ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಊಟ ಸಿಗದೇ ಸಾರ್ವಜನಿಕರ ಪರದಾಟ

ಕಠಿಣ ಲಾಕ್‌ಡೌನ್ ಪರಿಣಾಮ; ಹೋಟೆಲ್ ಊಟ ಪಾರ್ಸೆಲ್‌ಗೆ ಅವಕಾಶ ನೀಡಲು ಮನವಿ
Last Updated 28 ಮೇ 2021, 4:50 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿನ ಹೋಟೆಲ್‌ಗಳಲ್ಲಿ ಊಟ ಪಾರ್ಸೆಲ್ ಕೊಂಡೊಯ್ಯಲು ಅವಕಾಶವಿದ್ದರೂ ನಗರದಲ್ಲಿ ಪಾರ್ಸೆಲ್‌ಗೆ ನಿರ್ಬಂಧ ವಿಧಿಸಿದ್ದರಿಂದ ಊಟಕ್ಕಾಗಿ ಹೋಟೆಲ್‌, ದರ್ಶಿನಿಗಳನ್ನೇ ನೆಚ್ಚಿಕೊಂಡ ಸಾವಿರಾರು ಜನರು ಗುರುವಾರ ಪರದಾಡಿದರು.

ಜಿಮ್ಸ್‌ ಹಾಗೂ ಇಎಸ್‌ಐಸಿ ಆಸ್ಪತ್ರೆಗಳ ಬಳಿ ಕೆಲ ರಾಜಕೀಯ ಪಕ್ಷಗಳ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಊಟದ ಪ್ಯಾಕೆಟ್‌ಗಳನ್ನು ಹಂಚುತ್ತಿದ್ದರೂ ಕೆಲವರು ಸರತಿ ಸಾಲಿನಲ್ಲಿ ನಿಂತು ಪಡೆಯಲು ಹಿಂಜರಿದರು. ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ಹೋಟೆಲ್‌ಗಳಿಗೆ ಎಡತಾಕಿದರೂ ಊಟ ಸಿಗಲಿಲ್ಲ. ರಾಜ್ಯ ಸರ್ಕಾರ ನಂದಿನಿ ಮಳಿಗೆಗಳನ್ನು ತೆರೆಯಲು ಸ್ಪಷ್ಟ ಆದೇಶ ನೀಡಿದ್ದರೂ ಅವುಗಳನ್ನು ಪೊಲೀಸರು ಬಲವಂತವಾಗಿ ಮುಚ್ಚಿಸಿದ್ದರು. ಈ ಕ್ರಮಕ್ಕೆ ನಗರದಲ್ಲಿ ವ್ಯಾ‍‍ಪಕ ಆಕ್ರೋಶ ವ್ಯಕ್ತವಾಗಿದೆ.

‘ರೋಗಿಗಳ ಸಂಬಂಧಿಗಳಿಗೆಂದು ನೀಡಲಾಗುವ ಆಹಾರವನ್ನು ಪಡೆಯಲು ನಾವು ಪಡೆಯಲು ಆಸ್ಪತ್ರೆಗಳಿಗೆ ತೆರಳಬೇಕೇ? ಊಟದ ಹಕ್ಕನ್ನು ಕಸಿದುಕೊಳ್ಳುವುದು ಯಾವ ನ್ಯಾಯ’ ಎಂದು ಹಲವರು ‘ಪ್ರಜಾವಾಣಿ’ಗೆ ಕರೆ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯವಾಗಿ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ವಿವಿಧ ಕೋರ್ಸ್‌ ಅಧ್ಯಯನಕ್ಕಾಗಿ ಇಲ್ಲಿಗೆ ಬಂದಿರುವ ವಿದ್ಯಾರ್ಥಿಗಳು, ಪಕ್ಕದ ಜಿಲ್ಲೆಗಳಿಂದ ತುರ್ತು ಅಗತ್ಯಕ್ಕಾಗಿ ಬಂದವರು, ಬೇರೆ ಜಿಲ್ಲೆಗಳಿಂದ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯಲು ಬಂದವರು ತೊಂದರೆ ಅನುಭವಿಸಿದರು.

ಕಾರ್ಮಿಕ ಇಲಾಖೆಯು ವಿವಿಧ ಸಮುದಾಯದವರಿಗೆ ಆರ್ಥಿಕ ಪ್ಯಾಕೇಜ್ ನೀಡಲು ಅರ್ಜಿಗಳನ್ನು ಪಡೆಯುತ್ತಿದ್ದು, ಅದಕ್ಕಾಗಿ ಎಂಎಸ್‌ಕೆ ಮಿಲ್ ರಸ್ತೆಯಲ್ಲಿರುವ ಕಾರ್ಮಿಕ ಭವನದ ಬಳಿ ಬಂದಿದ್ದ ನೂರಾರು ಕಾರ್ಮಿಕರು, ಕಿಸಾನ್ ಸಮ್ಮಾನ್ ನಿಧಿಯಡಿ ಖಾತೆಗಳಿಗೆ ಪಾವತಿಯಾದ ಹಣ ಪಡೆಯಲು ಬಂದ ರೈತರು ತಮ್ಮ ಊರುಗಳಿಗೆ ವಾಪಸ್ ಹೋಗುವವರೆಗೂ ಸಂಕಟಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT