ಶುಕ್ರವಾರ, ಜುಲೈ 30, 2021
23 °C

‘ಅವಘಡ ತಪ್ಪಿಸಲು ವಿದ್ಯುತ್‌ ತಾತ್ಕಾಲಿಕ ಕಡಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಜಿಲ್ಲೆಯಲ್ಲಿ ‍ಪೂರ್ವ ಮುಂಗಾರು ಮಳೆ ಹಾಗೂ ಬಿರುಗಾಳಿ ರಭಸವಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಆಗಾಗ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಜನ ಹಾಗೂ ಪ್ರಾಣಿಗಳ ಜೀವರಕ್ಷಣೆ ಮತ್ತು ಬೆಂಕಿ ಅವಘಡಗಳನ್ನು ತ‍ಪ್ಪಿಸಲು ಇದು ಅಗತ್ಯವಾಗಿದೆ. ಜನರು ಸಹಕರಿಸಬೇಕು’ ಎಂದು ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜ ಪಾಟೀಲ ತಿಳಿಸಿದ್ದಾರೆ.

‘ಕಳೆದ ಮೂರು ದಿನಗಳಿಂದ ನಗರ ಹಾಗೂ ಜಿಲ್ಲೆಯ ಎಲ್ಲೆಡೆ ಬಿರುಗಾಳಿ ಹೆಚ್ಚಾಗಿದೆ. ಜತೆಗೆ, ರಾತ್ರಿ ವೇಳೆ ಗಾಳಿಯ ಸಮೇತ ಧಾರಾಕಾರ ಮಳೆ ಸುರಿಯುತ್ತಿದೆ. ಈ ಸಂದರ್ಭದಲ್ಲಿ ಮರಗಳು ಬೀಳುವುದು, ಕೊಂಬೆಗಳು ವಿದ್ಯುತ್‌ ಪ‍್ರೇಷಣ ತಂತಿಗೆ ತಾಗುವುದು, ನೀರಿನಲ್ಲಿ ವಿದ್ಯುತ್‌ ಹರಿಯುದು, ಕಂಬಗಳು ಬೀಳುವುದು ಮುಂತಾದ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಎಲ್ಲಿ ಅನಿವಾರ್ಯವೋ ಅಲ್ಲಿ ಮಾತ್ರ ಕೆಲಕಾಲ ವಿದ್ಯುತ್‌ ತಡೆಯಲಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪೂರ್ವ ಮುಂಗಾರಿನ ಮೊದಲ ಒಂದು ವಾರ ಇದೇ ರೀತಿ ಬಿರುಸಾಗಿರುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾರದ ಬಳಿಕ ಮಳೆ– ಗಾಳಿ ಸಹಜ ಸ್ಥಿತಿಗೆ ಮರಳುತ್ತದೆ. ಹಾಗಾಗಿ, ಸದ್ಯಕ್ಕೆ ಕಡಿತಗೊಳ್ಳುತ್ತಿರುವ ವಿದ್ಯುತ್‌ ತಾತ್ಕಾಲಿಕ ಮಾತ್ರ’ ಎಂದೂ ಅವರು ವಿವರಿಸಿದರು.

ನಗರ ಹಾಗೂ ಜಿಲ್ಲೆಯಲ್ಲಿ ಎಲ್ಲಿಯೇ ಕಂಬ, ಮರ ಬಿದ್ದರೆ, ವಿದ್ಯುತ್‌ ಸಮಸ್ಯೆ ಉಂಟಾದರೆ ಅಥವಾ ದೂರು ಸಲ್ಲಿಸಲು ಗ್ರಾಹಕರು ಟೋಲ್‌ ಫ್ರೀ ಸಂಖ್ಯೆ 1912 ಇದಕ್ಕೆ ಕರೆ ಮಾಡಬಹುದು. ಹೆಚ್ಚಿನ ಮಾಹಿತಿ ಹಾಗೂ ದೂರುಗಳಿಗೆ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ನಗರ ಉಪವಿಭಾಗ–1:9448359023, ಉಪವಿಭಾಗ–2: 9448359028, ಉಪ ವಿಭಾಗ– 3: 9480849099, ಉಪ ವಿಭಾಗ–4: 9480849095 ಸಂಪರ್ಕಿಸಲು ಅವರು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.