ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ವರ್ಗಕ್ಕೆ ಬಿಜೆಪಿಯಿಂದ ಭಾರಿ ಅನ್ಯಾಯ’

ಸಿದ್ದರಾಮಯ್ಯ ಸುತ್ತ ಗಿರಕಿ ಹೊಡೆದ ಬಿಜೆಪಿ ಸಮಾವೇಶ: ಮಹಾಂತೇಶ
Last Updated 1 ನವೆಂಬರ್ 2022, 11:46 IST
ಅಕ್ಷರ ಗಾತ್ರ

ಕಲಬುರಗಿ: ‘ಹಿಂದಿನಿಂದಲೂ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿಕೊಂಡೆ ಬಂದ ಬಿಜೆಪಿಯು ಈಚೆಗೆ ಕಲಬುರಗಿಯಲ್ಲಿ ಹಿಂದುಳಿದ‌ ವರ್ಗಗಳ ಸಮಾವೇಶ ಮಾಡಿದ್ದು ನಾಚಿಕೆಗೇಡಿನ ಸಂಗತಿ’ ಎಂದು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ ಎಸ್.ಕೌಲಗಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಕೃಷ್ಣಮೂರ್ತಿ ಎಂಬುವವರ ಪರ ಬಿಜೆಪಿ ಹಿರಿಯ ನಾಯಕ ರಾಮಜೋಯಿಸ್ ವಕಾಲತ್ತು ವಹಿಸಿದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿರೋಧಿಸಿದ ಬಿಜೆಪಿಯವರಿಗೆ ಹಿಂದುಳಿದ ವರ್ಗಗಳ ಸಮಾವೇಶ ಮಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

ಬಲಿಜ ಸಮಾನ ಪದದಿಂದ ಕರೆಯಲಾಗುವ ಆರ್ಥಿಕವಾಗಿ ಮುಂದುವರಿದ ಜಾತಿಗಳನ್ನು 2ಎಗೆ ಸೇರಿಸಿ ನಿಜವಾದ ಹಿಂದುಳಿದ ವರ್ಗಗಳಿಗೆ ಬಿಜೆಪಿ ದೊಡ್ಡ ಅನ್ಯಾಯ ಎಸಗಿದೆ. ಅಲ್ಲದೇ ನ್ಯಾಯಮೂರ್ತಿ ಸುಭಾಶ್ ಬಿ.ಅಡಿ ನೇತೃತ್ವದ ಆಯೋಗ ರಚಿಸಿ ಮತ್ತಷ್ಟು ಜಾತಿಗಳನ್ನು ಸೇರಿಸುವ ಷಡ್ಯಂತ್ರ ನಡೆದಿದೆ ಎಂದು ದೂರಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಆರಂಭಿಸಿದ್ದ 'ವಿದ್ಯಾಸಿರಿ' ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಸಮುದಾಯ ಭವನ ಹಾಗೂ ಹಾಸ್ಟೆಲ್ ನಿರ್ಮಾಣಕ್ಕಾಗಿ ಒದಗಿಸಿದ್ದ ₹ 500 ಕೋಟಿ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಗೊಂಡ ಕುರುಬ, ಕೋಲಿ ಕಬ್ಬಲಿಗ, ತಳವಾರ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಕಡತಗಳು ಕಳೆದ 8 ವರ್ಷಗಳಿಂದ ದೆಹಲಿಯಲ್ಲೇ ಕೊಳೆಯುತ್ತಿದೆ. ಇದರ ಬಗ್ಗೆ ಚಕಾರವೆತ್ತದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಮಾವೇಶದಲ್ಲಿ ಪರಿಶಿಷ್ಟ ಪಂಗಡದ ತಳವಾರ, ಪರಿವಾರ ಸಮುದಾಯಗಳ ಆದೇಶ ಪತ್ರಗಳನ್ನು ಎತ್ತಿ ತೋರಿಸಿ ಹಿಂದುಳಿದ ವರ್ಗಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಹಿಂದುಳಿದ ವರ್ಗಗಳ ಸಮಾವೇಶವು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸುತ್ತ ಗಿರಕಿ ಹೊಡೆದಿದೆ. ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡ ಬಿಜೆಪಿ ನಾಯಕರು, ಹಿಂದುಳಿದ ವರ್ಗಗಳಿಗೆ ಅವರ ಕೊಡುಗೆಯನ್ನು ಪ್ರಶ್ನಿಸಿದ್ದಾರೆ. ಆದರೆ ಡಿ.ದೇವರಾಜು ಅರಸು ನಂತರ ಹಿಂದುಳಿದ ವರ್ಗಗಳಿಗೆ ಅತಿಹೆಚ್ಚು ಯೋಜನೆ ಕೊಟ್ಟವರು ಸಿದ್ದರಾಮಯ್ಯ. ಅವರ ಕಾರ್ಯಕ್ರಮಗಳನ್ನು ಈಗಿನ ಬಿಜೆಪಿ ರದ್ದುಪಡಿಸಿದೆ. ಕಾಗಿನೆಲೆ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಆರಂಭಿಸಿದ್ದು ಸಿದ್ದರಾಮಯ್ಯ ಎಂದು ಹೇಳಿದರು.

ಹಿಂದುಳಿದ ಸಮಾವೇಶದಲ್ಲಿ ಬಹುತೇಕ ಪರಿಶಿಷ್ಟ ಪಂಗಡ ಹಾಗೂ ಬಿಜೆಪಿ ಬೆಂಬಲಿತ ಮೇಲ್ವರ್ಗಗಳ ಜನರಷ್ಟೆ ಸೇರಿದ್ದರು. ಸಿದ್ದರಾಮೋತ್ಸವಕ್ಕೆ ಸಡ್ಡು ಹೊಡೆಯಲು ಆಯೋಜಿಸಿದ್ದ ಈ ಸಮಾವೇಶದಲ್ಲಿ ಕೇವಲ ಒಂದು ಲಕ್ಷದಷ್ಟು ಜನ ಸೇರಿದ್ದರು ಎಂದರು.

ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿ ಮತ ತೆಗೆದುಕೊಳ್ಳಲು ಆಗುವುದಿಲ್ಲ.ಬಿಜೆಪಿಯಿಂದ ಹಿಂದುಳಿದ ವರ್ಗಗಳಿಗೆ ಭಾರಿ ಅನ್ಯಾಯವಾಗಿದೆ. ಬಿಜೆಪಿಗೆ ನಿಜವಾಗಿಯೂ ಹಿಂದುಳಿದ ವರ್ಗಗಳ ಮೇಲೆ ಕಾಳಜಿ ಇದ್ದರೆ ಗೊಂಡ ಕುರುಬ, ಗಂಗಾಮತ ಕೋಲಿ-ಕಬ್ಬಾಲಿಗ ಸಮುದಾಯವನ್ನು ಎಸ್ಟಿಗೆ ಸೇರಿಸಿ ಎಂದು ಸವಾಲು ಹಾಕಿದರು.

ಸುದ್ದಿ ಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಸುಭಾಷ ಪಂಚಾಳ, ಕಾರ್ಯದರ್ಶಿ ಹಣಮಯ್ಯ ಆಲೂರ, ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT