ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ದಾರಿ‌ ಮಧ್ಯೆಯೇ ಹೆರಿಗೆ: ಶಿಶು ಸಾವು, ತಾಯಿ ಆಸ್ಪತ್ರೆಗೆ ದಾಖಲು

Published : 7 ಆಗಸ್ಟ್ 2024, 15:46 IST
Last Updated : 7 ಆಗಸ್ಟ್ 2024, 15:46 IST
ಫಾಲೋ ಮಾಡಿ
Comments

ಚಿಂಚೋಳಿ: ತುರ್ತು ಸೇವೆಯ 108 ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದ ಗರ್ಭಿಣಿಗೆ ದಾರಿ ಮಧ್ಯೆ ಹೆರಿಗೆಯಾಗಿ, ಶಿಶು ಸಾವನ್ನಪ್ಪಿದ ಘಟನೆ ನಡೆದಿದ್ದು ಈಗ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಸುಲೇಪೇಟ ನಿವಾಸಿ ಶಿಲ್ಪಾ ಸಿದ್ದಪ್ಪ ಬುಗುಡಿ ಅವರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆ ನೋವಿನ ತಪಾಸಣೆಗೆ ಸೋಮವಾರ ಬಂದಿದ್ದಾರೆ. ಗರ್ಭಿಣಿಯನ್ನು ತಪಾಸಣೆ ನಡೆಸಿದ ವೈದ್ಯರು ಹಾಗೂ ಸಿಬ್ಬಂದಿ ಶಿಶು ಗರ್ಭದಲ್ಲಿ ಉಲ್ಟಾ ಇದ್ದ ಕಾರಣ ಕಲಬುರಗಿಗೆ ಹೋಗಬೇಕೆಂದು ಸೂಚಿಸಿದ್ದಾರೆ.

ಎಲ್ಲಾ ಆಂಬುಲೆನ್ಸ್‌ಗಳು ಸುಲೇಪೇಟ, ಕೋಡ್ಲಿ, ಕಾಳಗಿ, ಮಾಡಬೂಳ ಕ್ರಾಸ್‌ ಮೂಲಕ ಕಲಬುರಗಿಗೆ ತೆರಳುತ್ತವೆ. ಈ‌ ಮಾರ್ಗದಲ್ಲಿ ಸಂಚರಿಸಿದರೆ 5-8 ಕಿ.ಮೀ ಅಂತರ ಕಡಿಮೆಯಾಗುತ್ತದೆ. ಜತೆಗೆ ರಸ್ತೆಯೂ ಚೆನ್ನಾಗಿದೆ ಆದರೆ 108 ಸಿಬ್ಬಂದಿ ಸುಲೇಪೇಟ ಕೋಡ್ಲಿ ಮಾರ್ಗವಾಗಿ ರಟಕಲ್‌ಗೆ ತೆರಳಿ ಅಲ್ಲಿ ಆಂಬುಲೆನ್ಸ್ ಬದಲಿಸಿ ಬೇರೆ ಆಂಬುಲೆನ್ಸ್‌ನಲ್ಲಿ ಕರೆದೊಯ್ದಿದ್ದಾರೆ. ಅಲ್ಲಿಂದ ಮಹಾಗಾಂವ್ ಕ್ರಾಸ್ ದಾಟಿದ ಮೇಲೆ ಪ್ರಸವ ವೇದನೆ ಜಾಸ್ತಿಯಾಗಿದೆ. ಆಗ ಬೇರೊಂದು ಆಂಬುಲೆನ್ಸ್‌ ಕರೆಸಿದ್ದಾರೆ. ಅಷ್ಟರಲ್ಲಿಯೇ ಹೆರಿಗೆಯಾಗಿದೆ. ಮಗು ಸಾವನ್ನಪ್ಪಿದೆ.

ಶಿಲ್ಪಾ ಅವರನ್ನು ಜಿಮ್ಸ್‌ಗೆ ದಾಖಲಿಸಲಾಗಿದೆ. ಇದು 108 ಸಿಬ್ಬಂದಿ ಮಾಡಿದ ನಿರ್ಲಕ್ಷ್ಯತನ ಎಂದು ಸಿದ್ದಪ್ಪ ಬುಗುಡಿ ದೂರಿದ್ದಾರೆ. ‘ಮೂರು ಆಂಬುಲೆನ್ಸ್‌ ಬದಲಿಸಿದ್ದು, ರಸ್ತೆ ಸರಿಯಿಲ್ಲದಿದ್ದರೂ ರಟಕಲ್ ಮಹಾಗಾಂವ್ ಮಾರ್ಗವಾಗಿ ಸಂಚರಿಸಿದ್ದು ದುರುದ್ದೇಶದ ಕೃತ್ಯವಾಗಿದೆ. ಶಿಲ್ಪಾಗೆ 7 ತಿಂಗಳಲ್ಲಿಯೇ ಹೆರಿಗೆಯಾಗಿದೆ. ಸುಲೇಪೇಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ ಕಾರಣ ನನ್ನ ಪತ್ನಿಯನ್ನು ಚಿಂಚೋಳಿಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದೇನೆ. ಚಿಂಚೋಳಿಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡು ವೈದ್ಯರಿಗೆ ತೋರಿಸಿದಾಗ ವೈದ್ಯರು ಮಗು ಆರೋಗ್ಯವಾಗಿದೆ. ಬೆಳವಣಿಗೆ ಚನ್ನಾಗಿದೆ ಎಂದಿದ್ದರು. ಆದರೆ ಸುಲೇಪೇಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು 108 ಸಿಬ್ಬಂದಿಗಳ ನಿರ್ಲಕ್ಷ್ಯ ನನ್ನ ಕರುಳ ಕುಡಿ ಕಿತ್ತುಕೊಂಡಿದೆ’ ಎಂದು ದೂರಿದ್ದಾರೆ.

‘ಸುಲೇಪೇಟದ ಗರ್ಭಿಣಿಯ ಹೆರಿಗೆ ಮಾರ್ಗ ಮಧ್ಯೆ ಸಂಭವಿಸಿ ಶಿಶು ಸಾವಿಗೆ 108 ಸಿಬ್ಬಂದಿ ನಿರ್ಲಕ್ಷ್ಯತನ ಕಾರಣ. ಈ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ’ ಎಂದು ಭಾರತೀಯ ದಲಿತ ಪ್ಯಾಂಥರ್ ಚಿಂಚೋಳಿ ತಾಲ್ಲೂಕು ಅಧ್ಯಕ್ಷ ರುದ್ರಮುನಿ ರಾಮತೀರ್ಥಕರ ಹೇಳಿದ್ದಾರೆ.

‘ಸುಲೇಪೇಟದ ಗರ್ಭಿಣಿ ಶಿಲ್ಪಾ ಅವರ ಹೆರಿಗೆ ಮಾರ್ಗಮಧ್ಯೆ ಸಂಭವಿಸಿದೆ. ಮಗು ತಾಯಿಯ ಹೊಟ್ಟೆಯಲ್ಲಿ ಉಲ್ಟಾ ಇರುವುದರಿಂದ ಕಲಬುರಗಿಗೆ ಕಳುಹಿಸಲಾಗಿದೆ. ಅವಧಿ ಪೂರ್ವ ಪ್ರಸವದಲ್ಲಿ ಮಗು ಬದುಕುವುದು ವಿರಳ. ತಾಯಿ ಆರೋಗ್ಯವಾಗಿದ್ದಾರೆ’ ಎಂದು ಚಿಂಚೋಳಿ ಟಿಎಚ್ಒ ಡಾ. ಮಹಮದ್ ಗಫಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT