ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ: ನಗರದಲ್ಲಿ ಸರಣಿ ಪ್ರತಿಭಟನೆ

ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಸಂಘಟನೆಗಳು
Last Updated 25 ಸೆಪ್ಟೆಂಬರ್ 2020, 1:41 IST
ಅಕ್ಷರ ಗಾತ್ರ

ಕಲಬುರ್ಗಿ: ಲಾಕ್‍ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡಬೇಕು, ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕರಿಸಿರುವರನ್ನು ಅಮಾನತುಗೊಳಿಸಬೇಕು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ ವರ್ಗಾವಣೆ ಆದೇಶ ಹಿಂಪಡೆಯಬೇಕು ಎಂಬುದೂ ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಗರದಲ್ಲಿ ಗುರುವಾರ ವಿವಿಧ ಸಂಘಟನೆಗಳು ಪ್ರತ್ಯೇಕ ಪ್ರತಿಭಟನೆ ನಡೆಸಿದವು.

‘ಆರ್ಥಿಕ ಪುನಶ್ಚೇತನಕ್ಕೆ ನೀತಿ ರೂಪಿಸಿ’: ಕೊರೊನಾ ವೈರಾಣು ಹಾವಳಿಯಿಂದಾಗಿ ಮಾಡಿದ ಲಾಕ್‍ಡೌನ್‌ನಿಂದ ಇಡೀ ದೇಶ ಅಪಾರ ನಷ್ಟ ಅನುಭವಿಸಿದೆ. ಅದರಲ್ಲೂ ಕಾರ್ಮಿಕರು, ದುಡಿಯುವ ವರ್ಗ ಹಾಗೂ ಬಡವರ ಸ್ಥಿತಿ ಹೇಳತೀರದಾಗಿದೆ. ಇವರ ಕೈ ಹಿಡಿಯಲು ಕೇಂದ್ರ ಸರ್ಕಾರ ಪರ್ಯಾಯ ನೀತಿ ರೂಪಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಿಐಟಿಯು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ ತೆರವಿನ ನಂತರವೂ ಆರ್ಥಿಕತೆ ಸರಿದಾರಿಗೆ ಬರುತ್ತಿಲ್ಲ. ಆದ್ದರಿಂದ ಕಾರ್ಮಿಕರು, ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿವೆ. ಕೆಲವರಿಗೆ ಬಿಡಿಗಾಸಿನ ಪರಿಹಾರ ನೀಡಿ ಸರ್ಕಾರಗಳು ಕೈ ತೊಳೆದುಕೊಂಡಿವೆ. ಕೂಲಿ ಕಾರ್ಮಿಕರು, ಇನ್ನಿತರ ಕ್ಷೇತ್ರಗಳಲ್ಲಿ ದುಡಿಯುವ ವರ್ಗದವರು ಈಗಲೂ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಧ ಕಡೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆಗಿನ ವೇತನ ಮತ್ತು ಪರಿಹಾರ ನೀಡಿಲ್ಲ. ಅದನ್ನು ವಿತರಿಸಬೇಕು ಎಂದುಆಗ್ರಹಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಮಾರಕವಾಗಿರುವ ಹೊಸ ಶಿಕ್ಷಣ ನೀತಿ ಕೇಂದ್ರ ಸರ್ಕಾರ ಕೈಬಿಡಬೇಕು. ಮೊದಲಿನ ಪದ್ಧತಿಯನ್ನೇ ಮುಂದುವರಿಸಬೇಕು. ಶಿಕ್ಷಣದಲ್ಲಿ ಕೋಮುವಾದಿ ಬೀಜ ಬಿತ್ತುವುದನ್ನು ನಿಲ್ಲಿಸಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ₹ 21 ಸಾವಿರ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ, ಶಿವಾನಂದ ಕೌಲಗಾ, ಅಶೋಕ, ನಾಗರಾಜ ಗುಳಗಿ, ಶಿವಶಂಕರ, ಮಂಜೂರ ಅಹ್ಮದ ನೇತೃತ್ವ ವಹಿಸಿದ್ದರು.

ಬಾಕಿ ವೇತನ ನೀಡಲು ಆಗ್ರಹ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ ವರ್ಗಾವಣೆ ರದ್ದುಗೊಳಿಸಬೇಕು, ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ಮತ್ತು ಕೋವಿಡ್-19 ರಜೆ ವೇತನ ಪಾವತಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ಕೌಶಲ ಮ್ಯಾನ್ ಪವರ್ ಏಜೆನ್ಸಿಯವರು ಕಾರ್ಮಿಕರ ಇಪಿಎಫ್ ಖಾತೆಗೆ ಹಣ ಜಮಾ ಮಾಡದೇ ಮೋಸ ಮಾಡಿದ್ದು, ಶಿಸ್ತು ಕ್ರಮ ಕೈಗೊಂಡು ಹಣ ಜಮಾ ಆಗುವಂತೆ ಮಾಡಬೇಕು. ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿರುವ ಸ್ಥಳಗಳಿಗೆ ಕಾಯಂ ನೌಕರರ ವರ್ಗಾವಣೆ ಮಾಡಬಾರದು. ಐದು ವರ್ಷ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ನೌಕರರಿಗೆ ಸರ್ಕಾರದ ಕ್ಷೇಮಾಭಿವೃದ್ಧಿ ಯೋಜನೆ ಅಡಿ ನೇಮಕಾತಿ ಮಾಡಿಕೊಳ್ಳಬೇಕು ಎಂದೂ ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಭಾಗಣ್ಣ ದೇವನೂರ, ಫಾತಿಮಾ ಬೇಗಂ, ಮೇಘರಾಜ ಕಠಾರೆ, ಸುರೇಶ ದೊಡ್ಮನಿ, ಸರೋಜಾ ನಿಡಗುಂದಾ, ಶಶಿಕಲಾ ಮದರ್ಕಿ, ಮಾಪಣ್ಣ ಜಾನಕರ, ನಂದಾ ಕಲ್ಲಾ, ನಾಗರಾಜ ಕಟ್ಟಿಮನಿ, ಪ್ರದೀಪ, ರವಿ ದೊಡ್ಡಮನಿ, ರವಿ ಶರಣಸಿರಸಗಿ, ರಾಮಚಂದ್ರ ನೇತೃತ್ವ ವಹಿಸಿದ್ದರು.

‘ಸಂಸದರನ್ನು ಅಮಾನತುಗೊಳಿಸಿ’

‘ಹೊಸ ಕೃಷಿ ಮಸೂದೆಗಳು ರೈತರಿಗೆ ಮಾರಕವಾಗಿದ್ದರೂ ಸಂಸತ್ತಿನ ಅಧಿವೇಶನದಲ್ಲಿ ಅಸಂವಿಧಾನಿಕವಾಗಿ ಅಂಗೀಕರಿಸಿರುವ ರಾಜ್ಯಸಭಾ ಸದಸ್ಯರೆಲ್ಲರನ್ನೂ ಅಮಾನತು ಮಾಡಬೇಕು’ ಎಂದು ಆಗ್ರಹಿಸಿ ಆಮ್‍ ಆದ್ಮಿ ಪಾರ್ಟಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

‘ಈ ಮಸೂದೆಗಳನ್ನು ರದ್ದುಗೊಳಿಸಬೇಕು. ಎಲ್ಲ ಕಾಯ್ದೆ ಮತ್ತು ಮಸೂದೆಗಳ ಕುರಿತು ಮುಕ್ತವಾಗಿ ಚರ್ಚೆ ನಡೆಸುವ ಮೂಲಕ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಗತ್ಯ ಬದಲಾವಣೆಗಳೊಂದಿಗೆ ತಿದ್ದಪಡಿ ಮಾಡಿ ಅಂಗೀಕರಿಸುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ರೈತರ ವಿರುದ್ಧವಾಗಿ ಮಸೂದೆಗಳನ್ನು ರೂಪಿಸಿದೆ. ಆದರೆ, ಅದನ್ನು ಚರ್ಚೆ ನಡೆಸದೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷದವರು ಇಲ್ಲದೆ ಇರುವಾಗ ಮತ್ತು ವಿರೋಧಿಸಿದರೂ ಅಂಗೀಕರಿಸುವ ಮೂಲಕ ಅಸಂವಿಧಾನಿಕ ಹಾದಿಯನ್ನು ಬಿಜೆಪಿ ಅನುಸರಿಸಿದೆ. ದೇಶದ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಕೆಲಸ ನಿರ್ಧಾರ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿದರು. ಪಕ್ಷದ ಜಿಲ್ಲಾ ಘಟಕದ ಸಂಚಾಲಕ ಈರಣ್ಣಗೌಡ ಪಾಟೀಲ ಗುಳ್ಳಿಹಾಳ, ಶಿವಕುಮಾರ ಕಾಂಬಳೆ, ಜಿಲ್ಲಾ ಘಟಕದ ಕಾರ್ಯದರ್ಶಿ ಶೇಖರಸಿಂಗ್, ಕಿರಣ ರಾಠೋಡ,ಶೇಖರ ನಜೀರ್, ಮೀರ ಮೊಹಸಿನ್, ಪರಶುರಾಮ ಕೋಸಗಿ, ಡಾ.ಇಮ್ರಾನ್ ಅಹ್ಮದ, ಮೊಹಸೀನ್ ಸೋಹರ ವರ್ದಿ, ಮೈನುದ್ದೀನ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT