ಭಾನುವಾರ, ಆಗಸ್ಟ್ 14, 2022
26 °C
ಬೀದಿ ಬದಿ ವ್ಯಾಪಾರ, ಆಟೊ ಸಂಚಾರಕ್ಕೆ ಅವಕಾಶ; ರಸ್ತೆಗಳಲ್ಲಿ ಜನವೋ ಜನ

ಕಲಬುರ್ಗಿ: ಮಾರುಕಟ್ಟೆಯಲ್ಲಿ ಹೊಸ ಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಸೋಂಕು ಜಿಲ್ಲೆಯಲ್ಲಿ ಕಡಿಮೆಯಾದ ಪ್ರಯುಕ್ತ ಜಿಲ್ಲಾಡಳಿತ ಅತ್ಯಗತ್ಯ ವಸ್ತುಗಳ ಖರೀದಿ ಹಾಗೂ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಿದ್ದರಿಂದ ಜಿಲ್ಲೆಯ ವಿವಿಧ ಪಟ್ಟಣ, ಗ್ರಾಮಗಳಿಂದ ಜನರು ಖರೀದಿಗಾಗಿ ಸೋಮವಾರ ನಗರಕ್ಕೆ ಬಂದರು. ಹೀಗಾಗಿ ಸೂಪರ್ ಮಾರ್ಕೆಟ್‌ನಲ್ಲಿ ಜನಜಂಗುಳಿ ಕಂಡು ಬಂತು.

ಬೆಳಿಗ್ಗೆಯಿಂದಲೇ ಆಟೊ, ಕಾರು, ಟಂ ಟಂ, ಬೈಕ್‌ಗಳಲ್ಲಿ ಮಾರುಕಟ್ಟೆಗೆ ಬಂದ ಜನರು ತಮಗೆ ಬೇಕಾದ ತರಕಾರಿ, ಕಿರಾಣಿ ಸಾಮಾನು, ಬಾಂಡೆ ಸಾಮಾನು, ಬಟ್ಟೆಗಳನ್ನು ಖರೀದಿಸಲು ಬಂದಿದ್ದರು. ಹೀಗಾಗಿ ಮಾರ್ಕೆಟ್‌ನ ಕಪ್ಪಡ ಬಜಾರ್, ಕಿರಾಣಾ ಬಜಾರ್, ಚಪ್ಪಲ್ ಬಜಾರ್‌, ತರಕಾರಿ ಮಾರುಕಟ್ಟೆ, ಹಣ್ಣಿನ ಮಾರುಕಟ್ಟೆ ಹೀಗೆ ಎಲ್ಲಿ ನೋಡಿದಲ್ಲೆಲ್ಲ ಜನರು ಕಾಣಿಸಿಕೊಂಡರು. ಸರ್ಕಾರವೇ ಮಧ್ಯಾಹ್ನದವರೆಗೆ ಜನ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಪೊಲೀಸರು ತಡೆಯಲಿಲ್ಲ.

ಹಲವು ದಿನಗಳಿಂದ ಮನೆಯಲ್ಲಿ ಅಗತ್ಯ ವಸ್ತುಗಳು ಖಾಲಿಯಾಗಿ ಪರಿತಪಿಸುತ್ತಿದ್ದ ಸಾರ್ವಜನಿಕರು ತಮಗೆ ಬೇಕಾದಷ್ಟು ಖರೀದಿಸಿದರು. ಜೊತೆಗೆ, ಲಗೇಜ್ ಬ್ಯಾಗ್, ಪಾತ್ರೆಗಳು, ಮಕ್ಕಳಿಗೆ ಹಾಗೂ ತಮಗೆ ಬಟ್ಟೆಗಳು, ನೆಲ ಹಾಸು, ಕಿರಾಣಿ ಸಾಮಗ್ರಿಗಳು, ಹೂವು, ಮಕ್ಕಳಿಗೆ ಆಟಿಕೆ ಸಾಮಾನುಗಳು, ಹಣಿಗೆ, ಕನ್ನಡಿ, ಚಹಾ ಕಪ್, ಪ್ಲಾಸ್ಟಿಕ್ ಬಿಂದಿಗೆ, ಬೇಕರಿ ತಿನಿಸುಗಳನ್ನು ಖರೀದಿಸಿಕೊಂಡು ಊರಿನತ್ತ ತೆರಳಿದರು.

ವಾಸ್ತವವಾಗಿ ಜಿಲ್ಲಾಡಳಿತ ಅಟೊ ಸಂಚಾರ ಹಾಗೂ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಿದ್ದು, ಬಟ್ಟೆ ಹಾಗೂ ಬಾಂಡೆ ಸಾಮಾನು ಅಂಗಡಿಗಳಿಗೆ ಅನುಮತಿ ನೀಡಿರಲಿಲ್ಲ. ಆದರೂ, ಕೆಲವು ಕಡೆ ಬಟ್ಟೆ, ಪಾತ್ರೆ ಅಂಗಡಿಗಳು ತೆರೆದಿದ್ದವು. ಸೂಪರ್‌ ಮಾರ್ಕೆಟ್‌ನ ಹಳೇ ಚೌಕ ಪೊಲೀಸ್ ಠಾಣೆಯ ರಸ್ತೆಯಲ್ಲಿ ಪಾತ್ರೆ ಮಾರಾಟ ಅಂಗಡಿಗಳವರು ಪೊಲೀಸರ ಭಯಕ್ಕೆ ಶಟರ್‌ಗಳನ್ನು ಎಳೆದು ವಹಿವಾಟು ನಡೆಸಿದರು. ಪೊಲೀಸರು ಮೈಕ್ ಹಾಕಿಕೊಂಡು ಜೀಪ್‌ನಲ್ಲಿ ಬರುತ್ತಿದ್ದಂತೆಯೇ ಶಟರ್ ಎಳೆದಿದ್ದರಿಂದ ಒಳಗಿದ್ದವರು ಕೆಲ ಹೊತ್ತು ಅಲ್ಲಿಯೇ ಕುಳಿತುಕೊಳ್ಳಬೇಕಾಯಿತು. ವಹಿವಾಟು ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮಳೆ ಬಂದಿದ್ದರಿಂದ ಮಳಿಗೆಗಳ ಅಡಿಯಲ್ಲೇ ನಿಂತು ರಕ್ಷಣೆ ಪಡೆದರು.

ಸುಮಾರು ಎರಡು ತಿಂಗಳಿಂದ ಜನರಿಲ್ಲದೇ ಭಣಗುಡುತ್ತಿದ್ದ ಎಂಎಸ್‌ಕೆ ಮಿಲ್ ರಸ್ತೆ, ಎಸ್‌ವಿಪಿ ವೃತ್ತ, ಜಗತ್ ವೃತ್ತ, ಸೇಡಂ ರಸ್ತೆಗಳು ಎಂದಿನಂತೆ ವಾಹನಗಳಿಂದ ತುಂಬಿ ತುಳುಕಿದವು.

ನಗರದ ಜನರು ತರಕಾರಿ, ಹಣ್ಣು, ಕಿರಾಣಿ ಸಾಮಾನುಗಳಿಗಾಗಿ ಮಾರುಕಟ್ಟೆಗೆ ಬಂದಿದ್ದರೆ, ಹಳ್ಳಿಗಳಿಂದ ರೈತರು ಬೀಜ, ಗೊಬ್ಬರ ಖರೀದಿಗಾಗಿ ಗಂಜ್‌ನ ವಿವಿಧ ಬೀಜ, ಗೊಬ್ಬರ ಮಳಿಗೆಗಳ ನಿಂತಿದ್ದರು. ಮದುವೆ ಕಾರ್ಯಗಳೂ ಅಲ್ಲಲ್ಲಿ ನಡೆಯುತ್ತಿದ್ದುದರಿಂದ ಅಲ್ಮೇರಾ, ಕುರ್ಚಿ, ಮಂಚಗಳನ್ನೂ ಖರೀದಿಸಿ ಟಂಟಂಗಳಲ್ಲಿ ಖರೀದಿಸಿ ಊರಿಗೆ ಮರಳಿದರು.

ಆಟೊ ಸಂಚಾರಕ್ಕೂ ಅವಕಾಶ ನೀಡಿದ್ದರಿಂದ ಸಾವಿರಾರು ಆಟೊಗಳು ರಸ್ತೆಗಿಳಿದು ಜನರನ್ನು ಕರೆದುಕೊಂಡು ಸಾಗಿದವು. ಬಹುತೇಕ ಸಂದರ್ಭದಲ್ಲಿ ಒಂದು ಆಟೊದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಎಂಬ ನಿಯಮ ಪಾಲನೆಯಾಗಲಿಲ್ಲ.

‘ಎರಡು ತಿಂಗಳಿಂದ ಸರಿಯಾದ ವ್ಯಾಪಾರ ಇಲ್ಲದೇ ಇದ್ದುದರಿಂದ ಮನೆ ನಡೆಸುವುದೇ ಕಷ್ಟವಾಗಿತ್ತು. ಕೊರೊನಾ ಕಡಿಮೆಯಾಗಿದ್ದರಿಂದ ಸರ್ಕಾರ ವಹಿವಾಟಿಗೆ ಅವಕಾಶ ಕೊಟ್ಟಿದ್ದು ಒಳ್ಳೆಯದಾಗಿದೆ. ಇದರಿಂದ ಕೊಂಚ ನಿರಾಳವಾಗಿದ್ದೇನೆ’ ಎಂದು ಚೌಕ್ ಬಳಿ ಇರುವ ಬೇಕರಿಯೊಂದರ ವ್ಯಾಪಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು