ಪ್ರಚಾರಕ್ಕೆ ಸರ್ಜಿಕಲ್‌ ಸ್ಟ್ರೈಕ್‌; ಮೋದಿಯಂತ ದೇಶದ್ರೋಹಿ ಮತ್ತೊಬ್ಬರಿಲ್ಲ: ಖರ್ಗೆ

ಭಾನುವಾರ, ಮಾರ್ಚ್ 24, 2019
27 °C

ಪ್ರಚಾರಕ್ಕೆ ಸರ್ಜಿಕಲ್‌ ಸ್ಟ್ರೈಕ್‌; ಮೋದಿಯಂತ ದೇಶದ್ರೋಹಿ ಮತ್ತೊಬ್ಬರಿಲ್ಲ: ಖರ್ಗೆ

Published:
Updated:

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್‌ ಸ್ಟ್ರೈಕ್‌ ಮುಂದಿಟ್ಟುಕೊಂಡು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಹೊರಟಿದ್ದರೆ, ಅವರಂಥ ದೇಶದ್ರೋಹಿ ಇನ್ನೊಬ್ಬ ಇಲ್ಲ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಹೇಳಿದರು.

ನಗರದಲ್ಲಿ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಭದ್ರತೆಗೆ ಕುತ್ತು ಬಂದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲೋಣ. ನಮ್ಮ ರಕ್ತ ಚೆಲ್ಲಿ ದೇಶವನ್ನು ಸುಭಿಕ್ಷೆಯಿಂದ ಇಡೋಣ. ಆದರೆ, ಇದೇ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಕೆಟ್ಟ ನೀತಿ’ ಎಂದು ಟೀಕಿಸಿದರು.

‘ಇಷ್ಟಕ್ಕೂ ಪುಲ್ವಾಮಾ ದಾಳಿಯಲ್ಲಿ ರಕ್ತ ಚೆಲ್ಲಿದ್ದು ನಮ್ಮ ಯೋಧರು. ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೂ ಯೋಧರು. ಇವರೆಲ್ಲ ನಮ್ಮ ಅಕ್ಕ– ಅಣ್ಣ– ತಮ್ಮಂದಿರ ಮಕ್ಕಳು. ಇವರ ಗೆಲುವನ್ನೂ ಬಿಜೆಪಿ ಗೆಲುವು ಎಂದು ಹೇಳಿಕೊಳ್ಳಲು ನಾಚಿಕೆ ಆಗಬೇಕು. ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗ ಎರಡು ಯುದ್ಧಗಳನ್ನು ಗೆದ್ದಿದ್ದೇವೆ. ಆದರೆ, ಯಾವತ್ತೂ ಅದು ನಮ್ಮ ಗೆಲುವು ಎಂದು ಹೇಳಿಕೊಳ್ಳಲಿಲ್ಲ’ ಎಂದು ಕುಟುಕಿದರು.

‘ನಾನು ಯಾವತ್ತಿದ್ದರೂ ಕೆಲಸ ಮಾಡಿದ ನಂತರ ಮಾತನಾಡುತ್ತೇನೆ. ಸತ್ಯವನ್ನಷ್ಟೇ ಮಾತನಾಡುವುದು ನನ್ನ ಹುಟ್ಟುಗುಣ. ಸುಳ್ಳನ್ನೇ ಮಾತನಾಡುವುದು ಮೋದಿ ಬಂಡವಾಳ. ಇದೂವರೆಗೆ ಜನರು ಕೊಟ್ಟ ಕೆಲಸಗಳನ್ನೂ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಇನ್ನೂ ಮಾಡುವ ಹಂಬಲವಿದೆ. ಅದಕ್ಕೆ ಜನರ ಆಶೀರ್ವಾದ ಬೇಕು. ಲೋಕಸಭೆ ಚುನಾವಣೆಯಲ್ಲಿ ಎಲ್ಲವನ್ನೂ ವಿಚಾರ ಮಾಡಿ ಆಯ್ಕೆ ಮಾಡಿಕೊಳ್ಳಿ’ ಎಂದು ಖರ್ಗೆ ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ವಿಧಾನ ಪರಿಷತ್‌ ಸದಸ್ಯ ಇಕ್ಬಾಲ್‌ ಅಹ್ಮದ್‌ ಸರಡಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಮೇಯರ್‌ ಮಲ್ಲಮ್ಮ ವಳಕೇರಿ, ಉಪಮೇಯರ್‌ ಆಲಿಯಾ ಶಿರೀನ್‌, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ರಾಜಾ ಕೆ. ಇದ್ದರು.

‘ಮೆಹನತ್‌ ಮುರ್ಗಿ ಕಾ...’
ಸಂಸದ ಖರ್ಗೆ ತಮ್ಮ ಭಾಷಣದುದ್ದಕ್ಕೂ ಉರ್ದು ನುಡಿಗಟ್ಟುಗಳನ್ನು ಹೇಳುತ್ತಲೇ ಮೋದಿ ಹಾಗೂ ಬಿಜೆಪಿ ಮುಖಂಡರಿಗೆ ಬಿಸಿಮುಟ್ಟಿಸಿದರು.

‘ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಹಿಂದಿನ ಸರ್ಕಾರದಲ್ಲೇ ಆಗಿವೆ. 371(ಜೆ) ಮೀಸಲಾತಿ ನಮ್ಮ ದೊಡ್ಡ ಗೆಲುವು. ರೈಲ್ವೆ ಮಾರ್ಗ, ಮೇಲ್ಸೇತುವೆ, ರಾಷ್ಟ್ರೀಯ ಹೆದ್ದಾರಿ, ಇಎಸ್‌ಐ ಆಸ್ಪತ್ರೆ... ಹೀಗೆ ನೂರಾರು ಕೆಲಸಗಳನ್ನು ಮಾಡಿದ್ದೇನೆ. ಆದರೆ, ಪ್ರಧಾನಿ ನಿನ್ನೆ ನಗರದಲ್ಲಿ ಮಾಡಿದ ಭಾಷಣದಲ್ಲಿ ಹಲವಾರು ಕೆಲಸಗಳನ್ನು ತಮ್ಮ ಸರ್ಕಾರ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ‘ಮೆಹನತ್‌ ಮುರ್ಗಿ ಕಾ, ಅಂಡಾ ಖಾಯೆ ಫಕೀರ್‌ ಸಾಬ್‌’ ಎನ್ನುವಂತಿದೆ ಈ ಮಾತು’ ಎಂದು ಲೇವಡಿ ಮಾಡಿದರು.

‘ಉದ್ಭವ ಮೂರ್ತಿಗಳು ಇವು...’
ಚುನಾವಣೆ ಹತ್ತಿರ ಬರುತ್ತಿದ್ದಂತೆ ‘ತ್ರಿಮೂರ್ತಿ’ಗಳು ಹುಟ್ಟಿಕೊಂಡು ಬಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಇವರು ತ್ರಿಮೂರ್ತಿಗಳಲ್ಲ, ಉದ್ಭವ ಮೂರ್ತಿಗಳು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದರು.

ಶಾಸಕ ಡಾ.ಉಮೇಶ ಜಾಧವ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ ಹಾಗೂ ಬಾಬುರಾವ ಚಿಂಚನಸೂರ್‌ ಅವರ ವಿರುದ್ಧ ವಾಗ್ದಾಳಿ ಮಾಡಿದ ಅವರು, ‘ಚುನಾವಣೆ ಮುಗಿದ ಬಳಿಕ ಈ ಉದ್ಭವ ಮೂರ್ತಿಗಳೆಲ್ಲ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಾರೆ’ ಎಂದರು.

ಏಕವಚನದಲ್ಲಿ ಟೀಕೆ
ಭಾಷಣದ ಮಧ್ಯೆ ಪ್ರಧಾನಿ ಮೋದಿ ಬಗ್ಗೆ ಏಕವಚನ ಪ್ರಯೋಗ ಮಾಡಿದ ಸಂಸದ ಖರ್ಗೆ, ‘ಈ ಜಿಲ್ಲೆಗೆ ಏನ್‌ ಮಾಡೀಪಾ ಅಂತ್‌ ನೀವು ಕೇಳ್ರಿ. ಒಂದು ರೈಲ್ವೆ ವಿಭಾಗೀಯ ಕಚೇರಿ ಮಾಡಿಲ್ಲ, ಕೈಗಾರಿಕಾ ಕಾರಿಡಾರ್‌ ಮಾಡ್ಲಿಲ್ಲ, ರೈತರಿಗೆ, ಮಹಿಳೆಯರಿಗೆ ಇಂವ ಏನ್‌ ಮಾಡಿದಾನ? ನೀವ್‌ ಕೇಳ್ಬೇಕು. ಇವನ ಹೆಸರ್‌ ಹೇಳ್ಕೊಂಡ್‌ ಮತ್ತಷ್ಟ ಮಂದಿ ಬರ್ತಾರ ಮನಿ ಮುಂದ. ಅವರ್ನೂ ಬಿಡಬ್ಯಾಡ್ರಿ. ಕೈ ಹಿಡಿದ ಕೇಳ್ರಿ’ ಎಂದರು.

‘ಪದೇಪದೇ ಸ್ವಚ್ಛ ಭಾರತ್‌ ಮಾಡೇನಿ, ಗಂಗಾನದಿ ಸ್ವಚ್ಛ್‌ ಮಾಡೀನಿ ಅನಕೋಂತ ಹ್ವಾದ್ರ ಆತೇನ? ಈ ದೇಶಕ್ಕ, ಈ ಜನರಿಗೆ ಏನ್‌ ಮಾಡೀಪಾ ಅದನ್‌ ಹೇಳ್‌ ಮೊದಲು’ ಎಂದು ಅವರು ಪ್ರಶ್ನಿಸಿದರು.

‘ನಾನು ಈ ಪ್ರಶ್ನೆಗಳನ್ನು ಇಲ್ಲಿ ಮಾತ್ರ ಕೇಳಾಕತ್ತಿಲ್ಲ. ಪಾರ್ಲಿಮರಂಟ್‌ದಾಗೂ ಕೇಳೀನಿ. ಉತ್ರಾ ಕೊಡಾವ್ರ್‌ ಇಲ್ಲ’ ಎಂದರು.

ಪ್ರಮುಖ ಅಂಶಗಳು

*1,614 ಫಲಾನುಭವುಗಳಿಗೆ ವಿವಿಧ ಯೋಜನೆಗಳು ಪ್ರಮಾಣ ಪತ್ರ ವಿತರಣೆ

*₹ 84.52 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ

*₹ 42.5 ಕೋಟಿ ವೆಚ್ಚದಲ್ಲಿ ಮೂರು ವಿದ್ಯುತ್‌ ವಿತರಣಾ ಕೇಂದ್ರಗಳ ನಿರ್ಮಾಣ

*₹ 20 ಕೋಟಿ ವೆಚ್ಚದಲ್ಲಿ ಸೂಪರ್‌ ಮಾರ್ಕೆಟ್‌ ಬಳಿ ಎರಡಂತಸ್ತಿನ ಬಸ್‌ ನಿಲ್ದಾಣ

*₹ 15 ಕೋಟಿ ವೆಚ್ಚದಲ್ಲಿ ಭಾರಿ ವಾಹನಗಳ ಪ್ರಾದೇಶಿಕ ತರಬೇತಿ ಸಂಸ್ಥೆ

*₹ 50 ಕೋಟಿ ವೆಚ್ಚದಲ್ಲಿ ಧನ್ವಂತರಿ ಕಾಲೊನಿ ಉದ್ಯಾನ ಅಭಿವೃದ್ಧಿ

*₹ 92.90 ಲಕ್ಷ ವೆಚ್ಚದಲ್ಲಿ ಸ್ವಸ್ತಿಕ್‌ ನಗರ ಉದ್ಯಾನವನ ಅಭಿವೃದ್ಧಿ

*₹ 2 ಕೋಟಿ  ಮೆಹಬೂಬ್‌ ಗುಲ್ಷನ್‌ ಗಾರ್ಡನ್ ಅಭಿವೃದ್ಧಿ ಕಾಮಗಾರಿಗೆ

*₹ 95 ಲಕ್ಷ  ವೆಚ್ಚದಲ್ಲಿ ಫಿರ್ದೋಸ್‌ ಅಬೂಬ್ಕರ್‌ ಕಾಲೊಯಲ್ಲಿ ಒಳಚರಂಡಿ

*₹ 1.12 ಕೋಟಿ ವೆಚ್ಚದಲ್ಲಿ ಮಜೀದ್‌ನಿಂದ ಭವಾನಿ ದೇವಸ್ಥಾನದವರೆಗೆ ಸಿಸಿ ರಸ್ತೆ ಮತ್ತು ಚರಂಡಿ

*₹ 57.83 ಲಕ್ಷದಲ್ಲಿ ಸ್ಟೇಶನ್ ಬಜಾರನಲ್ಲಿ ಕಾಂಪ್ಲೇಕ್ಸ್ ನಿರ್ಮಾಣ

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !