ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಮನೆಗಳ ಗೋಡೆ ಕುಸಿತ

ಐಪಿ ಹೊಸಳ್ಳಿ: ಮತ್ತೆ ಲಘು ಕಂಪನ, ಭೂಮಿಯಿಂದ ವಿಚಿತ್ರ ಸದ್ದು,
Last Updated 18 ಸೆಪ್ಟೆಂಬರ್ 2020, 2:58 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಐಪಿ ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಲಘು ಕಂಪನ ಉಂಟಾಗಿದ್ದು, ಭೂಮಿಯಿಂದ ವಿಚಿತ್ರ ಸದ್ದು ಕೇಳಿಬಂದಿದೆ ಎಂದು ಗ್ರಾಮದ ಹಿರಿಯರಾದ ರಸೂಲ್ ಪಟೇಲ್ ತಿಳಿಸಿದ್ದಾರೆ.

ಬೆಳಗಿನ ಜಾವ 2 ಗಂಟೆಯಿಂದ ಮಧ್ಯಾಹ್ನದವರೆಗೆ ಮೂರು ಬಾರಿ ಭೂಮಿಯಿಂದ ವಿಚಿತ್ರವಾದ ಸದ್ದು ಕೇಳಿಸಿದೆ. ಜತೆಗೆ ಭೂಮಿಯೂ ಅದುರಿದೆ. ಇದರಿಂದ ಗ್ರಾಮದಲ್ಲಿ ಐದು ಮನೆಗಳ ಗೋಡೆಗಳು ಭಾಗಶಃ ಉರುಳಿವೆ ಎಂದು ಇದೇ ಗ್ರಾಮದ ಬಸವರಾಜ ಹೊಸಮನಿ ವಿವರಿಸಿದರು.

3– 4 ವರ್ಷಗಳ ಹಿಂದೆಯೂ ಇಲ್ಲಿ ಇದೇ ರೀತಿಯ ಸದ್ದು ಭೂಮಿಯಿಂದ ಕೇಳಿ ಬರುತ್ತಿತ್ತು. ಆಗ ತಾತ್ಕಾಲಿಕ ಶೆಡ್ ನಿರ್ಮಾಣ ಕೈಗೆತ್ತಿಕೊಳ್ಳಲಾಯಿತು. ಆದರೆ 40 ಮನೆಗಳ ಮುಂದೆ ಮಾತ್ರ ಶೆಡ್ ನಿರ್ಮಿಸಿದರು. ಉಳಿದವರಿಗೆ ಈವರೆಗೂ ಶೆಡ್ ನಿರ್ಮಿಸಿಕೊಟ್ಟಿಲ್ಲ ಎಂದು ಗ್ರಾಮದ ಯುವ ಮುಖಂಡ ನವಾಜ್ ಪಟೇಲ್ ತಿಳಿಸಿದರು.

‘ನಾವು ಈಗ ಆತಂಕದಲ್ಲಿದ್ದೇವೆ. ಬೆಳಿಗ್ಗೆಯೇ ಅಧಿಕಾರಿಗಳಿಗೆ ಮಾಹಿತಿ ಕೊಟ್ಟರೂ ಯಾವ ಅಧಿಕಾರಿಗಳು ಗ್ರಾಮಕ್ಕೆ ಬಂದಿಲ್ಲ’ ಎಂದು ಗ್ರಾಮಸ್ಥರು ಇದೇ ಸಂದರ್ಭದಲ್ಲಿ ದೂರಿದರು.

ಭೂಕಂಪ ಮಾಪನ ಕೇಂದ್ರ ತೆರೆಯಲು ಒತ್ತಾಯ: ಗ್ರಾಮದಲ್ಲಿ ಪದೇ ಪದೇ ಲಘು ಕಂಪನ ಮತ್ತು ಭೂಮಿಯಿಂದ ವಿಚಿತ್ರ ಸದ್ದು ಬರುತ್ತಿರುವುದರಿಂದ ಜನರು ಭೀತಿಗೆ ಒಳಗಾಗಿದ್ದಾರೆ. ಅವರಿಗೆ ಧೈರ್ಯ ತುಂಬಲು ಸರ್ಕಾರ ತಕ್ಷಣ ಗ್ರಾಮದಲ್ಲಿ ತಾತ್ಕಾಲಿಕ ಭೂಕಂಪ ಮಾಪನ ಕೇಂದ್ರ ಸ್ಥಾಪಿಸಿ ಸಿಸ್ಮೊಮೀಟರ್ ಅಳವಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ಒತ್ತಾಯಿಸಿದರು.

ಲಘು ಕಂಪನದಿಂದ ಮನೆಗಳ ಗೋಡೆ ಉರುಳಿದ್ದನ್ನು ವೀಕ್ಷಿಸಿದ ಕಾಂಗ್ರೆಸ್‌ ಮುಖಂಡರು ನಿವಾಸಿಗಳಿಗೆ ಧೈರ್ಯ ಹೇಳಿದರು. ಮನೆಗಳು ಉರುಳಿದ ಬಗ್ಗೆ ತಹಶೀಲ್ದಾರರಿಗೆ ಚಿತ್ರ ಸಹಿತ ಅರ್ಜಿ ಸಲ್ಲಿಸಲು ತಿಳಿಸಿದರು.

ಮುಖಂಡರಾದ ಗೋಪಾಲರಾವ್ ಕಟ್ಟಿಮನಿ, ರಾಮಶೆಟ್ಟಿ ಪವಾರ, ಆರ್. ಗಣಪತರಾವ್, ಡಾ. ತುಕಾರಾಮ ಪವಾರ, ಅಮರೇಶ ಗೋಣಿ, ಸಂತೋಷ ಗುತ್ತೇದಾರ ಗ್ರಾಮದ ವೀರೇಂದ್ರ ರಾಜಾಪುರ, ರಾಜಶೇಖರ ಪಾಟೀಲ, ಗುಂಡಪ್ಪ ಬೋಯಿನ್, ದೇವೇಂದ್ರಪ್ಪ ಹೊಸಮನಿ, ಶರಣ್ಪ ಕರಣಿಕರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂಡಪ್ಪ ಧನ್ನಿ ಇದ್ದರು.

ಸುಲೇಪೇಟ-ದಸ್ತಾಪುರ: ಸುಲೇಪೇಟ ಗ್ರಾಮದಲ್ಲಿ ಬೆಳಿಗ್ಗೆ 6.50ಕ್ಕೆ ಲಘು ಕಂಪನದ ಅನುಭವವಾಗಿದೆ.

‘ನಾನು ಮಂಚದ ಮೇಲೆ ಕುಳಿತುಕೊಂಡಿದ್ದು ಭೂಮಿ ಅದುರಿದ ಅನುಭವವಾಯಿತು’ ಎಂದು ಸುಲೇಪೇಟದ ವರ್ತಕರ ಮುಖಂಡರಾದ ಮಹಾರುದ್ರಪ್ಪ ದೇಸಾಯಿ ತಿಳಿಸಿದರು.

‘ದಸ್ತಾಪುರದಲ್ಲಿಯೂ ಮೂರು ಬಾರಿ ಸದ್ದು ಕೇಳಿ ಬಂದಿದೆ. ನಾವು ಆತಂಕದಲ್ಲಿಯೇ ಇದ್ದೇವೆ’ ಎಂದು ದಸ್ತಾಪುರದ ಮಾಜೀದ್ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT