ಕಲಬುರಗಿ: ಪೆಟ್ರೋಲ್ ಬಂಕ್‌ಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಮಾಡಿಸಿಕೊಡಲು ₹ 1 ಲಕ್ಷಕ್ಕೆ ಬೇಡಿಕೆ ಇಟ್ಟು ಮೊದಲ ಕಂತಾಗಿ ₹ 20 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‌ಸ್ಟೆಬಲ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಶಕ್ಕೆ ಪಡೆದರು.
ಜಿಲ್ಲಾ ಅಗ್ನಿಶಾಮಕ ತುರ್ತು ಸೇವೆಗಳ ಅಧಿಕಾರಿ ಗುರುರಾಜ್ ಹಾಗೂ ಕಾನ್‌ಸ್ಟೆಬಲ್ ಸೋಪನ್ ರಾವ್ ಲಂಚ ಪಡೆದ ಆರೋಪಿಗಳು. ಚಿತ್ತಾಪುರದ ರಾಜರಾಮಪ್ಪ ನಾಯಕ್ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ರಾಜರಾಮಪ್ಪ ಅವರ ಪೆಟ್ರೋಲ್ ಬಂಕ್‌ಗೆ ಎನ್‌ಒಸಿ ಪ್ರಮಾಣಪತ್ರ ಕೊಡಲು ಸಾಕಷ್ಟು ಬಾರಿ ಕಚೇರಿಗೆ ಅಲೆದಾಡಿಸಿದ್ದರು. ₹ 1 ಲಕ್ಷ ಲಂಚ ಕೊಟ್ಟರೆ ಎನ್‌ಒಸಿ ಮಾಡಿಸಿಕೊಡುವುದಾಗಿ ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‌ಸ್ಟೆಬಲ್ ಬೇಡಿಕೆ ಇಟ್ಟಿದ್ದರು. ಕಚೇರಿಯಲ್ಲಿ ಲಂಚದ ಹಣ ಪಡೆಯುವ ವೇಳೆ ಗುರುರಾಜ್ ಹಾಗೂ ಸೋಪನ್ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಡಿಎಸ್‌ಪಿ ಮಂಜುನಾಥ್ ಗಂಗಲ್, ಇನ್‌ಸ್ಪೆಕ್ಟರ್ ಧ್ರುವತಾರಾ ಸಿ. ತಿಗಡಿ, ಸಿಬ್ಬಂದಿ ಮಲ್ಲಿನಾಥ್, ಮಸೂದ್ ಅವರು ದಾಳಿ ನಡೆಸಿದರು.