ಭಾನುವಾರ, ಆಗಸ್ಟ್ 14, 2022
20 °C
15 ಸಾವಿರ ಪ್ರಕರಣಗಳ ವಿಲೇವಾರಿ ಗುರಿ; ಜಿಲ್ಲಾ ಪ್ರಧಾನ ನ್ಯಾಯಾಧೀಶ ಸತೀಶ ಸಿಂಗ್

ಶನಿವಾರ ಮೆಗಾ ಲೋಕ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಲೋಕ ಅದಾಲತ್‌ ಮೂಲಕ ಒಂದು ತಿಂಗಳು 10 ದಿನಗಳಲ್ಲಿ 12,346 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದ್ದು, ಇದೇ 19ರಂದು ಮೆಗಾ ಲೋಕ ಅದಾಲತ್ ನಡೆಸಲಾಗುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಆರ್‌.ಜೆ. ಸತೀಶಸಿಂಗ್ ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕೊರೊನಾ ಅವಧಿಯಲ್ಲಿಯೂ ಇ ಲೋಕ ಅದಾಲತ್ ನಡೆಸುವ ಮೂಲಕ ಸಾವಿರಾರು ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದೇವೆ. ಇದೀಗ ಕೊರೊನಾ ಕಡಿಮೆಯಾಗಿದ್ದು, ಈ ಬಾರಿ 8 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಿದ್ದೆವು. ಜಿಲ್ಲೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಲೋಕ ಅದಾಲತ್ ನಡೆಸುವ ಮೂಲಕ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದ್ದೇವೆ’ ಎಂದರು.

ಶನಿವಾರ ಜಿಲ್ಲಾ ನ್ಯಾಯಾಲಯವೂ ಸೇರಿದಂತೆ ಎಲ್ಲ ತಾಲ್ಲೂಕು ನ್ಯಾಯಾಲಯಗಳಲ್ಲಿ ಒಂದರಿಂದ ಮೂರು ಪೀಠಗಳಲ್ಲಿ ಅದಾಲತ್‌ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಯಲಿದೆ. ಹತ್ತಾರು ವರ್ಷ ಪ್ರಕರಣಗಳನ್ನು ಮುಂದುವರಿಸಿಕೊಂಡು ಹೋಗುವುದರಿಂದ ಕುಟುಂಬದ ನೆಮ್ಮದಿ, ಸೌಹಾರ್ದ ನಾಶವಾಗಲಿದೆ. ಆದ್ದರಿಂದ ನ್ಯಾಯಾಲಯ ನೀಡುವ ತೀರ್ಪಿನಂತೆಯೇ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಬಳಿಕ ಡಿಕ್ರಿ ಹೊರಡಿಸಲಾಗುವುದು. ಇನ್ನೊಂದು ಮಹತ್ವದ ಅಂಶವೆಂದರೆ, ಇಲ್ಲಿ ನೀಡಲಾದ ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಹೀಗಾಗಿ, ಪ್ರಕರಣ ಮುಂದಕ್ಕೆ ಹೋಗುವ ಆತಂಕ ಇರುವುದಿಲ್ಲ ಎಂದು ಹೇಳಿದರು.

1993ರಿಂದ ಬಾಕಿ ಇದ್ದ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದ 72 ಪ್ರಕರಣಗಳಲ್ಲಿ ಸರ್ಕಾರದಿಂದ ರೈತರಿಗೆ ₹ 4 ಕೋಟಿ ಪರಿಹಾರ ಕೊಡಿಸಲಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಜಿ.ಆರ್‌. ಶೆಟ್ಟರ್‌ ಮಾತನಾಡಿ, ‘ಕಲಬುರ್ಗಿ ಜಿಲ್ಲಾ ನ್ಯಾಯಾಲಯದಲ್ಲಿ 15 ಪೀಠಗಳು ಹಾಗೂ ವಿವಿಧ ತಾಲ್ಲೂಕು ನ್ಯಾಯಾಲಯಗಳಲ್ಲಿ 15 ಸೇರಿದಂತೆ ಒಟ್ಟು 30 ಪೀಠಗಳು ಲೋಕ ಅದಾಲತ್‌ ಪ್ರಕರಣಗಳನ್ನು ಕೈಗೆತ್ತಿಕೊಂಡಿವೆ. ಚಿಂಚೋಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು