ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಭೇದ ಮರೆತರೆ ಕಲ್ಯಾಣ ಅಭಿವೃದ್ಧಿ: ಮಲ್ಲಿಕಾರ್ಜುನ ಖರ್ಗೆ

ಡಾ.ಕೆ.ಎಸ್. ಬಂಧು ಷಷ್ಟ್ಯಬ್ದಿ, ಬೋಧಿ ಬೆಳಕು ಗ್ರಂಥ ಬಿಡುಗಡೆ
Last Updated 18 ಮೇ 2022, 4:10 IST
ಅಕ್ಷರ ಗಾತ್ರ

ಕಲಬುರಗಿ: ರಾಜಕಾರಣ ಹಾಗೂ ಪಕ್ಷಭೇದ ಮರೆತು ಎಲ್ಲ ರಾಜಕೀಯ ಮುಖಂಡರು ಕೆಲಸ ಮಾಡಿದರೆ ಮಾತ್ರ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗುತ್ತದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ನಿವೃತ್ತ ಉಪನ್ಯಾಸಕ ಡಾ.ಕೆ.ಎಸ್. ಬಂಧು ಅವರ ಷಷ್ಟ್ಯಬ್ದಿ ಸಮಾರಂಭ ಹಾಗೂ ಬೋಧಿ ಬೆಳಕು ಅಭಿನಂದನಾ ಗ್ರಂಥ ಸಮರ್ಪಣೆ ಸಮಾರಂಭಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ದೂರದರ್ಶನ ಕೇಂದ್ರ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಕಲಬುರಗಿಯಲ್ಲಿ ಆರಂಭವಾದವು. ಆದರೆ, ಇದೀಗ ದೂರದರ್ಶನ ಕೇಂದ್ರಕ್ಕೆ ಅಸ್ತಿತ್ವದ ಭೀತಿ ಎದುರಾಗಿದೆ. ಇಲ್ಲಿನ ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಇಂಥ ಘಟನೆಗಳು ನಡೆಯಬಾರದು. ಮೊದಲೆಲ್ಲ ಇಲ್ಲಿ ಶಿಕ್ಷಕರಾಗಿ ಧಾರವಾಡ, ವಿಜಯಪುರದ ಭಾಗದವರು ಬರುತ್ತಿದ್ದರು. 371 (ಜೆ) ತಿದ್ದುಪಡಿಯಾದ ಬಳಿಕ ಇಲ್ಲಿನವರಿಗೆ ಶಿಕ್ಷಣದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿವೆ. ಮೀಸಲಾತಿಯಿಂದಾಗಿ ಇಲ್ಲಿನವರೇ ಶಿಕ್ಷಕರು, ವೈದ್ಯರು, ಎಂಜಿನಿಯರ್‌ಗಳಾಗುತ್ತಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಷಷ್ಟ್ಯಬ್ದಿ ಸಮಾರಂಭ ಆಚರಿಸಿಕೊಳ್ಳುತ್ತಿರುವ ಕೆ.ಎಸ್. ಬಂಧು ಅವರ ಸ್ವಭಾವ ಕಲ್ಲು ಸಕ್ಕರೆಯಂತೆ. ಅವರು ಪ್ರಕಟಿಸಿದ ಅಪರೂಪದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿ ಮಾಡಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುತ್ತೇನೆ’ ಎಂದರು.

ಕರ್ನಾಟಕ ಕೇಂದ್ರೀಯ ವಿ.ವಿ. ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ, ‘ಬೋಧಿಯ ಬೆಳಕು 2500 ವರ್ಷಗಳ ಹಿಂದೆ ಜಿಲ್ಲೆಯ ಸನ್ನತಿಯಲ್ಲಿ ಕಾಣಿಸಿಕೊಂಡಿತ್ತು. ಅಂತಹ ಮಹೋನ್ನತ ಧರ್ಮವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ಪ್ರಚುರಪಡಿಸುತ್ತಿದ್ದಾರೆ. ಸಮಾಜದ ಒಳಗೂ ಬೋಧಿಯ ಬೆಳಕು ಇದೆ’ ಎಂದು ಹೇಳಿದರು.

ಸುಲಫಲ ಸಾರಂಗಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಅಣದೂರಿನ ಭಂತೇಜಿ ವರಜ್ಯೋತಿ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ್ ಹೊಸಮನಿ, ಡಾ.ಜಯದೇವಿ ಎಂ. ಗಾಯಕವಾಡ, ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲ ಇತರರು ವೇದಿಕೆಯಲ್ಲಿದ್ದರು.

ಡಾ. ಕೆ.ಎಸ್. ಬಂಧು ದಂಪತಿಯನ್ನು ಮಲ್ಲಿಕಾರ್ಜುನ ಖರ್ಗೆ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT