ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಿಗ ಸಂಘಟನೆಗಳ ಒಕ್ಕೂಟದಿಂದ ಡಿ.ಕೆ. ಶಿವಕುಮಾರ್‌ ಅವರಿಗೆ ಮುತ್ತಿಗೆ

ಸದಾಶಿವ ಆಯೋಗದ ಜಾರಿಗೆ ಡಿ.ಕೆ. ಶಿವಕುಮಾರ್ ವಿರೋಧ ಆರೋಪ
Last Updated 17 ಜುಲೈ 2021, 15:23 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗ ಕೇಂದ್ರಕ್ಕೆ ಶಿಫಾರಸು ಮಾಡಲು ವಿರೋಧಿಸಿದ್ದರು ಎಂದು ಆರೋಪಿಸಿ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಮಾದಿಗ ಸಂಘಟನೆಗಳ ಒಕ್ಕೂಟದ ಸದಸ್ಯರು ಶನಿವಾರ ಮುತ್ತಿಗೆ ಹಾಕಿ ಅವರ ವಿರುದ್ಧ ಘೋಷಣೆ ಕೂಗಿದರು.

‘ಸದಾಶಿವ ಆಯೋಗದ ವರದಿಯ ಜಾರಿಯು ಮಾದಿಗ ಸಮುದಾಯದ ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಲಿಲ್ಲ. ಜೊತೆಗೆ ತಾವೂ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಿರಿ’ ಎಂದು ಶಿವಕುಮಾರ್‌ ಅವರ ನಡೆಯನ್ನು ಆಕ್ಷೇಪಿಸಿದರು.

‘ಇದರಿಂದಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ. ಈಗಲೂ ಮಾದಿಗ ಸಮುದಾಯಕ್ಕೆ ಆದ್ಯತೆ ನೀಡುವ ಬದಲು ಲಂಬಾಣಿ ಸಮುದಾಯದ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿರುವುದು ಸರಿಯಲ್ಲ’ ಎಂದು ಮುಖಂಡರು ಆಕ್ಷೇಪಿಸಿದರು.

ಸಮುದಾಯವನ್ನು ಕಡೆಗಣಿಸಿದ್ದರಿಂದ ಈಗಾಗಲೇ ಮಾದಿಗ ಸಮುದಾಯದವರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಈಗಲಾದರೂ ಕಾಂಗ್ರೆಸ್ ಪಕ್ಷದ ನಾಯಕರು ಎಚ್ಚೆತ್ತುಕೊಂಡು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಮಹಾನಗರ ಪಾಲಿಕೆ, ವಿಧಾನಸಭೆ ಚುನಾವಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ‍ಪಕ್ಷದ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ‍ಪಕ್ಷವನ್ನು ಮಾದಿಗ ಸಮುದಾಯದವರು ತೊರೆಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಅಹವಾಲು ಸ್ವೀಕರಿಸಿದ ಡಿ.ಕೆ. ಶಿವಕುಮಾರ್, ಪ್ರತಿಭಟನಾಕಾರರ ಕೈಯಲ್ಲಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಗಳನ್ನು ಎತ್ತಿಹಿಡಿದು ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಒಕ್ಕೂಟದ ಅಧ್ಯಕ್ಷ ದಶರಥ ಎಂ. ಕಲಗುರ್ತಿ, ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಪರಮೇಶ್ವರ ಖಾನಾಪೂರ, ಮುಖಂಡರಾದ ಶಾಮ ನಾಟೀಕರ್, ರಾಜು ವಾಡೇಕರ, ಗೋಪಿಕೃಷ್ಣ ಗುಡೇನವರ, ಬಾಬುರಾವ ಸುಂಠಾಣ, ಮಹೇಶ ವಾಡೇಕರ್, ರಾಜು ಕಟ್ಟೀಮನಿ, ರಮೇಶ ವಾಡೇಕರ್, ಮಾದಿಗ ದಂಡೋರ ಯುವ ಘಟಕದ ಅಧ್ಯಕ್ಷ ಗುರು ಭಂಡಾರಿ, ಬಂಡೆಪ್ಪ ರತ್ನಡಗಿ, ಪ್ರದೀಪ ಭಾವೆ, ರಂಜೀತ ಮೂಲಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT