ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾರ್ಜುನ ಖರ್ಗೆ ಅಪರೂಪದ ನಾಯಕ; ನ್ಯಾ. ಶಿವರಾಜ ವಿ.ಪಾಟೀಲ

Last Updated 14 ಮಾರ್ಚ್ 2023, 4:20 IST
ಅಕ್ಷರ ಗಾತ್ರ

ಕಲಬುರಗಿ: ‘ಬಡ ಕುಟುಂಬದಲ್ಲಿ ಜನಿಸಿ ಬಡವರ ಮತ್ತು ದಲಿತರ ಪರವಾದ ಕಾಳಜಿ ಮೂಲಕ ರಾಜಕೀಯ ಪ್ರವೇಶಿಸಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಜಕೀಯ ಜೀವನದಲ್ಲಿ ಯಶಸ್ಸು ಕಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶ ಕಂಡ ಅಪರೂಪದ ನಾಯಕ’ ಎಂದು ರಾಜ್ಯ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಡಾ. ಶಿವರಾಜ ವಿ.ಪಾಟೀಲ ಶ್ಲಾಘಿಸಿದರು.

ಇಲ್ಲಿನ ಡಾ. ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಎಂ.ಜಿ. ತಳಿಮನಿ ಅವರ ಸಂಶೋಧನೆ ಆಧಾರಿತ ‘ಮಲ್ಲಿಕಾರ್ಜುನ ಖರ್ಗೆ ಎನ ಎಪಿಟೊಮಿ ಆಫ್ ಪೊಲಿಟಿಕಲ್ ಫಿನಾಮಿನನ್’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಖರ್ಗೆ ಅವರು ತಜ್ಞರ ವ್ಯಾಖ್ಯಾನದಂತಹ ಬಡತನವನ್ನು ನೋಡಲಿಲ್ಲ. ಬದಲಿಗೆ, ಗ್ರಾಮೀಣ ಭಾಗದಲ್ಲಿ ಬಡವರು, ಅನಾಥರು, ದಲಿತರು ಅನುಭವಿಸಿದ ಕಷ್ಟದ ಜೀವನವನ್ನು ತಮ್ಮ ಅನುಭವಕ್ಕೂ ತಂದುಕೊಂಡವರು. ಅವರ ಬಗೆಗಿನ ಕಾಳಜಿಗಾಗಿ ಮಿಡಿದು, ಅವರಲ್ಲಿನ ಬಡತನವನ್ನು ಹೋಗಲಾಡಿಸಲು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಶ್ರಮಿಸಿದರು’ ಎಂದರು.

‘ದೇವರು ಕೊಟ್ಟ ಅವಕಾಶವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಅರ್ಥಪೂರ್ಣ ಬದುಕು ಕಟ್ಟಿಕೊಳ್ಳಬೇಕು. ಅಂತಹ ಅರ್ಥಪೂರ್ಣ ಜೀವನ ನಡೆಸಿದವರು ಮಲ್ಲಿಕಾರ್ಜುನ ಖರ್ಗೆ’ ಎಂದು ಪ್ರಶಂಸಿಸಿದರು.

‘ಬಡತನದಲ್ಲಿ ಜನಿಸಿದ್ದರು ಬಡವರಾಗಿ ಸಾಯಬಾರದು. ಏನಾದರೂ ಸಾಧನೆ ಮಾಡಬೇಕು. ಜಗತ್ತಿನ ಪ್ರತಿ ಹತ್ತು ಸಾಧಕರಲ್ಲಿ ಎಂಟು ಸಾಧಕರು ಬಡತನದ ನೋವು ಉಂಡವರೇ ಆಗಿದ್ದಾರೆ. ವಿಷಮ ಪರಿಸ್ಥಿತಿಗಳನ್ನು ದಾಟಿ ಸಾಧನೆ ಮಾಡಿ, ಜಗತ್ತಿಗೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ’ ಎಂದು ಅವರು ಹೇಳಿದರು.

‘ಸಮಾಜ ಮತ್ತು ದೇಶಕ್ಕಾಗಿ ಕೊಡುಗೆ ನೀಡಿದ್ದವರೂ ಯಾವುದೇ ಪಕ್ಷದವರು ಆಗಿರಲಿ, ಅವರನ್ನು ಗುರುತಿಸಿ ಕೃತಜ್ಞತೆ ಮತ್ತು ಗೌರವ ಕೊಡಬೇಕು. ಇದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ’ ಎಂದರು.

‘371 (ಜೆ) ಮಂಡನೆ ಚರ್ಚೆಗೆ ಮಧ್ಯರಾತ್ರಿ ಭೇಟಿ’

‘ಮಲ್ಲಿಕಾರ್ಜುನ ಖರ್ಗೆ ಅವರು ಆರ್ಟಿಕಲ್ 371(ಜೆ) ಅನ್ನು ಸಂಸತ್ತಿನಲ್ಲಿ ಹೇಗೆ ಮಂಡಿಸಬೇಕು, ಅದರ ರೂಪರೇಷೆಗಳ ಬಗ್ಗೆ ಸಲಹೆ ಪಡೆಯಲು ಮಧ್ಯರಾತ್ರಿ 11.30ಕ್ಕೆ ನನ್ನ ಮನೆಗೆ ಬಂದಿದ್ದರು. ಇದು ಜನರ ಬಗೆಗಿನ ಖರ್ಗೆ ಅವರ ಕಾಳಜಿ ತೋರಿಸಿತ್ತು’ ಎಂದು ನ್ಯಾಯಮೂರ್ತಿ ಡಾ. ಶಿವರಾಜ ವಿ.ಪಾಟೀಲ ಹೇಳಿದರು.

‘371 (ಜೆ) ವಿಶೇಷ ಸ್ಥಾನಮಾನ ಅನುಷ್ಠಾನಕ್ಕೆ ಖರ್ಗೆ ಅವರು ದೆಹಲಿ ಮಟ್ಟದಲ್ಲಿ ಸಾಕಷ್ಟು ಶ್ರಮಿಸಿದ್ದರ ಫಲವಾಗಿ ಇಂದು ಕಲ್ಯಾಣ ಕರ್ನಾಟಕದಲ್ಲಿ ನಿಜವಾಗಲೂ ಕಲ್ಯಾಣ ಕ್ರಾಂತಿ ಆಗಿದೆ. ಸಾಧಕರು ಯಾವುದೇ ಪಕ್ಷದಲ್ಲಿ ಇದ್ದರೂ ಅವರಿಗೆ ಎಲ್ಲರೂ ಕೃತಜ್ಞತೆ ತೋರಬೇಕು’ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರೊನಾಲ್ಡ್ ಅನಿಲ್ ಫರ್ನಾಂಡಿಸ್ ಮಾತನಾಡಿ, ‘ಬಹುತೇಕರು ಮೀಸಲಾತಿ ಎಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ಸಿಗುವ ಸವಲತ್ತು ಎಂದು ಭಾವಿಸಿದ್ದಾರೆ. ಇದು ತಪ್ಪು ಕಲ್ಪನೆ. ಒಬಿಸಿ ಸೇರಿ ಎಲ್ಲ ಜಾತಿಗಳಿಗೆ ಮೀಸಲಾತಿಯ ಫಲ ಲಭಿಸುತ್ತಿದೆ’ ಎಂದರು.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಮತ್ತು ಸಾಧನೆಗಳ ಕಿರುಚಿತ್ರ ಪ್ರದರ್ಶನ ಹಾಗೂ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಸಾಹಿತಿ ಆರ್‌.ಕೆ ಹುಡಗಿ ಪುಸ್ತಕ ಕುರಿತು ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಆರ್.ಗಿರೀಶ, ಗುತ್ತಿಗೆದಾರ ರಾಧಾಕೃಷ್ಣ ದೊಡ್ಮನಿ, ಚಂದ್ರಕಾಂತ ಡಿ.ಶಿವಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT