ಸೋಮವಾರ, ಜನವರಿ 17, 2022
19 °C
ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಕೈಗಾರಿಕಾ ಅದಾಲತ್

ಕಲಬುರಗಿ: ಕೆಐಎಡಿಬಿ ವಿಳಂಬ ಧೋರಣೆಗೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಕೈಗಾರಿಕಾ ಉದ್ದೇಶದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 15 ವರ್ಷಗಳಾದರೂ ಇನ್ನೂ ಮಂಜೂರು ಮಾಡಿಲ್ಲ. ನನ್ನ ಕೈಗಾರಿಕಾ ನಿವೇಶನದಲ್ಲಿ ಒತ್ತುವರಿ ಮಾಡಿಕೊಂಡು ಬೇರೆಯವರು ಹೋಟೆಲ್ ಕಟ್ಟಿಕೊಂಡಿದ್ದಾರೆ. ಆದರೂ ಅದನ್ನು ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ. ಆಗಲೇ ಹಣ ಕಟ್ಟಿ ನಿವೇಶನಕ್ಕೆ ಬೇಡಿ ಇಟ್ಟರೂ ಮತ್ತೆ ಹೆಚ್ಚುವರಿಯಾಗಿ ಹಣ ಕೊಡುತ್ತಿದ್ದಾರೆ’..

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳ ಉದ್ಯಮಿಗಳು ದೂರು ಆಲಿಸಲು ಸೋಮವಾರ ನಗರದಲ್ಲಿ ಆಯೋಜಿಸಿದ್ದ ಕೈಗಾರಿಕಾ ಅದಾಲತ್‌ನಲ್ಲಿ ಉದ್ಯಮಿಗಳು ಹೇಳಿಕೊಂಡ ದೂರುಗಳಿವು. ಇದರಲ್ಲಿ ಅತ್ಯಧಿಕ ಅಂದರೆ 38 ದೂರುಗಳು ಬೀದರ್‌ ಜಿಲ್ಲೆಯಿಂದಲೇ ಸಲ್ಲಿಕೆಯಾಗಿದ್ದವು. ಹೆಚ್ಚಿನ ಪಾಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಕಾರ್ಯವೈಖರಿಯನ್ನೇ ಪ್ರಶ್ನಿಸಲಾಗಿತ್ತು.

ದೂರುಗಳನ್ನು ಆಲಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಮುಂದಿನ ಒಂದು ವಾರದಲ್ಲಿ ದೂರುಗಳನ್ನು ಇತ್ಯರ್ಥಗೊಳಿಸದಿದ್ದರೆ ಅಮಾನತು ಮಾಡುವುದಾಗಿ ಬೀದರ್ ಜಿಲ್ಲಾ ಕೆಐಎಡಿಬಿ ಅಧಿಕಾರಿ ಪ್ರಕಾಶ್ ಅವರಿಗೆ ಸಭೆಯಲ್ಲಿಯೇ ಎಚ್ಚರಿಕೆ ನೀಡಿದರು.

ಬೀದರ್‌ನ ಉದ್ಯಮಿಗಳಾದ ಅಶೋಕ ವಡ್ಡೆ, ವಿಜಯಕುಮಾರ್‌ ಹಾಗೂ ಇತರರು ಅದಾಲತ್‌ನಲ್ಲಿ ಮಾತನಾಡಿ, ‘ಉದ್ಯಮಬಾಗ್‌ನಲ್ಲಿ ಕೈಗಾರಿಕೆ ಆರಂಭಕ್ಕೆ ಜಾಗ ಕಲ್ಪಿಸುವುದಾಗಿ ಹೇಳಿದ್ದರು. ಆದರೆ, ಅಲ್ಲಿ ಕೊಡಲಿಲ್ಲ. ಆಟೊ ನಗರದಲ್ಲಿ ಕೊಡುವುದಾಗಿ ಹೇಳಿದ್ದಾರೆ. ಅಲ್ಲಿಯೂ ಇನ್ನೂ ಮಂಜೂರಾತಿ ಸಿಕ್ಕಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವದವರಿಗೆ ಮಂಡಳಿಯು ಅಭಿವೃದ್ಧಿಪಡಿಸುವ ಕೈಗಾರಿಕಾ ಪ್ರದೇಶದಲ್ಲಿ ಸೂಕ್ತ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

2008ರಲ್ಲಿ ನಿವೇಶನ ಹಂಚಿಕೆ ಮಾಡಲು ₹ 5.40 ಲಕ್ಷ ಪಾವತಿ ಮಾಡಿದ್ದೆ. ಆಗಲೇ ಅಭಿವೃದ್ಧಿಗೊಳಿಸಿ ಹಸ್ತಾಂತರಗೊಳಿಸಿಲ್ಲ. ಇದೀಗ ಅದೇ ಜಾಗಕ್ಕೆ ₹ 19.50 ಲಕ್ಷ ಕೇಳುತ್ತಿದ್ದಾರೆ. ಹತ್ತಾರು ಬಾರಿ ಕಚೇರಿಗೆ ಅಲೆದಾಡಿಸುತ್ತಾರೆ. ಕಡತಗಳನ್ನೇ ಕಳೆದಿದ್ದಾರೆ. ಇದು ಉದ್ಯಮಿಗಳನ್ನು ನಡೆಸಿಕೊಳ್ಳುವ ರೀತಿಯೇ ಇದೆ ಎಂದು ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿದ ಸಚಿವ ನಿರಾಣಿ, ‘ಕಾಲಮಿತಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಿದ ಬಳಿಕ ಅದರ ಬೆಲೆ ಹೆಚ್ಚಾಗುತ್ತದೆ. ಈ ಬಗ್ಗೆ ಕರಾರು ಪತ್ರದಲ್ಲಿಯೂ ಇರುತ್ತದೆ’ ಎಂದರು.

ಕಲಬುರಗಿಯ ಉದ್ಯಮಿ ಸುರೇಶ್ ಮಾತನಾಡಿ, ‘ಕೆಐಎಡಿಬಿಯ ಆಸ್ತಿ ಒತ್ತುವರಿಯಾಗಿದ್ದರೂ ಒಂದು ತಕರಾರನ್ನೂ ಮಾಡಿಲ್ಲ. ಕಳೆದ 28 ವರ್ಷದಿಂದ ಈ ಬಗ್ಗೆ ಹೋರಾಟ ಮಾಡುತ್ತಿದ್ದೇನೆ. ಈಗ ಬಂದವರು ಕೊಂಚ ಸ್ಪಂದಿಸುತ್ತಿದ್ದಾರೆ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕೆಎಐಡಿಬಿ ಸಿಇಒ ಶಿವಶಂಕರ್ ಇತರರು ಇದ್ದರು.

ಸಚಿವರ ಸಾಧನೆಯ ವಿಡಿಯೊ ಪ್ರದರ್ಶನ!
ಕೈಗಾರಿಕಾ ಅದಾಲತ್‌ ಆರಂಭವಾಗುವುದಕ್ಕೂ ಮುನ್ನ ಸಚಿವ ಮುರುಗೇಶ ನಿರಾಣಿ ಅವರ ಸಾಧನೆಯ ವಿವರಗಳುಳ್ಳ ವಿಡಿಯೊವನ್ನು ಪ್ರದರ್ಶಿಸಲಾಯಿತು. ಅದರಲ್ಲಿ ಅವರು ಸಕ್ಕರೆ ಕಾರ್ಖಾನೆ ಆರಂಭಿಸಿ ಲಕ್ಷಾಂತರ ಉದ್ಯೋಗ ನೀಡಿದ್ದರ ಬಗ್ಗೆ ವಿವರಗಳಿದ್ದವು. ಜತೆಗೆ ಅವರು ಆರ್‌ಎಸ್‌ಎಸ್‌ನೊಂದಿಗಿನ ನಂಟು, ಬಿಜೆಪಿಯಲ್ಲಿ ಬೆಳೆದು ಬಂದ ಬಗ್ಗೆಯೂ ಮಾಹಿತಿ ಇತ್ತು.

ಪ್ರಸ್ತುತ ಕೈಗಾರಿಕಾ ಖಾತೆ ಹೊಂದಿದ್ದರೂ, ಗಣಿ ಮತ್ತು ಭೂವಿಜ್ಞಾನ ಸಚಿವ ಎಂದೇ ವಿಡಿಯೊದಲ್ಲಿ ಉಲ್ಲೇಖಿಸಲಾಗಿತ್ತು.

ಕೈಗಾರಿಕಾ ಅದಾಲತ್‌ಗೆ ಸಂಬಂಧಪಡದಿದ್ದರೂ ಬಿಜೆಪಿ ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ವೇದಿಕೆಯ ಮೇಲೆ ಕುಳಿತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು