಕು ಉತ್ತಮಗೊಳ್ಳುತ್ತದೆ’ ಎಂದರು.

ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು, ‘ಕಲೆ, ಸಾಹಿತ್ಯ– ಬದುಕಿಗೆ ಬಲ ಮತ್ತು ಬೆಲೆ’ ವಿಷಯ ಕುರಿತು ಮಾತನಾಡಿದರು.

ಯುವ ಲೇಖಕ ಮಡಿವಾಳಪ್ಪ ಹೇರೂರ ಅಧ್ಯಕ್ಷತೆ ವಹಿಸಿದ್ದರು. ಧರ್ಮರಾಯ ಜವಳಿ, ಮಲ್ಲಿಕಾರ್ಜುನ ಕುಪನೂರ, ಎಸ್.ಕೆ.ಬಿರಾದಾರ, ಪೂಜಾ ಬಂಕಲಗಿ, ಪ್ರಭು ಫುಲಾರಿ, ಸುರೇಶ ದೇಶಪಾಂಡೆ ಇದ್ದರು.

‘ಬದ್ಧತೆಯ ಕೃತಿ ಹೊರಹೊಮ್ಮಲಿ’

‘ಸೃಜನಾತ್ಮಕ ಚಟುವಟಿಕೆಯೇ ಸಾಹಿತ್ಯ ರಚನೆಯ ಸೂಪ್ತ ಪ್ರಜ್ಞೆ. ಇದು ಸದಾ ಜೀವನ ಅನುಕರಿಸುತ್ತದೆ’ ಎಂದು ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ಡಾ. ಮಲ್ಲಿನಾಥ ತಳವಾರ ಅಭಿಪ್ರಾಯ ವ್ಯಕ್ತಪಡಿಸಿದರು.

‘ಯೌವ್ವನ’ ಎಂಬುದು ನಾಗಾಲೋಟದಲ್ಲಿ ಓಡುತ್ತಿರುತ್ತದೆ. ಇದನ್ನು ನಿಯಂತ್ರಿಸಿ, ಸರಿಯಾದ ಮಾರ್ಗದಲ್ಲಿ ಸಾಗಿಸುವ ಜವಾಬ್ದಾರಿ ಯುವ ಸಾಹಿತಿಗಳಲ್ಲಿದೆ. ಸಾಹಿತ್ಯ ಎಂದರೆ ಬೇರೇನೂ ಅಲ್ಲ. ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ಪ್ರಸ್ತುತಪಡಿಸುವುದೇ ಆಗಿದೆ. ಸಾಹಿತ್ಯ ಅವನತಿ ಆದರೆ ಸಮಾಜದ ಅವನತಿ ಆದಂತೆಯೇ. ಬರೆದಿದ್ದು ಎಲ್ಲವೂ ಸಾಹಿತ್ಯವಾಗದು’ ಎಂದರು.

‘ಇಂತಹ ಯುವ ಸಾಹಿತ್ಯ ಸಮ್ಮೇಳನಗಳು ಯುವಕರಲ್ಲಿ ಓದುವ, ಬರೆಯುವ ಅಭಿರುಚಿಯನ್ನು ಬೆಳೆಸಲು ಪೂರಕವಾಗುತ್ತವೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನ ಗಳಲ್ಲಿ ಭಾಗವಹಿಸಬೇಕು ಎಂದರು.

ಕವನ ವಾಚನ

ಯುವ ಲೇಖಕಿ ಡಾ. ಗೀತಾ ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಯುವ ಕವಿಗೋಷ್ಠಿಯಲ್ಲಿ ಕವಿಗಳಾದ ಶಂಕರಲಿಂಗ ಗುರನಂಜಿ, ಮಾಲಾ ಕಣ್ಣಿ, ಅನುಪಮಾ ಅಪಗುಂಡೆ, ರಾಜಕುಮಾರ ಉದನೂರ, ಆರ್.ಎಚ್.ಪಾಟೀಲ, ಹಣಮಂತರಾವ ಘಂಟೇಕರ್, ರಜನಿಕಾಂತ ಬರೂಡೆ ಸೇರಿ ಹಲವು ಕವಿಗಳು ಕವನ ವಾಚಿಸಿದರು.

ಯುವ ಸಾಹಿತಿ ಡಾ. ರಾಜಶೇಖರ ಮಾಂಗ್ ಆಶಯ ನುಡಿಗಳನ್ನಾಡಿದರು. ವಿಶ್ವನಾಥ ಭಕರೆ, ಸಂತೋಷ ಗಂಗು, ಪ್ರಭಾವತಿ ಮೇತ್ರೆ, ಹಣಮಂತ ಶೇರಿ, ಸಂತೋಷ ಕುಡಳ್ಳಿ, ಸುರೇಶ ಲೇಂಗಟಿ ಇದ್ದರು. ಗುಂಡಣ್ಣಾ ಡಿಗ್ಗಿ ಹರಸೂರು ಸಮಾರೋಪ ನುಡಿಗಳನ್ನಾಡಿದರು. ಚಂದ್ರಶೇಖರ ಕೌಲಗಾ ಅಧ್ಯಕ್ಷತೆ ವಹಿಸಿದ್ದರು.

ಚಂದ್ರಶೇಖರ ದೊಡ್ಮನಿ, ಡಾ. ಶಿವಶರಣಪ್ಪ ಕೋಡ್ಲಿ, ಡಾ. ಶರಣಬಸಪ್ಪ ವಡ್ಡನಕೇರಿ, ಸಿದ್ಧಾರ್ಥ ಚಿಮ್ಮಾಇದಲಾಯಿ, ರಾಮಶೆಟ್ಟಿ ಕೋಡ್ಲಿ, ಶಾಂಸುಂದರ ಕುಲಕರ್ಣಿ, ಸದಾನಂದ ಪಾಟೀಲ, ಶಿವಶಂಕರ ಬಿರಾದಾರ, ಜಿ.ಜಿ.ವಣಿಕ್ಯಾಳ, ಕೆ.ಎಂ.ವಿಶ್ವನಾಥ ಮರತೂರ, ಶೈಲಜಾ ಪೋಮಾಜಿ, ಶಾಂತಾ ಮಾಲೆರ, ಸಾಗರ ಕಿಚ್ಚ, ಮಲ್ಲಿಕಾರ್ಜುನ ವಣದೆ, ನೀಲಪ್ಪ ಇಟಕಾಲ, ಗಾಯತ್ರಿ ಸುತಾರ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT