ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎನ್‌ಎಂ ಕೋರ್ಸ್‌ ರದ್ದತಿ ಇಲ್ಲ

ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ ಮಾಡಿದ ರದ್ದತಿ ಶಿಫಾರಸನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ
Last Updated 31 ಅಕ್ಟೋಬರ್ 2020, 10:57 IST
ಅಕ್ಷರ ಗಾತ್ರ

ಕಲಬುರ್ಗಿ: ‘ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ‘ಡಿಪ್ಲೊಮಾ ಇನ್‌ ಜನರಲ್‌ ನರ್ಸಿಂಗ್‌ ಮತ್ತು ಮಿಡ್‌ ವೈಫರಿ (ಜಿಎನ್‌ಎಂ)’ ಕೋರ್ಸ್‌ ಅನ್ನು ರದ್ದು ಪಡಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಹಾಗಾಗಿ, ಇನ್ನು ಮುಂದೆ ಕೂಡ ಈ ಕೋರ್ಸ್‌ ಮಾಡುವವರು ಯಾವುದೇ ಹಿಂಜರಿಕೆ ಪಡುವ ಅಗತ್ಯವಿಲ್ಲ’ ಎಂದು ಹೈದರಾಬಾದ್‌ ಕರ್ನಾಟಕ ನರ್ಸಿಂಗ್‌ ಮ್ಯಾನೇಜರ್‌ಮೆಂಟ್‌ ಅಸೋಸಿಯೇಷನ್‌ ಹಿರಿಯ ಉಪಾಧ್ಯಕ್ಷ ಚಂದ್ರಕಾಂತ ಗದ್ದಗಿ ತಿಳಿಸಿದರು.

‘2021ರಿಂದ ಜಿಎನ್‌ಎಂ ಕೋರ್ಸ್‌ ರದ್ದು ಮಾಡುವಂತೆ ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ (ಐಎನ್‌ಸಿ)ನವರು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಸಂಘಟನೆಗಳು ಈ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದವು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಈ ಪದವೀ ಪಡೆದ ಹಲವಾರು ಜನ ನಿರುದ್ಯೋಗಿ ಆಗುತ್ತಾರೆ ಎಂಬ ಅಂಶವನ್ನು ಕೇಂದ್ರಕ್ಕೆ ಮನವರಿಕೆ ಮಾಡಿದೆವು. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರು ನಮ್ಮ ಮನವಿಯನ್ನು ಕೂಲಂಕಶವಾಗಿ ಪರಿಶೀಲಿಸಿ ಶಿಫಾರಸು ತರಿಸ್ಕರಿದ್ದಾರೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಐಎನ್‌ಸಿಯು ಮೂರು ವರ್ಷದ ‘ಜಿಎನ್‌ಎಂ’ ಕೋರ್ಸ್‌ ರದ್ದುಪಡಿಸಿ, ಅದರನ್ನು ನಾಲ್ಕು ವರ್ಷದ ಬಿಎಸ್‌ಸಿಯೊಂದಿಗೆ ವಿಲೀನ ಮಾಡುವಂತೆ ಕೋರಿತ್ತು. ಜಿಎನ್‌ಎಂಗೆ ಕಲೆ, ವಾಣಿಜ್ಯ ಕ್ಷೇತ್ರ ಆಯ್ದುಕೊಂಡವರೂ ಸೇರಬಹುದಾಗಿದೆ. ಆದರೆ, ಬಿಎಸ್‌ಸಿ ಜತೆಗೆ ವಿಲೀನ ಮಾಡಿದರೆ ಕೇವಲ ವಿಜ್ಞಾನ ವಿಭಾಗದವರು ಮಾತ್ರ ಅರ್ಹರಾಗುತ್ತಾರೆ. ಇದರಿಂದ ಕಲಾ, ವಾಣಿಜ್ಯ ಹಾಗೂ ತತ್ಸಮಾನ ಕೋರ್ಸ್‌ ಮುಗಿಸಿದ ಸಾವಿರಾರು ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿರಲಿಲ್ಲ’ ಎಂದು ಕಾರ್ಯದರ್ಶಿ ಡಾ.ಕಿರಣ ಜಾರ್ಜ್‌ ಹೇಳಿದರು.

‘ಮೇಲಾಗಿ ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡಲು ಜಿಎನ್‌ಎಂ ಪದವಿ ಪಡೆದವರೇ ಹೆಚ್ಚಾಗಿ ಹೋಗುತ್ತಾರೆ. ಬಿಎಸ್‌ಸಿ ನಂತರ ಪದವಿ ಪಡೆದವರು ಕೇವಲ ನಗರದ ಪ್ರದೇಶಗಳಲ್ಲಿ ಕೇವಲ ಬೋಧನಾ ಕ್ಷೇತ್ರಕ್ಕೆ ಆದ್ಯತೆ ಕೊಡುತ್ತಾರೆ. ಹಾಗಾಗಿ, ಜಿಎನ್‌ಎಂ ಅನ್ನು ಮೊದಲಿನಂತೆಯೇ ಮುಂದುವರಿಸುವುದ ಬಹಳ ಅಗತ್ಯವಾಗಿದೆ’ ಎಂದೂ ಅವರು ವಿವರಿಸಿದರು.

‘ಅಸೋಸಿಯೆಷನ್‌ನಲ್ಲಿ ಈ ಭಾಗದ ಆರೂ ಜಿಲ್ಲೆಯ ಪದಾಧಿಕಾರಿಗಳು ಇದ್ದೇವೆ. ಹಾಗಾಗಿ ಸಂಘಟನೆಯ ಹೆಸರನ್ನು ಕಲ್ಯಾಣ ಕರ್ನಾಟಕ ನರ್ಸಿಂಗ್‌ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ ಎಂದು ಬದಲಾಯಿಸಲು ನಿರ್ಧರಿಸಲಾಗಿದೆ. ಜತೆಗೆ, ಕೋವಿಡ್‌ನಿಂದ ಮೃತಪಟ್ಟ ಶುಶ್ರೂಷಕರಿಗೆ ಸರ್ಕಾರವು ತಕ್ಷಣಕ್ಕೆ ಪರಿಹಾರ ಬಿಡುಗಡೆ ಮಾಡಲು ಆಗ್ರಹಿಸುತ್ತೇವೆ’ ಎಂದೂ ಹೇಳಿದರು.‌

ಹಿರಿಯ ಉಪಾಧ್ಯಕ್ಷ ರೆಹೀಮ್‌ ಸಯ್ಯದ್‌ ಬ್ಯಾರಿ, ಬಸವರಾಜ ಯಾಡೆ, ಎಸ್‌.ಎಂ. ಜಹಾಗೀರದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT