ಮಂಗಳವಾರ, ಆಗಸ್ಟ್ 3, 2021
21 °C
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಜಿಲ್ಲಾ ಅರಣ್ಯಾಧಿಕಾರಿ ಬಿ.ಎನ್‌. ಚವ್ಹಾಣ ಅವರೊಂದಿಗೆ ಫೋನ್ ಇನ್

ಕಲಬುರ್ಗಿ ಜಿಲ್ಲೆಯ ಹಸಿರೀಕರಣಕ್ಕೆ ಹಲವು ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಲಬುರ್ಗಿ: ಜಿಲ್ಲೆಯ ಹಸರೀಕರಣ ಹಾಗೂ ಈಗಾಗಲೇ ಇರುವ ರಕ್ಷಿತಾರಣ್ಯದಲ್ಲಿ ಇಕೊ ಟೂರಿಸಂ ಬೆಳೆಸಲು ಜಿಲ್ಲಾ ಆರಣ್ಯ ಇಲಾಖೆ ಮುಂದಡಿ ಇಟ್ಟಿದೆ. ಚಿಂಚೋಳಿ ತಾಲ್ಲೂಕಿನ ಗೊಟ್ಟಂಗೊಟ್ಟದಿಂದ ಚಂದ್ರಂಪಳ್ಳಿ ಜಲಾಶಯದವರೆಗಿನ ಎಂಟು ಕಿ.ಮೀ. ಹಾದಿಯನ್ನು ಟ್ರೆಕ್ಕಿಂಗ್‌ಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಸೋಮವಾರ ಕಲಬುರ್ಗಿಯ ‘ಪ್ರಜಾವಾಣಿ’ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ (ಪ್ರಾದೇಶಿಕ ಅರಣ್ಯ) ಹಾಗೂ ಜಿಲ್ಲಾ ಅರಣ್ಯಾಧಿಕಾರಿ ಬಿ.ಎನ್. ಚವ್ಹಾಣ (ಸಾಮಾಜಿಕ ಅರಣ್ಯ) ಅವರು ಓದುಗರ ಪ್ರಶ್ನೆಗಳಿಗೆ ಉತ್ತರಿಸಿದರು.

* ಶಿವಾನಂದ ಅರಸಗೇರಿ, ಅಫಜಲಪುರ, ಸಂದೀಪ ಪಾಟೀಲ, ಕಲಬುರ್ಗಿ

ನನ್ನ ಹೊಲದಲ್ಲಿ 100 ಶ್ರೀಗಂಧದ, ನಿಂಬೆ ಸಸಿಗಳನ್ನು ನೆಟ್ಟಿದ್ದೇನೆ. ಇದಕ್ಕೆ ಏನಾದೂ ಆರ್ಥಿಕ ನೆರವು ಸಿಗುತ್ತದೆಯೇ?

ಅರಣ್ಯ ಕೃಷಿ ಯೋಜನೆಯಡಿ ಧನಸಹಾಯ ನೀಡಲು ಅವಕಾಶವಿದೆ. ಮೊದಲ ವರ್ಷ ಒಂದು ಸಸಿಗೆ ₹ 35, ಎರಡನೇ ವರ್ಷ ₹ 40 ಹಾಗೂ ಮೂರನೇ ವರ್ಷವೂ ಆ ಸಸಿ ಬದುಕುಳಿದಿದ್ದರೆ ರೈತರ ಖಾತೆಗೆ ₹ 50ನ್ನು ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ನಿಮ್ಮ ತಾಲ್ಲೂಕಿನ ವಲಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿ. ಅವರು ಮಾಹಿತಿ ಕೊಡುತ್ತಾರೆ. 

***

 * ಅಯ್ಯಣ್ಣ ಕರದಳ್ಳಿ, ಜೇವರ್ಗಿ

ಸಾಗವಾನಿ ಸಸಿಗಳನ್ನು ಬೆಳೆಸಬೇಕೆಂದಿದ್ದೇನೆ. ಉತ್ತಮ ಗುಣಮಟ್ಟದ ಸಸಿಗಳು ಎಲ್ಲಿ ಸಿಗುತ್ತವೆ

ಶಹಾಬಾದ್ ಬಳಿಯ ಭಂಕೂರ ಬಳಿ ಅರಣ್ಯ ಇಲಾಖೆಯ ನರ್ಸರಿ ಇದೆ. ಅಲ್ಲಿಂದ ಕಡಿಮೆ ದರದಲ್ಲಿ ಸಸಿಗಳನ್ನು ಪಡೆಯಬಹುದು. ಅದನ್ನು ನೆಡಲು ನರೇಗಾ ಯೋಜನೆಯಡಿ ಅವಕಾಶವಿದೆ. ನಿಮ್ಮ ಕುಟುಂಬದ ಸದಸ್ಯರು ಜಾಬ್‌ ಕಾರ್ಡ್‌ ಮಾಡಿಸಿದರೆ ಸಸಿಗೆ ತಗ್ಗು ತೋಡುವ ವೆಚ್ಚವನ್ನು ನರೇಗಾದಡಿ ಪಡೆಯಬಹುದು.

***

 * ವಿಜಯಕುಮಾರ ಜಾಧವ, ಸಂಗಾಪುರ

ಚಿಂಚೋಳಿ ತಾಲ್ಲೂಕಿನಲ್ಲಿರುವ ಅರಣ್ಯ ಭೂಮಿ ಎಷ್ಟಿದೆ ಎಂಬುದರ ಸರ್ವೆ ಮಾಡಿಸಿದ್ಧೀರಾ?

ಜಿಲ್ಲೆಯ ಹೆಚ್ಚಿನ ಅರಣ್ಯ ಪ್ರದೇಶ ಇರುವುದು ಚಿಂಚೋಳಿ ಅರಣ್ಯ ಪ್ರದೇಶದಲ್ಲಿ. ಹಿಂದೆ ಸರ್ವೆ ಆಗಿದೆ. ತೆಲಂಗಾಣ ರಾಜ್ಯದವರೂ ತಮ್ಮ ಅರಣ್ಯವನ್ನು ಪ್ರತ್ಯೇಕವಾಗಿ ಸರ್ವೆ ಮಾಡಿಸಿಕೊಂಡಿದ್ದಾರೆ. ಏನಾದರೂ ತಕರಾರುಗಳಿದ್ದರೆ ಮತ್ತೆ ಸರ್ವೆ ಮಾಡಿಸುತ್ತೇವೆ. ಅರಣ್ಯದಲ್ಲಿ ವಾಸಿಸುವವರಿಗೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಹಕ್ಕು ಪತ್ರವನ್ನು ನೀಡಲಾಗುತ್ತದೆ. ಆದರೆ, ಪಟ್ಟಾ ಮಾಡಿಕೊಡಲಾಗುವುದಿಲ್ಲ. ಆ ಭೂಮಿ ಯಾವತ್ತಿದ್ದರೂ ಅರಣ್ಯ ಇಲಾಖೆಗೇ ಸೇರಿರುತ್ತದೆ. ಹಾಗೆ ಉಳುಮೆ ಮಾಡಬಯಸುವವರು ಗ್ರಾಮ ಅರಣ್ಯ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಆ ಬಳಿಕ ಪರಿಶೀಲಿಸಿ ಉಳುಮೆ ಮಾಡಲು ಅವಕಾಶ ನೀಡುತ್ತೇವೆ.

***

* ಮಲ್ಲಪ್ಪ, ಬಸಪ್ಪ ಕೋಡ್ಲಿ, ಚಿಂಚೋಳಿ ತಾಲ್ಲೂಕು

ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯದ ಕೆಲಸ ಕೈಗೊಳ್ಳಬಹುದೇ?

ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದ ಜಿಲ್ಲೆಯ ಕಾರ್ಮಿಕರು ವಾಪಸಾಗಿದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಬಹುದು. ಆದರೆ, ಇದನ್ನು ಗ್ರಾಮ ಪಂಚಾಯಿತಿಯೇ ನಿರ್ವಹಣೆ ಮಾಡಬೇಕು. ರಸ್ತೆಬದಿ ಸಸಿಗಳನ್ನು ನೆಡಲು, ಅರಣ್ಯದಲ್ಲಿ ಬದು ತೋಡುವುದು, ಹೊಂಡ ನಿರ್ಮಾಣಕ್ಕೆ ಕೂಲಿಕಾರ್ಮಿಕರನ್ನು ಬಳಸಿಕೊಳ್ಳಲು ಅವಕಾಶವಿದೆ.

***

* ಗುರುರಾಜ, ಮಾದನ ಹಿಪ್ಪರಗಾ, ಆಳಂದ

ತರಹೇವಾರಿ ಸಸಿಗಳನ್ನು ಬೆಳೆಸಬೇಕೆಂದುಕೊಂಡಿದ್ದೇನೆ. ಎಲ್ಲಿ ಸಿಗುತ್ತವೆ?

ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸಿಗುತ್ತವೆ. ಈಗಾಗಲೇ ಶೇ 85ರಷ್ಟು ಸಸಿಗಳು ಖಾಲಿಯಾಗಿದ್ದು, ಬೇಗನೇ ಹೋದರೆ ಸಿಗುತ್ತವೆ.

***

* ಎಚ್‌.ಎಂ. ಶಿಂಧೆ

ಶಾಲೆ ಆವರಣದಲ್ಲಿ ಸಸಿ ನೆಡಲು ಇಲಾಖೆಯಿಂದ ಏನು ಅನುಕೂಲಗಳಿವೆ?

–ಶಾಲೆ ಆವರಣಗಳಲ್ಲಿ ಹಸಿರೀಕರಣಕ್ಕಾಗಿಯೇ ವಿಶೇಷ ಯೋಜನೆಗಳು ಇವೆ. ಮುಖ್ಯ ಶಿಕ್ಷಕರು ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರೆ, ಸಸಿ ನೀಡುವುದು, ನೆಡುವುದು ಮತ್ತು ಪೋಷಣೆ ಬಗ್ಗೆ ಮಾರ್ಗದರ್ಶನ ಮಾಡಲಾಗುವುದು.

***

* ರಾಮು, ಕಲಬುರ್ಗಿ: ಪದೇಪದೇ ಕಾಣಿಸಿಕೊಳ್ಳುತ್ತಿರುವ ಚಿರತೆ ಸೆರೆ ಹಿಡಿಯಲಾಯಿತೇ?

– 10 ದಿನಗಳ ಹಿಂದೆ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹೆಜ್ಜೆಗಳು ಮೂಡಿವೆ. ಅಲ್ಲಲ್ಲಿ ಕ್ಯಾಮೆರಾ ಅಳವಡಿಸಿದ್ದು, ಅದರಲ್ಲಿ ಕಾಣಿಸಿಲ್ಲ. ಅದರ ಓಡಾಟವನ್ನು ಪತ್ತೆ ಮಾಡಿ, ಸೆರೆ ಹಿಡಿಯಲಾಗುವುದು. ಹಲವು ಬಾರಿ ಚಿರತೆಗಳು ತಾನಾಗೇ ಸ್ವಂತ ಸ್ಥಳಕ್ಕೆ ಮರಳುತ್ತವೆ. ಜನ ಹೆದರಬೇಕಿಲ್ಲ.

***

ಕೊರೊನಾ ಬಳಿಕ ಶೇರಿಭಿಕನಳ್ಳಿ ಸ್ಥಳಾಂತರ ಕಾರ್ಯ

* ವಿಠಲ ಬಣ್ಣೋತ: ಶೇರಿಭಿಕನಳ್ಳಿ ತಾಂಡಾ ಸ್ಥಳಾಂತರ ಪ್ರಸ್ತಾವ ಎಲ್ಲಿಗೆ ಬಂತು?

–ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ಅರಣ್ಯ ಇಲಾಖೆ, ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ, ವರದಿ ಸಲ್ಲಿಸಿವೆ. ಸ್ಥಳಾಂತರಕ್ಕೆ ಜಂಟಿ ಸಮೀಕ್ಷೆ ನಡೆಸಬೇಕಿದೆ. ಸದ್ಯ ಕೊರೊನಾ ಉಪಟಳ ಹಾಗೂ ಲಾಕ್‌ಡೌನ್‌ ಕಾರಣ ಕೆಲಸಗಳು ವಿಳಂಬವಾಗಿವೆ. ಇದರ ಬಳಿಕ ಸಮೀಕ್ಷೆ ಆರಂಭವಾಗಲಿದೆ.

***

ಹಂದಿ ಬೇಟೆ, ಸೌರಬೇಲಿಗೆ ಅವಕಾಶ

* ಉಮೇಶ: ಅರಣ್ಯದ ಆಸುಪಾಸಿನ ಹೊಲಗಳಲ್ಲಿ ಕಾಡುಪ್ರಾಣಿಗಳು ಬೆಳೆ ಹಾನಿ ಮಾಡುತ್ತಿವೆ. ಪರಿಹಾರವೇನು?

–ಕಾಡುಹಂದಿಗಳಿಂದ ಬೆಳೆ ಹಾನಿ ಆಗುತ್ತಿದ್ದರೆ ಅವುಗಳನ್ನು ಬೇಟೆ ಆಡಲು ಅವಕಾಶ ನೀಡಲಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಹಂದಿ ಬೇಟೆ ಆಡಿದ ಬಳಿಕ ಅದರ ಕಳೇಬರವನ್ನು ಇಲಾಖೆಗೆ ತಂದು ಒಪ್ಪಿಸಬೇಕು. ಇತರ ವನ್ಯಮೃಗಗಳ ದಾಳಿ ತಡೆಯಲು ಸೋಲಾರ್‌ ತಂತಿಬೇಲಿ ನಿರ್ಮಿಸಿಕೊಳ್ಳಬೇಕು. ಇದಕ್ಕೆ ಶೇಕಡ 50ರಷ್ಟು ರಿಯಾಯಿತಿ ಕೂಡ ಇದೆ.

***

ವಾರ್ಷಿಕ ₹ 7 ಕೋಟಿ ಅನುದಾನ

ಅರಣ್ಯ ಅಭಿವೃದ್ಧಿ, ಕಾಡು ಪ್ರಾಣಿಗಳ ಸಂರಕ್ಷಣೆ, ನೀರು ಪೂರೈಕೆ, ಪೋಷಣೆ, ಅರಣ್ಯದಂಚಿನ ಗ್ರಾಮಗಳಲ್ಲಿ ಕಾಮಗಾರಿ ಹಾಗೂ ಸಿಬ್ಬಂದಿ ವೇತನ ಸೇರಿ ಅಂದಾಜು ₹ 7 ಕೋಟಿ ಅನುದಾನವಿದ್ದು, ಬಹುಪಾಲು ವೆಚ್ಚ ಮಾಡಲಾಗಿದೆ ಎಂದು ವಾನತಿ ಮಾಹಿತಿ ನೀಡಿದರು.

‘ಗೊಟ್ಟಂಗೊಟ್ಟ ಮತ್ತು ಕುಂಚಾವರಂ ಅರಣ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಏಕೆ ಆಗಿಲ್ಲ’ ಎಂದು ಮಾರುತಿ ಗಂಜಗೆರೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅರಣ್ಯದಲ್ಲಿನ ನಿಸರ್ಗ ಸೌಂದರ್ಯ, ಕೆರೆ ಅಭಿವೃದ್ಧಿ, ಚಾರಣ ಮುಂತಾದವುಗಳ ಅಭಿವೃದ್ಧಿಗೆ ಹಿಂದಿನಿಂದಲೂ ಪ್ರಸ್ತಾವ ಇದೆ. ಈಗಾಗಲೇ ₹ 2 ಕೋಟಿಯ ಕಾಮಗಾರಿಗಳು ಮಂಜೂರಾಗಿವೆ. ಕೊರೊನಾ ನಿಯಂತ್ರಣಕ್ಕೆ ಬಂದ ತಕ್ಷಣ ಆರಂಭಿಸಲಾಗುವುದು’ ಎಂದರು.

ಇಕೊ ಟೂರಿಸಂಗೆ ಹೇರಳ ಅವಕಾಶ

ಚಿಂಚೋಳಿ ತಾಲ್ಲೂಕಿನಲ್ಲಿ ಹರಡಿಕೊಂಡಿರುವ ಅರಣ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಬೆಳೆಸಲು ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ವಾರಾಂತ್ಯದಲ್ಲಿ ಸಾಕಷ್ಟು ಜನ ಪ್ರವಾಸಿಗರು ಟ್ರೆಕ್ಕಿಂಗ್‌ಗೆ ಬರುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ ಹೇಳಿದರು.

ಹಲವು ವಿಶಿಷ್ಟ ಪ್ರಾಣಿಗಳು ಈ ಅರಣ್ಯದಲ್ಲಿದ್ದು, ಇದಕ್ಕೆ ಪೂರಕವಾಗಿ ಎತ್ತಿಪೋತ ಜಲಪಾತ, ಚಂದ್ರಂಪಳ್ಳಿ ಜಲಾಶಯಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗಾಗಿ ಕಾಟೇಜ್‌ಗಳನ್ನು ನಿರ್ಮಿಸಲಾಗಿದೆ. ಡಾರ್ಮೆಟರಿಗಳನ್ನು ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ₹ 2 ಕೋಟಿ ಅನುದಾನವನ್ನೂ ನೀಡಿದೆ. ಎಂಟು ಕಿ.ಮೀ. ಕಾಲುದಾರಿಯನ್ನು ಟ್ರೆಕ್ಕಿಂಗ್‌ ಮಾಡುವವರಿಗಾಗಿ ಗುರುತಿಸಲಾಗಿದೆ.

ಚಿರತೆ, ತೋಳ, ನರಿ, ನವಿಲು, ಮುಳ್ಳುಹಂದಿ, ಕೃಷ್ಣಮೃಗ, ಜಿಂಕೆಗಳಿವೆ. ಹುಲಿ ಇರುವುದು ಪತ್ತೆಯಾಗಿಲ್ಲ ಎಂದು ವಾನತಿ ತಿಳಿಸಿದರು.

‘ಶೇ 90ರಷ್ಟು ಸಸಿ ಉಳಿಸಿಕೊಳ್ಳಲು ಯತ್ನ’

ಸಾಮಾಜಿಕ ಅರಣ್ಯ ವಿಭಾಗದಿಂದ ಪ್ರತಿ ವರ್ಷವೂ ಲಕ್ಷಾಂತರ ಸಸಿಗಳನ್ನು ನೆಡುತ್ತೇವೆ. ಅವುಗಳ ಪೈಕಿ ಶೇ 90ರಷ್ಟು ಸಸಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದಾಗ್ಯೂ, ಶೇ 60ರಷ್ಟು ಸಸಿಗಳು ಬೆಳೆಯುತ್ತವೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಬಿ.ಎನ್. ಚವ್ಹಾಣ ತಿಳಿಸಿದರು.

ಪ್ರತಿವರ್ಷ ಸರಾಸರಿ 125 ಹೆಕ್ಟೇರ್‌ನಲ್ಲಿ ಸಸಿಗಳನ್ನು ನೆಟ್ಟು ಪೋಷಿಸುತ್ತೇವೆ. ಮುಖ್ಯವಾಗಿ ಸರ್ಕಾರಿ ಶಾಲಾ–ಕಾಲೇಜು, ವಿಶ್ವವಿದ್ಯಾಲಯಗಳು, ವಸತಿ ನಿಲಯಗಳಲ್ಲಿ ಸಸಿಗಳನ್ನು ನೆಡುತ್ತೇವೆ. ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 6 ಸಾವಿರ ಸಸಿಗಳನ್ನು ನೆಡಲಾಗಿದೆ. ಅರಣ್ಯ ಕೃಷಿ ಪ್ರೋತ್ಸಾಹ ಹಾಗೂ ನರೇಗಾ ಯೋಜನೆಯಡಿ ಸಸಿಗಳನ್ನು ನೆಡಲು ಪ್ರೋತ್ಸಾಹ ನೀಡಲಾಗುತ್ತದೆ ಎಂದರು.

ಜಿಲ್ಲೆಯ ಅರಣ್ಯ ನೋಟ

35,000 ಹೆಕ್ಟೇರ್‌ ಜಿಲ್ಲೆಯ ಒಟ್ಟು ಅರಣ್ಯ ಪ್ರದೇಶ

13,488 ಹೆಕ್ಟೇರ್ ಚಿಂಚೋಳಿ ತಾಲ್ಲೂಕಿನಲ್ಲಿ ಹರಡಿದಿದೆ

95 ಹೆಕ್ಟೇರ್‌ ಜಿಲ್ಲೆಯ ರಕ್ಷಿತ ಅರಣ್ಯದ ವ್ಯಾಪ್ತಿ

125 ಹೆಕ್ಟೇರ್‌ ಸಾಮಾಜಿಕ ಅರಣ್ಯ ನಿರ್ಮಾಣದ ವಾರ್ಷಿಕ ಗುರಿ

47 ವಾರ್ಷಿಕ ಮಳೆಯ ದಿನಗಳು

715 ಮಿ.ಮೀ ಸರಾಸರಿ ವಾಡಿಕೆಯ ಮಳೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು