ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | 26 ದಿನಗಳಿಂದ ಶಾಲೆಯಲ್ಲಿಯೇ ವಾಸ !

ಪುಣೆ ಮಾರ್ಗದ ಪಿಪರಿ ಚಿಂಚನಸೂರದಲ್ಲಿ ಸಿಲುಕಿದ ಚಿಂಚೋಳಿಯ ಕಾರ್ಮಿಕರು
Last Updated 22 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಂಚೋಳಿ: ಲಾಕ್‌ಡೌನ್‌ನಿಂದಾಗಿ ಮುಂಬಯಿನಿಂದ ತವರಿಗೆ ಮರಳುತ್ತಿದ್ದ ತಾಲ್ಲೂಕಿನ ವಿವಿಧ ತಾಂಡಾಗಳ 40ಕ್ಕೂ ಹೆಚ್ಚು ಕಾರ್ಮಿಕರು ಪುಣೆ ಮಾರ್ಗದ ಪಿಪರಿ ಚಿಂಚನಸೂರದ ಶಾಲಾ ಕಟ್ಟಡದಲ್ಲಿಯೇ 26 ದಿನಗಳಿಂದ ಬಂಧಿಯಾಗಿದ್ದಾರೆ.

ಮಾರ್ಚ್ 24ರಂದು ಮುಂಬಯಿಯಲ್ಲಿಯೇ ಸಾಮಾನು ಸರಂಜಾಮು ಬಿಟ್ಟು ಕಾಲ್ನಡಿಗೆ ಮೂಲಕ ಸ್ವಗ್ರಾಮದತ್ತ ಹೆಜ್ಜೆ ಹಾಕಲು ಆರಂಭಿಸಿ200 ಕಿ.ಮೀ ಕ್ರಮಿಸಿದ ನಂತರ ಇವರನ್ನು ಪಿಪರಿ ಚಿಂಚನಸೂರದಲ್ಲಿ ಪೊಲೀಸರು ಮುಂದೆ ಹೋಗದಂತೆ ತಡೆದು ಸ್ಥಳೀಯ ಶಾಲೆಯಲ್ಲಿ ಇರಿಸಿದ್ದಾರೆ.

26 ದಿನಗಳಿಂದ ಶಾಲೆಯಲ್ಲಿಯೇ ಬಂಧಿಯಾಗಿರುವ ಇವರು ತಮ್ಮನ್ನು ಸ್ವಗ್ರಾಮಕ್ಕೆ ಕರೆಸಿಕೊಳ್ಳಬೇಕು ಎಂದು ಚಿಂಚೋಳಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಗೋಗರೆಯುತ್ತಿದ್ದಾರೆ.

‘ಮೂವರು ಎದೆ ಹಾಲು ಕುಡಿಯುವ ಪುಟ್ಟ ಕಂದಮ್ಮಗಳು, 10 ಮಕ್ಕಳು ಸೇರಿದಂತೆ ಒಟ್ಟು 49 ಜನರು ಇಲ್ಲಿ ಸಿಲುಕಿದ್ದೇವೆ. 2 ದಿನಗಳಿಂದ ಹಾಲು ಕೊಡುವುದು ಬಂದ್ ಮಾಡಿದ್ದಾರೆ. ದಾನಿಗಳೇ ಚಹಾ ತಂದು ಕೊಡುತ್ತಾರೆ. ಯಾರಾದರೂ ತಂದು ಕೊಟ್ಟರೆ ಕುಡಿಯಬೇಕು, ಇಲ್ಲವಾದರೆ ಇಲ್ಲ’ ಎಂದು ಅಲ್ಲಿನ ಸ್ಥಿತಿಯನ್ನು ಅನಿಲ್ ವಿವರಿಸಿದರು.

‘ಹಾಸಿಗೆ, ಹೊದಿಕೆ ಹಾಗೂ ಊಟದ ತಟ್ಟೆಗಳು ಹೊತ್ತುಕೊಂಡು ನಡೆಯಲು ಆಗುವುದಿಲ್ಲ ಎಂದು ನಾವು ಮುಂಬಯಿಯಲ್ಲಿಯೇ ಬಿಟ್ಟು ಬಂದಿದ್ದೇವೆ. ಇಲ್ಲಿ ಎಲೆಗಳಿಂದ ತಯಾರಿಸಿದ ಪತ್ರೊಳಿಯಲ್ಲಿ ಊಟ ನೀಡುತ್ತಾರೆ. ಬೆಳಿಗ್ಗೆ ಉಪ್ಪಿಟ್ಟು, ಮಧ್ಯಾಹ್ನ 12 ಗಂಟೆಗೆ ಮತ್ತು ರಾತ್ರಿ 9 ಗಂಟೆಗೆ ಊಟ (2 ಚಪಾತಿ, ಅನ್ನ ಸಾರು) ನೀಡುತ್ತಾರೆ. ಮಧ್ಯಾಹ್ನ ಊಟ ಮಾಡಿದ ಎಲೆಗಳ ಪತ್ರೊಳಿ ತೊಳೆದಿಟ್ಟುಕೊಂಡು ಅದರಲ್ಲಿಯೇ ರಾತ್ರಿ ತಿನ್ನಬೇಕಾಗಿದೆ’ ಎಂದು ಖಾನಾಪುರ ಬಳಿಯ ಧರ್ಮು ನಾಯಕ ತಾಂಡಾದ ಅನಿಲ ಪವಾರ್ ಪ್ರಜಾವಾಣಿಗೆ ತಿಳಿಸಿದರು.

‘ಇಲ್ಲಿಗೆ ಬಂದ ಮೇಲೆ ನಮಗೆ ಕಾಯುವುದಕ್ಕೆ ಪೊಲೀಸರನ್ನು ನಿಯೋಜಿಸಿದ್ದಾರೆ. ಮೊದಲ ದಿನವೇ ಎಲ್ಲರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ಯಾರು ಅನಾರೋಗ್ಯಕ್ಕೆ ಒಳಗಾಗಿಲ್ಲ. ಏನಾದರೂ ಮಾಡಿ ನಮ್ಮನ್ನು ನಮ್ಮ ಊರಿಗೆ ಕರೆಯಿಸಿಕೊಳ್ಳಿ. ಈ ಸೆರೆಮನೆವಾಸದಿಂದ ಮುಕ್ತಿ ಕೊಡಿಸಿ ಎಂದರೆ ನಮ್ಮ ಗೋಳು ಯಾರೊಬ್ಬರು ಕೇಳಿಸಿಕೊಳ್ಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇನ್ನೆಷ್ಟು ದಿನ ನಾವು ಈ ಶಿಕ್ಷೆ ಅನುಭವಿಸಬೇಕೆಂದು ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ. ಸ್ವಂತ ಊರಲ್ಲಿ ದುಡಿಯಲು ಕೆಲಸವಿಲ್ಲ ಎಂದು ಮುಂಬಯಿಗೆ ಬಂದೆವು. ಆದರೆ ಈಗ ಇಲ್ಲಿ ಕೆಲಸಗಳು ಬಂದ್ ಆಗಿದ್ದರಿಂದ ಊರಿಗೆ ನಡೆದುಕೊಂಡು ಹೋಗಬೇಕೆಂದರೂ ಬಿಡುತ್ತಿಲ್ಲ. ನಾವು ಮಾಡಿದ ತಪ್ಪಾದರೂ ಏನು ಎಂದು ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT