ಗುರುವಾರ , ಮೇ 6, 2021
22 °C
ಜಿಲ್ಲಾಡಳಿತಕ್ಕೆ ನಿರ್ದೇಶನ

ಎರಡನೇ ಅಲೆ ತಡೆಗೆ ಸಿದ್ಧರಾಗಿ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ಮುಂದಿನ ದಿನದಲ್ಲಿ ಎರಡನೇ ಅಲೆ ಉಲ್ಬಣಗೊಂಡಲ್ಲಿ ಇದರ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

ನಗರದಲ್ಲಿ ಮಂಗಳವಾರ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ‘ಸೋಂಕು ನಿಯಂತ್ರಣಕ್ಕೆ ಕೋವಿಡ್ ಲಸಿಕೆ ನೀಡುವತ್ತ ಹೆಚ್ಚು ಗಮನಹರಿಸಬೇಕು. ಅಗತ್ಯವಿದ್ದರೆ ಶಿಬಿರ ಆಯೋಜಿಸಿ. ಎರಡನೇ ಡೋಸ್ ಪಡೆಯಲು ನಿರಾಸಕ್ತಿ ಏಕೆ ಉಂಟಾಗಿದೆ ಎಂದು ಪತ್ತೆ ಮಾಡಬೇಕು. ಎರಡನೇ ಡೋಸ್ ಹಾಕಿಸಿಕೊಳ್ಳದವರಿಗೆ ಕೂಡಲೇ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಬೇಕು’ ಎಂದರು.

‘ಸೋಂಕು ನಿಯಂತ್ರಣಕ್ಕೆ ತಪಾಸಣೆ, ಸೋಂಕಿತರ ಸಂಪರ್ಕಕ್ಕೆ ಬಂದ ಸಂಪರ್ಕಿತರ ಪತ್ತೆ ಕಾರ್ಯಾಚರಣೆ ಮತ್ತು ಐಸೋಲೇಟ್ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಕಳೆದ ವರ್ಷ ಕೋವಿಡ್ ಸೋಂಕು ಕಂಡುಬಂದ ನಂತರ ಗ್ರಾಮೀಣ ಪ್ರದೇಶದಲ್ಲಿ ಜನಪ್ರತಿನಿಧಿಗಳು ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸಿ ಜಾಗೃತಿ ಮೂಡಿಸಿದ್ದು ಫಲಪ್ರದವಾಗಿದೆ. ಅದನ್ನು ಮತ್ತೆ ರಚಿಸಿ ಕಾರ್ಯಗತಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಶ್ ಸಾಸಿ ಅವರಿಗೆ ಸೂಚಿಸಿದರು.

‘ಮಹಾರಾಷ್ಟ್ರದ ಗಡಿಗೆ ಜಿಲ್ಲೆ ಹೊಂದಿಕೊಂಡಿದ್ದರಿಂದ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಗಡಿ ಗ್ರಾಮದ ಗ್ರಾಮಸ್ಥರು ನೆರೆಯ ರಾಜ್ಯದ ಗಡಿಗೆ ದಿನ ಓಡಾಡುವರು ಇರುತ್ತಾರೆ. ಇಂತಹ ಸಂದರ್ಭದಲ್ಲಿ ಗಡಿ ಗ್ರಾಮದಲ್ಲಿ ರ್‍ಯಾಂಡಮ್ ತಪಾಸಣೆ ನಡೆಸಬೇಕು’ ಎಂದರು.

ಜಾಗೃತಿ ಕಾರ್ಯಕ್ರಮ ನಿರಂತರವಾಗಿರಲಿ: ‘ಕೊರೊನಾದೊಂದಿಗೆ ಬದುಕು ಸಾಗಿಸುವುದು ಅನಿವಾರ್ಯವಾಗಿದೆ. ಮಾಸ್ಕ್ ಧರಿಸುವುದು, ಅಂತರ ಪರಿಪಾಲನೆ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರ ಸಾಗಲಿ’ ಎಂದೂ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ‘ಜಿಲ್ಲೆಯಲ್ಲಿ ಫೆಬ್ರವರಿ ಮೊದಲನೇ ವಾರದಲ್ಲಿ ಶೇ 1.09ರಷ್ಟು ಕೋವಿಡ್ ಪಾಸಿಟಿವಿಟಿ ಪ್ರಮಾಣವಿದ್ದರೆ ಮಾರ್ಚ್‌ ನಾಲ್ಕನೇ ವಾರದಲ್ಲಿ ಇದರ ಪ್ರಮಾಣ ಶೇ 2.2ಕ್ಕೆ ಹೆಚ್ಚಳಗೊಂಡಿದೆ. ಕಳೆದ ಒಂದು ವಾರದಲ್ಲಿ 805 ಕೋವಿಡ್ ಪಾಸಿಟಿವ್ ವರದಿಯಾಗಿದ್ದು, ಇದರಲ್ಲಿ ನಗರದಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ’ ಎಂದು ಮಾಹಿತಿ ನೀಡಿದರು.

‘ಗಂಟಲು ಮಾದರಿಗಳ ತಪಾಸಣೆಗೆ ಪ್ರತಿದಿನ 2,000 ಗುರಿ ಇದ್ದರೂ ಜಿಲ್ಲೆಯಲ್ಲಿ 50,00 ಸ್ಯಾಂಪಲ್ಸ್‍ಗಳನ್ನು ಪಡೆದು ತಪಾಸಣೆ ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದ 25 ರಿಂದ 30 ಜನರನ್ನು ಪತ್ತೆ ಹಚ್ಚಿ ಅವರನ್ನು ಸಹ ತಪಾಸಣೆಗೆ ಒಳಪಡಿಸುತ್ತಿದ್ದೇವೆ. ಆದರೆ, ಟ್ರಾವೆಲಿಂಗ್‌ ಹಿಸ್ಟರಿ ಯಾರದೂ ಕಂಡುಬಂದಿಲ್ಲ’ ಎಂದರು.

ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್‌, ನಗರ ಪೊಲೀಸ್ ಆಯುಕ್ತ ಎನ್. ಸತೀಷಕುಮಾರ, ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ ಪಾಂಡ್ವೆ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್ ಸೇರಿದಂತೆ ತಹಶೀಲ್ದಾರರು, ಆರೋಗ್ಯಾಧಿಕಾರಿಗಳು ಇದ್ದರು.

ಆಕ್ಸಿಜನ್ ಸ್ಟೋರೇಜ್‌ ಪ್ಲ್ಯಾಂಟ್‌ಗೆ ಬೇಡಿಕೆ

‘ಕೋವಿಡ್ 2ನೇ ಅಲೆ ಉಲ್ಬಣಗೊಂಡಲ್ಲಿ ಇದರ ನಿಯಂತ್ರಣಕ್ಕೆ ಕೋವಿಡ್ ಕೇರ್ ಸೆಂಟರ್ ತೆರೆಯಲು ವಸತಿ ನಿಲಯಗಳನ್ನು ಗುರುತಿಸಲಾಗಿದೆ. ಆದರೆ, ಆಕ್ಸಿಜನ್ ಸ್ಟೋರೇಜ್ ಪ್ಲ್ಯಾಂಟ್ ಅವಶ್ಯಕತೆ ಇದೆ’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಮಾತನಾಡಿ, ‘ಜಿಲ್ಲೆಯಲ್ಲಿ 131 ವೆಂಟಿಲೇಟರ್ ಇದ್ದು, ಇದರಲ್ಲಿ 41 ಖಾಸಗಿ ಆಸ್ಪತ್ರೆಗಳಲ್ಲಿವೆ. ಒಟ್ಟಾರೆ 528 ಕೋವಿಡ್ ಬೆಡ್ ಎಂದು ಗುರುತಿಸಲಾಗಿದೆ. ಸೋಂಕು ಉಲ್ಬಣಿಸಿದಲ್ಲಿ ಅಗತ್ಯ ಮಾನವ ಸಂಪನ್ಮೂಲ ಪಡೆಯಲು ಸಹ ಕ್ರಿಯಾ ಯೋಜನೆ ರೂಪಿಸಲಾಗಿದೆ’ ಎಂದರು.

ಜಾತ್ರೆ ನಡೆಸಿದರೆ ಕೇಸ್ ಹಾಕಿ

ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಜಾತ್ರೆ, ಉರೂಸ್, ಮೆರವಣಿಗೆ ನಡೆಸದಂತೆ ನಿರ್ಬಂಧಿಸಬೇಕು. ಇದಕ್ಕೂ ಮೀರಿ ಆಯೋಜಿಸಿದ್ದಲ್ಲಿ ಆಯೋಜಕರ ವಿರುದ್ಧ ಕೇಸ್ ಹಾಕಿ’ ಎಂದು ಮುಖ್ಯ ಕಾರ್ಯದರ್ಶಿ ಖಡಕ್ ಸೂಚನೆ ನೀಡಿದರು.

‘ಸೋಂಕು ತಗುಲಿ ಹೋಂ ಐಸೋಲೇಷನ್‌ ಆದವರು ಮನೆಯಿಂದ ಹೊರಗಡೆ ತಿರುಗಾಡಿದರೆ ‘ಹ್ಯಾಂಡ್ ಸ್ಟ್ಯಾಂಕ್’ ಹಾಕಿ ಹೊರಗಡೆ ತಿರುಗದಂತೆ ಎಚ್ಚರಿಕೆ ನೀಡಬೇಕು. ಇದಕ್ಕೂ ಕೇಳದಿದ್ದರೆ ಅವರ ಮೇಲೂ ಕೇಸ್ ಹಾಕಿ’ ಎಂದರು.

ಜಿಲ್ಲೆಗೆ ಬಂದಿವೆ 30 ಸಾವಿರ ಕೋವಿಶೀಲ್ಡ್‌

ಜಿಲ್ಲಾ ಆರ್.ಸಿ.ಎಚ್.ಒ ಡಾ.ಪ್ರಭುಲಿಂಗ ಮಾನಕರ್ ಮಾತನಾಡಿ, ‘ಸೋಮವಾರವೇ ಜಿಲ್ಲೆಗೆ 30 ಸಾವಿರ ಕೋವಿಶೀಲ್ಡ್ ಡೋಸ್ ಲಸಿಕೆ ಬಂದಿವೆ’ ಎಂದರು.

‘ಮೊದಲು ಜಿಲ್ಲೆಗೆ 90,510 ಕೋವಿಶೀಲ್ಡ್ ಮತ್ತು 11,200 ಕೋವ್ಯಾಕ್ಸಿನ್ ಡೋಸ್ ಲಸಿಕೆ ಬಂದಿದ್ದು, ಕ್ರಮವಾಗಿ 77,291 ಮತ್ತು 9,132 ಬಳಕೆಯಾಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು