ಸೋಮವಾರ, ಜೂನ್ 21, 2021
29 °C
ಲಾಕ್‌ಡೌನ್ ಕಾರಣ ಗ್ರಾಹಕರಿಲ್ಲದೆ ಸಂಕಷ್ಟ, ಕೋವಿಡ್ ಪರಿಹಾರಕ್ಕೆ ಮನವಿ

ಚಮ್ಮಾರರ ಹೊತ್ತಿನ ಊಟಕ್ಕೂ ಕೊಕ್ಕೆ

ಸಿದ್ದರಾಜ ಎಸ್.ಮಲ್ಕಂಡಿ Updated:

ಅಕ್ಷರ ಗಾತ್ರ : | |

Prajavani

ವಾಡಿ: ಲಾಕ್‌ಡೌನ್‌ನಿಂದಾಗಿ ಪಟ್ಟಣದ ಚಮ್ಮಾರರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಪಾದರಕ್ಷೆಗಳಿಗೆ ಹೊಳಪು ನೀಡುತ್ತಿದ್ದ ಅವರಿಗೆ ಈಗ ಗ್ರಾಹಕರಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ.

ಪಟ್ಟಣದ ರೈಲು ನಿಲ್ದಾಣ, ಅಬ್ದುಲ್ ಕಲಾಂ ವೃತ್ತ, ಶ್ರೀನಿವಾಸ ಗುಡಿ ವೃತ್ತದ ಬಳಿ ಗೋಣಿಚೀಲ ಹಾಸಿಕೊಂಡು, ಛತ್ರಿ ಕೆಳಗಡೆ ಕೂತು ಹರಿದ ಶೂ, ಚಪ್ಪಲಿಗಳನ್ನು ಹೊಲೆಯುತ್ತಾ, ಅವುಗ ಳಿಗೆ ಹೊಳಪು ಕೊಡುತ್ತಿದ್ದವರ ಬದುಕು ಕೊರೊನಾದಿಂದಾಗಿ ಕಳೆಗುಂದಿದೆ.

25 ವರ್ಷಗಳಿಂದ ಚಮ್ಮಾರಿಕೆ ವೃತ್ತಿ ಮಾಡುತ್ತಿರುವ ಸ್ಥಳೀಯ ನಿವಾಸಿ ಧರ್ಮಣ್ಣ ನೀಲಗಲ ಅವರ ಕುಟುಂಬ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಆದಾಯವಿಲ್ಲದ ಕಾರಣ ಊಟಕ್ಕೂ ಪರದಾಡುವಂತಾಗಿದೆ.

‘ಚಮ್ಮಾರಿಕೆ ವೃತ್ತಿ ಮೇಲೆ 8 ಮಕ್ಕಳ ಮದುವೆ ಮಾಡಿದ್ದೇನೆ. ಇಂಥ ದುಸ್ಥಿತಿ ಎಂದೂ ಬಂದಿರಲಿಲ್ಲ. ಲಾಕ್‌ಡೌನ್ ಕಾರಣ ಜನರು ಹೊರಗೆ ಬರುತ್ತಿಲ್ಲ. ಇದರಿಂದಾಗಿ ಪಾದರಕ್ಷೆಗಳ ಪಾಲಿಶ, ದುರಸ್ತಿ ಕಾರ್ಯವೂ ನಿಂತಿದೆ. ಕೆಲಸವಿಲ್ಲದೇ ಆದಾಯಕ್ಕೆ ಸಂಪೂರ್ಣ ಕತ್ತರಿ ಬಿದ್ದಿದೆ. ಬದುಕಿಗಾಗಿ ಇದೆ ವೃತ್ತಿಯನ್ನು ಅವಲಂಬಿಸಿದ ನಮ್ಮ ಬದುಕು ಮೂರಾಬಟ್ಟೆಯಾಗುತ್ತಿದೆ’ ಎಂ ದು ಅವರು ಅಳಲು ತೋಡಿಕೊಂಡರು.

‘ದಿನಕ್ಕೆ ₹600ರಿಂದ ₹800 ದುಡಿಯುತ್ತಿದ್ದೇವೆ. ಈಗ ವ್ಯಾಪಾರ ಕಡಿಮೆಯಾಗಿದೆ. ₹100ರಿಂದ ₹200 ಗಳಿಸಿದರೆ ಹೆಚ್ಚು ಎನ್ನುವಂತಾಗಿದೆ. ತೀವ್ರ ಬೆಲೆ ಏರಿಕೆ ನಡುವೆ ಕಡಿಮೆ ಆದಾಯದಲ್ಲಿ ಬದುಕು ನಡೆಸುವುದು ಕಷ್ಟಕರವಾಗಿದೆ. ನಮ್ಮಂಥ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

*ಸರ್ಕಾರ ಕೇವಲ ಲಾಕ್‌ಡೌನ್ ಘೋಷಿಸಿದರೆ ಸಾಲದು. ಬಡವರ ಬದುಕು ಬೀದಿಗೆ ಬೀಳದಂತೆ ನೋಡಿಕೊಳ್ಳುವುದು ಅದರ ಕರ್ತವ್ಯವಾಗಿದೆ. ಚಮ್ಮಾರರು ಸೇರಿದಂತೆ ಎಲ್ಲ ಕಾರ್ಮಿಕರಿಗೂ ಸರ್ಕಾರ ಪರಿಹಾರ ನೀಡಬೇಕು

– ಶರಣು ಹೆರೂರು, ಕಾರ್ಮಿಕ ಮುಖಂಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು