ಶನಿವಾರ, ಮಾರ್ಚ್ 6, 2021
24 °C
ಜೇವರ್ಗಿ, ಸೇಡಂ: ಸ್ಪಷ್ಟ ಬಹುಮತದೊಂದಿಗೆ ಅರಳಿದ ಕಮಲ

ಕಲಬುರ್ಗಿ: 1 ನಗರಸಭೆ, 3 ಪುರಸಭೆಯಲ್ಲಿ ಕಾಂಗ್ರೆಸ್‌ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಲಬುರ್ಗಿ: ಶಹಾಬಾದ್ ನಗರಸಭೆ, ಸೇಡಂ, ಚಿತ್ತಾಪುರ, ಆಳಂದ, ಜೇವರ್ಗಿ, ಚಿಂಚೋಳಿ ಮತ್ತು ಅಫಜಲಪುರ ಪುರಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಒಂದು ನಗರಸಭೆ ಹಾಗೂ 3 ಪುರಸಭೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಶಹಾಬಾದ್ ನಗರಸಭೆ, ಚಿತ್ತಾಪುರ, ಅಫಜಲಪುರ, ಚಿಂಚೋಳಿಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಜೇವರ್ಗಿ ಮತ್ತು ಸೇಡಂ ಪುರಸಭೆಗಳಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ.

ಆಳಂದ ಪುರಸಭೆಯ 27 ಸ್ಥಾನಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಂದೇ ಸ್ಥಾನ ಗೆದ್ದಿದ್ದರೂ ಜೆಡಿಎಸ್ ‘ನಿರ್ಣಾಯಕ’ವಾಗಿದೆ.

169 ಸ್ಥಾನಗಳ ಪೈಕಿ 167 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಫಜಲಪುರ ವಾರ್ಡ್ ಸಂಖ್ಯೆ 19ಕ್ಕೆ ಸಲ್ಲಿಕೆಯಾಗಿದ್ದ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ವಾರ್ಡ್‌ ಸಂಖ್ಯೆ 5ರ ಕಾಂಗ್ರೆಸ್ ಅಭ್ಯರ್ಥಿ ಶಹದಾಬೇಗಂ ಅಬ್ದುಲ್ ರವೂಫ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಶಹಾಬಾದ್, ಚಿತ್ತಾಪುರದಲ್ಲಿ ಕಾಂಗ್ರೆಸ್ ಅಮೋಘ ಗೆಲುವು ಸಾಧಿಸಿದೆ. ಶಹಾಬಾದ್‌ನ 27 ಸ್ಥಾನಗಳ ಪೈಕಿ ಕಾಂಗ್ರೆಸ್ 18 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಿಜೆಪಿ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಜೆಡಿಎಸ್ 1 ಹಾಗೂ ಪಕ್ಷೇತರ 3 ಅಭ್ಯರ್ಥಿಗಳು ವಿಜಯದ ಮಾಲೆ ಧರಿಸಿದ್ದಾರೆ. ಚಿತ್ತಾಪುರ ಪುರಸಭೆಯ 23 ಸ್ಥಾನಗಳ ಪೈಕಿ ಕಾಂಗ್ರೆಸ್ 18ರಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿಗೆ 5 ಸ್ಥಾನಗಳಲ್ಲಿ ಮಾತ್ರ ಖಾತೆ ತೆರೆಯಲು ಸಾಧ್ಯವಾಗಿದೆ.

‘ವಿಧಾನಸಭೆ ಚುನಾವಣೆಯಲ್ಲಿ ಆಳಂದ ಪಟ್ಟಣದಲ್ಲಿ ಕಾಂಗ್ರೆಸ್‌ಗೆ 5,500 ಮತಗಳು ಲಭಿಸಿದ್ದವು. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಲಿದೆ’ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಹೇಳಿದ್ದರು. ಆದರೆ, ಅಲ್ಲಿಯ ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿಗೆ ತಲಾ 13 ಸ್ಥಾನಗಳಲ್ಲಿ ಗೆಲುವಿಗೆ ಅವಕಾಶ ಕಲ್ಪಿಸಿ, ನಿರ್ಣಾಯಕ ಪಾತ್ರವನ್ನು ಜೆಡಿಎಸ್‌ ಅಭ್ಯರ್ಥಿಯ ‘ಕೈ’ಗೆ ಕೊಟ್ಟಿದ್ದಾರೆ.

ನೆಲ ಕಚ್ಚಿದ ಕಾಂಗ್ರೆಸ್: ಜೇವರ್ಗಿಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಕಾಂಗ್ರೆಸ್ ಶಾಸಕರಿದ್ದರೂ 23 ಸ್ಥಾನಗಳ ಪೈಕಿ 3ರಲ್ಲಿ ಮಾತ್ರ ಕೈ ಅಭ್ಯರ್ಥಿಗಳಿಗೆ ಗೆಲುವು ಸಾಧಿಸಲು ಸಾಧ್ಯವಾಗಿದೆ. ಆದರೆ, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಈ ಗೆಲುವಿನಲ್ಲಿ ‘ಕಮಲ ಜಾತ್ರೆ’ಯ ಪಾತ್ರವೂ ಅಡಗಿದೆ.

‘ಟಿಕೆಟ್ ಹಂಚಿಕೆ ಗೊಂದಲ, ಲಿಂಗಾಯತ ಮತ್ತು ಮುಸ್ಲಿಮ್ ಧರ್ಮೀಯರಿಗೆ ಮಾತ್ರ ಮಣೆ ಹಾಕಿದ್ದು, ಮೂರೇ ದಿನ ಪ್ರಚಾರ ಮಾಡಿದ್ದು ಕಾಂಗ್ರೆಸ್‌ಗೆ ಮುಳುವಾಗಿದೆ. ಎಲ್ಲಾ ಧರ್ಮದವರಿಗೂ ಟಿಕೆಟ್ ಕೊಟ್ಟು, 8 ದಿನ ಹಗಲು–ರಾತ್ರಿ ಪ್ರಚಾರ ಕೈಗೊಂಡಿದ್ದರಿಂದ ಬಿಜೆಪಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಲೀಕಯ್ಯಗೆ ಮುಖಭಂಗ: ಅಫಜಲಪುರ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ‘ಕೈ’ ಸೋಲಿಸಲು ಹೋಗಿ ತಾವೇ ಸೋತಿದ್ದ ಮಾಲೀಕಯ್ಯ ಗುತ್ತೇದಾರ ಈಗ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ. ಕಾಂಗ್ರೆಸ್ 16 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 5ಕ್ಕೆ ತೃಪ್ತಿಪಟ್ಟುಕೊಂಡಿದೆ. ಕಮಲ ತೆಕ್ಕೆಯಿಂದ ‘ಕೈ’ ಸೇರಿದ್ದ ಎಂ.ವೈ.ಪಾಟೀಲ ಅವರ ‘ಕೈ’ ಇಲ್ಲೂ ಮೇಲಾಗಿದೆ.

ಅರಳಿದ ಕಮಲ: ಸೇಡಂ ಪುರಸಭೆಯಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಕಮಲ ಅರಳಿದೆ. ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರಾಜಕುಮಾರ ಪಾಟೀಲ ತೆಲ್ಕೂರ ಅವರ ‘ಚುನಾವಣೆ ತಂತ್ರಗಾರಿಕೆ’ ಮತ್ತು ‘ಲೆಕ್ಕಾಚಾರ’ಕ್ಕೆ ಮತದಾರರು ಮನಸೋತಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷವನ್ನು ‘ವಿರೋಧ’ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ.

‘ಕೈ’ ಬದಲಾದರೂ ನಷ್ಟವಿಲ್ಲ!

ಈ ಹಿಂದಿನ ಚುನಾವಣೆಯಲ್ಲಿ ಏಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ 4ರಲ್ಲಿ ‘ಕೈ’ ಅಧಿಕಾರದಲ್ಲಿತ್ತು. ಈ ಬಾರಿಯೂ 4 ಕಡೆ ಸ್ಪಷ್ಟಬಹುಮತ ಪಡೆದಿದೆ. ಆದರೆ, ಜೇವರ್ಗಿ ‘ಕೈ’ ತಪ್ಪಿದ್ದು, ಅಫಜಲಪುರ ‘ಕೈ’ ಹಿಡಿದಿದೆ. ಹೀಗಾಗಿ ಕಾಂಗ್ರೆಸ್‌ಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ.

ಸೇಡಂ ಮತ್ತು ಆಳಂದ ಪುರಸಭೆಯಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿ, ಈ ಬಾರಿ ಜೇವರ್ಗಿಯಲ್ಲಿ ‘ಸ್ಪಷ್ಟ ಬಹುಮತ’ದೊಂದಿಗೆ ಅಧಿಕಾರಕ್ಕೆ ಏರಿದೆ. ಆಳಂದನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಶಾಸಕರ ಮತವನ್ನು ಲೆಕ್ಕಕ್ಕೆ ತೆಗೆದುಕೊಂಡರೂ, ಜೆಡಿಎಸ್ ಅಭ್ಯರ್ಥಿಯ ಇಚ್ಛಾ‘ಶಕ್ತಿ’ಯ ಮೇಲೆ ಬಿಜೆಪಿ ಭವಿಷ್ಯ ನಿರ್ಧಾರವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು