ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿ: ಕಲ್ಯಾಣಕ್ಕೆ ಮತ್ತೆ ಸುಣ್ಣ

ಕಲಬುರಗಿ ಕೋಟಾದಲ್ಲಿ ಬೆಳಗಾವಿಯ ಸಾಹಿತಿ ಮರಾಠೆಗೆ ಪ್ರಶಸ್ತಿ ಘೋಷಿಸಿದ್ದಕ್ಕೆ ಆಕ್ಷೇಪ
Last Updated 1 ನವೆಂಬರ್ 2022, 7:24 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರ ನೀಡುವ ಪ್ರಮುಖ ಪ್ರಶಸ್ತಿಗಳ ಪೈಕಿ ಒಂದಾದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕಡಿಮೆ ಪ್ರಾತಿನಿಧ್ಯ ದೊರೆತಿದ್ದು ಜಿಲ್ಲೆಯ ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರಲ್ಲಿ ಬೇಸರ ಮೂಡಿಸಿದೆ.

ಕಲಬುರಗಿ ಜಿಲ್ಲೆಯ ಕೋಟಾದಡಿ ಬೆಳಗಾವಿ ಜಿಲ್ಲೆಯ ರಾಮಕೃಷ್ಣ ಮರಾಠೆ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ರಂಗಭೂಮಿ ಕ್ಷೇತ್ರದಡಿ ಕಲಬುರಗಿ ಜಿಲ್ಲೆಯ ಗುರುನಾಥ ಹೂಗಾರ ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆಯಲಿರುವ ಮರಾಠೆ ಅವರಿಗೆ ಕಲಬುರಗಿ ಜಿಲ್ಲೆಯಿಂದ ಏಕೆ ಕೊಡಬೇಕಿತ್ತು? ಬೆಳಗಾವಿಯಲ್ಲಿ ದಶಕಗಳಿಂದ ಇರುವ ಅವರಿಗೂ ಕಲಬುರಗಿಗೂ ಏನು ಸಂಬಂಧ’ ಎಂದು ಸಾಹಿತಿಗಳು ಪ್ರಶ್ನಿಸಿದ್ದಾರೆ.

‘ಕೊಪ್ಪಳ ಜಿಲ್ಲೆಯ ಇಬ್ಬರು, ರಾಯಚೂರು, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ತಲಾ ಒಬ್ಬರಿಗೆ ಮಾತ್ರ ಪ್ರಶಸ್ತಿ ಘೋಷಿಸಿದೆ. ಸರ್ಕಾರ ಹಾಗೂ ಆಯ್ಕೆ ಸಮಿತಿಯು ಕಲ್ಯಾಣ ಕರ್ನಾಟಕಕ್ಕೆ ನಿರೀಕ್ಷಿತ ಆದ್ಯತೆ ನೀಡಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

‘ಸರ್ಕಾರ ನೀಡುವ ಪ್ರಶಸ್ತಿಗೆ ಅದರದ್ದೇ ಆದ ಘನತೆ ಇದೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಕಲಾ ಪ್ರಕಾರದಲ್ಲಿ ಸಮಾನ ಪ್ರಾತಿನಿಧ್ಯ ನೀಡಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ, ಈ ಬಾರಿ ಅಸಮಾನತೆ ಹೆಚ್ಚು ಕಾಣಿಸುತ್ತಿದೆ. ಮೊದಲೇ ಕಲ್ಯಾಣ ಕರ್ನಾಟಕವು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ. ಆದರೆ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಭಾರಿ ಶ್ರೀಮಂತ ಇತಿಹಾಸ ಹೊಂದಿದೆ. ಆದರೂ, ಅಗತ್ಯ ಪ್ರಾತಿನಿಧ್ಯ ಸಿಗದಿರುವುದು ವಿಷಾದನೀಯ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಪ್ರೊ. ವಿಕ್ರಮ ವಿಸಾಜಿ ತಿಳಿಸಿದರು.

‘ಕಲ್ಯಾಣ ಕರ್ನಾಟಕ ಭಾಗದಿಂದ ಹಲವು ಅರ್ಜಿ ಸಲ್ಲಿಕೆಯಾಗಿದ್ದವು. ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಉಪ ಸಮಿತಿಯು ಕಲಬುರಗಿ ಜಿಲ್ಲೆಯ ಇಬ್ಬರು ಗಣ್ಯರಿಗೆ ಪ್ರಶಸ್ತಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಗೆ ಶಿಫಾರಸನ್ನೂ ಮಾಡಿತ್ತು. ಆದರೆ, ಕೊನೆಗಳಿಗೆಯಲ್ಲಿ ಪ್ರಶಸ್ತಿಯಿಂದ ಕೈಬಿಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕಿತ್ತೂರು ಕರ್ನಾಟಕದ ಬೆಳಗಾವಿ ಜಿಲ್ಲೆಯ ನಾಲ್ವರಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಬೆಂಗಳೂರು ಬಳಿಕ ಅತಿ ಹೆಚ್ಚು ಪ್ರಶಸ್ತಿ ಪಾತ್ರವಾದ ಜಿಲ್ಲೆಯಾಗಿದೆ. ರಾಮಕೃಷ್ಣ ಮರಾಠೆಯವರನ್ನೂ ಸೇರಿಸಿದರೆ ಆ ಜಿಲ್ಲೆಯ ಐವರಿಗೆ ಪ್ರಶಸ್ತಿ ಸಿಕ್ಕಂತಾಗುತ್ತದೆ.

‘ಮರಾಠೆ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿಯವರು. ಅವರನ್ನು ಬೇಕಿದ್ದರೆ ವಿಜಯಪುರ ಕೋಟಾದಲ್ಲಿ ಸೇರಿಸಬೇಕಿತ್ತು. ಅದನ್ನು ಬಿಟ್ಟು ಕಲಬುರಗಿ ಜಿಲ್ಲೆಯವರು ಎಂದು ಗುರುತಿಸಿದ್ದು ಎಷ್ಟು ಸರಿ’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಪ್ರಶ್ನಿಸಿದರು.

ಟ್ರಸ್ಟ್‌ ರಚನೆಯಲ್ಲೂ ಸಿಗದ ಪ್ರಾತಿನಿಧ್ಯ

ರಾಜ್ಯ ಸರ್ಕಾರವು ವಿವಿಧ ಗಣ್ಯರ ಹೆಸರಿನಲ್ಲಿ ರಚಿಸಿರುವ ಸಾಂಸ್ಕೃತಿಕ ಟ್ರಸ್ಟ್‌ನಲ್ಲೂ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ಸಿಕ್ಕಿಲ್ಲ. ಧಾರವಾಡ, ಬೆಳಗಾವಿ, ಹಾವೇರಿ, ಬೆಂಗಳೂರು, ಮೈಸೂರಿನಲ್ಲಿ ಹೆಚ್ಚು ಟ್ರಸ್ಟ್‌ಗಳಿವೆ. ಆದರೆ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳದಲ್ಲಿ ಸರ್ಕಾರಿ ಟ್ರಸ್ಟ್‌ಗಳೇ ಇಲ್ಲ.

ಡಾ.ಎಸ್‌.ಎಂ. ಪಂಡಿತ್, ಪಂ. ಸಿದ್ದರಾಮ ಜಂಬಲದಿನ್ನಿ, ಪಂ. ತಾರಾನಾಥ, ಶಾಂತರಸ ಹೆಂಬೆರಾಳು, ಸಿದ್ದಯ್ಯ ಪುರಾಣಿಕ, ಅಳವಂಡಿ ಶಿವಮೂರ್ತಿಸ್ವಾಮಿ, ಜೋಳದರಾಶಿ ದೊಡ್ಡನಗೌಡ, ಸುಭದ್ರಮ್ಮ ಮನ್ಸೂರ್, ಚನ್ನಣ್ಣ ವಾಲೀಕಾರ, ಡಾ.ಗೀತಾ ನಾಗಭೂಷಣ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು ಎಂಬ ಬೇಡಿಕೆ ಇದೆ.

ಒಟ್ಟಾರೆ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಗಮನಿಸಿದರೆ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಆ ಮೂಲಕ ಸರ್ಕಾರ ಈ ಭಾಗಕ್ಕಿರುವ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದೆ

ಪ್ರೊ.ಎಚ್‌.ಟಿ. ಪೋತೆ

ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ, ಗುವಿವಿ

ಕಲ್ಯಾಣ ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಬಾರದಿರುವುದು ಈ ಭಾಗದ ಜನಪ್ರತಿನಿಧಿಗಳು, ಶಾಸಕರಿಗೆ ಆದ ಅವಮಾನ. ತಮ್ಮ ಜಿಲ್ಲೆಯ ಸಾಧಕರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತದ ಅವರ ನಿರಾಸಕ್ತಿ ಖಂಡನೀಯ

ಡಾ.ಮೀನಾಕ್ಷಿ ಬಾಳಿ

ಲೇಖಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT