ಬುದ್ಧಿವಾದ ಹೇಳಿದ್ದಕ್ಕೆ ಮಾವನ ಮನೆಗೆ ಬೆಂಕಿ!

7
ನಾಲ್ವರು ಗಾಯಾಳುಗಳಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬುದ್ಧಿವಾದ ಹೇಳಿದ್ದಕ್ಕೆ ಮಾವನ ಮನೆಗೆ ಬೆಂಕಿ!

Published:
Updated:
ಕಲಬುರ್ಗಿಯ ಹುಸೇನಿ ಗಾರ್ಡ್‌ನಲ್ಲಿರುವ ಸೈಯದ್ ಅಕ್ಬರ್ ಅವರ ಮನೆಗೆ ಬುಧವಾರ ಬೆಂಕಿ ಹಚ್ಚಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜೆ. ಪರಿಶೀಲಿಸಿದರು

ಕಲಬುರ್ಗಿ: ‘ತಂಗಿಗೆ ಕಿರುಕುಳ, ಮಾನಸಿಕ ಹಿಂಸೆ ನೀಡದಂತೆ ಬುದ್ಧಿವಾದ ಹೇಳಿದ್ದರಿಂದ ಕುಪಿತಗೊಂಡ ಅಳಿಯ ಬುಧವಾರ ಬೆಳಿಗ್ಗೆ ಮಾವನ ಮನೆಗೆ ಬೆಂಕಿ ಹಚ್ಚಿ ನಾಲ್ಕು ಜನರ ಕೊಲೆಗೆ ಯತ್ನಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮುಸ್ತಫಾ ಮಹ್ಮದ್ ಸಲೀಂ ಬೆಂಕಿ ಹಚ್ಚಿರುವ ಆರೋಪಿ. ಇಲ್ಲಿಯ ಎಂಎಸ್‌ಕೆ ಮಿಲ್ ಪ್ರದೇಶದ ಹುಸೇನಿ ಗಾರ್ಡನ್‌ನಲ್ಲಿರುವ ಮಾವ ಸೈಯದ್ ಅಕ್ಬರ್ ಮನೆಗೆ ತೆರಳಿದ ಇವರು ಈ ಕೃತ್ಯ ಎಸಗಿದ್ದಾರೆ. ತೀವ್ರ ಸುಟ್ಟು ಗಾಯಗಳಾಗಿರುವ ಸೈಯದ್ ಅಕ್ಬರ್ (42), ಅವರ ಪತ್ನಿ ಶಹನಾಜ್ ಬೇಗಂ (35), ಪುತ್ರ ಸೈಯದ್ ಯಾಸಿನ್ (17) ಹಾಗೂ ಪುತ್ರಿ ಸಾನಿಯಾ ಬೇಗಂ (16) ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮನೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಬೆಂಕಿ ಹೊತ್ತಿಕೊಂಡು ನರಳಾಡುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಬಾಗಿಲು ಮುರಿದು ಒಳಗೆ ಹೋದರು. ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಸ್ಥಳದಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ. ಆದರೆ ಸೀಮೆ ಎಣ್ಣೆ ವಾಸನೆ ಬರುತ್ತಿತ್ತು. ಕುಟುಂಬದವರೇ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿರಬಹುದು ಅಥವಾ ಯಾರಾದರೂ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳುತ್ತವೆ. ‘ಸೈಯದ್ ಅಕ್ಬರ್ ಅವರ ಸಹೋದರಿ ಹೀನಾ ಕೌಸರ್ ಬೇಗಂ ಅವರನ್ನು ಆರೋಪಿ ಮುಸ್ತಫಾ ಮಹಮ್ಮದ್ ಬಲವಂತದಿಂದ ಮದುವೆಯಾಗಿದ್ದರು’ ಎನ್ನಲಾಗಿದೆ.

ಬೆಂಕಿ ಹಚ್ಚಿದ ಪತಿ: ‘ಮಹ್ಮದ್ ಮುಸ್ತಫಾ ದುಶ್ಚಟಗಳ ದಾಸ, ಕಳ್ಳ ಎಂದು ಮದುವೆಯಾದ ನಂತರ ಗೊತ್ತಾಯಿತು. ಹೀಗಾಗಿ ನಾನು ಪತಿಯಿಂದ ದೂರವಿದ್ದು, ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದೆ. ಆದರೆ ತನ್ನೊಂದಿಗೆ ಇರುವಂತೆ ಪತಿ ಸದಾ ಒತ್ತಡ, ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹಿಂದೊಮ್ಮೆ ದೂರು ದಾಖಲಿಸಿದ್ದೆ. ನನ್ನ ಮೇಲಿನ ಸೇಡು ತೀರಿಸಿಕೊಳ್ಳಲು ಅಣ್ಣನ ಮನೆಗೆ ಬೆಂಕಿ ಹಚ್ಚಿದ್ದಾರೆ’ ಎಂದು ಹೀನಾ ಕೌಸರ್ ಬೇಗಂ ದೂರಿದರು.

‘ಬುಧವಾರ ಬೆಳಗಿನ ಜಾವ ಮನೆಯ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯದ್ದರಿಂದ ಬಾಗಿಲು ಕೆಳಗಿನಿಂದ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಕೃತ್ಯಕ್ಕೆ ಮುಸ್ತಫಾ ಅವರ ಕುಟುಂಬದ ಸದಸ್ಯರು ಬೆಂಬಲ ನೀಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜೆ. ಅವರು ಪರಿಶೀಲನೆ ನಡೆಸಿದರು. ನ್ಯೂ ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !