ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದತ್ತ ತೆರಳಿದ 1472 ಪ್ರಯಾಣಿಕರು

ಕಲಬುರ್ಗಿ ಜಿಲ್ಲೆಯಿಂದ ಮಂಗಳವಾರ ರಾತ್ರಿ ತೆರಳಿದ ಮೊದಲ ಶ್ರಮಿಕ ರೈಲು
Last Updated 19 ಮೇ 2020, 16:57 IST
ಅಕ್ಷರ ಗಾತ್ರ

ಕಲಬುರ್ಗಿ: ಎರಡು ತಿಂಗಳಿಂದ ಕಲಬುರ್ಗಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ 1472 ವಲಸೆ ಕಾರ್ಮಿಕರು ಮಂಗಳವಾರ ರಾತ್ರಿ ವಿಶೇಷ ಶ್ರಮಿಕ ರೈಲಿನ ಮೂಲಕ ಉತ್ತರ ಪ್ರದೇಶಕ್ಕೆ ತೆರಳಿದರು.

ಎಲ್ಲರಿಗೂ ಜಿಲ್ಲಾಡಳಿತದ ವತಿಯಿಂದ ಊಟದ ಪ್ಯಾಕೆಟ್‌ ಹಾಗೂ ತಲಾ ಒಂದು ಲೀಟರ್‌ ಮಿನರಲ್‌ ನೀರನ್ನು ವಿತರಿಸಲಾಯಿತು. ವಿವಿಧ ತಾಲ್ಲೂಕುಗಳು ಹಾಗೂ ಬಡಾವಣೆಗಳಲ್ಲಿದ್ದ ಕಾರ್ಮಿಕರನ್ನು ಸಾರಿಗೆ ಸಂಸ್ಥೆಯ ಬಸ್‌ಗಳ ಮೂಲಕ ಕರೆತರಲಾಗಿತ್ತು. ನಂತರ ಅವರ ವಿವರಗಳನ್ನು ದಾಖಲಿಸಿಕೊಂಡ ಬಳಿಕ ರೈಲಿನಲ್ಲಿ ಹತ್ತಲು ಅವಕಾಶ ನೀಡಲಾಯಿತು. ಎಲ್ಲರಿಗೂ ಸ್ಲೀಪರ್‌ ಕ್ಲಾಸ್‌ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತಿಯೊಬ್ಬರಿಂದ ಟಿಕೆಟ್‌ ವೆಚ್ಚವಾಗಿ ₹ 780 ಪಡೆಯಲಾಯಿತು.

ಬೆಳಿಗ್ಗೆ 9ರಿಂದಲೇ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರಗೌಡ ವಣಿಕ್ಯಾಳ ನೇತೃತ್ವದ ಅಧಿಕಾರಿಗಳ ತಂಡವು ರೈಲು ನಿಲ್ದಾಣಕ್ಕೆ ಭೇಟಿ ಪ್ರತಿಯೊಬ್ಬರಿಗೂ ಫೋನ್‌ ಕರೆ ಮಾಡಿ ಬರುವ ಬಗ್ಗೆ ಖಚಿತಪಡಿಸಿಕೊಂಡಿತು. ಕೆಲವರು ಸಿಕ್ಕ ವಾಹನಗಳನ್ನು ಹತ್ತಿಕೊಂಡು ಉತ್ತರ ಪ್ರದೇಶ ತಲುಪುವುದಾಗಿ ತಿಳಿಸಿದರು. ಹೀಗಾಗಿ, ‘ಸೇವಾ ಸಿಂಧು’ ಆ್ಯಪ್‌ನಲ್ಲಿ ಹೆಸರು ದಾಖಲಿಸಿಕೊಂಡವರನ್ನು ಗುರುತಿಸಿ ರೈಲು ಹೊರಡುವ ಮಾಹಿತಿ ನೀಡಲಾಯಿತು.

ಸಂಜೆ 6 ಗಂಟೆ ಸುಮಾರಿಗೆ ವಲಸೆ ಕಾರ್ಮಿಕರನ್ನು ಹೊತ್ತ ಬಸ್‌ಗಳು ರೈಲು ನಿಲ್ದಾಣ ತಲುಪಿದವು. ಸಾಲಾಗಿ ನಿಲ್ಲಿಸಿ ಅವರನ್ನು ರೈಲಿಗೆ ಹತ್ತಿಸಲಾಯಿತು.

ಜಿಲ್ಲಾಧಿಕಾರಿ ಶರತ್ ಬಿ., ಮಹಾನಗರ ಪಾಲಿಕೆ ಕಮಿಷನರ್‌ ರಾಹುಲ್‌ ಪಾಂಡ್ವೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರಗೌಡ ವಣಿಕ್ಯಾಳ, ಡಿಸಿಪಿ ಡಿ.ಕಿಶೋರಬಾಬು, ಎಸಿಪಿ ವಿಜಯಕುಮಾರ್‌ ವಿ.ಎಚ್‌., ಇನ್‌ಸ್ಪೆಕ್ಟರ್‌ಗಳಾದ ಪಂಡಿತ ಸಗರ, ಎಲ್.ಎಚ್‌.ಗೌಂಡಿ, ಸ್ಟೇಶನ್‌ ವ್ಯವಸ್ಥಾಪಕ ಪ್ರಸಾದ ರಾವ್ ಇದ್ದರು.

‘ವಾಪಸ್‌ ಬರುವ ಬಗ್ಗೆ ನಿರ್ಧರಿಸಿಲ್ಲ’
ಲಾಕ್‌ಡೌನ್ ಇದ್ದುದರಿಂದ ಎರಡು ತಿಂಗಳು ಯಾವ ಕೆಲಸವೂ ಇಲ್ಲದೇ ಸುಮ್ಮನೇ ಕುಳಿತಿದ್ದೆವು. ಇದೀಗ ರೈಲಿನ ಮೂಲಕ ನಮ್ಮೂರು ಝಾನ್ಸಿಗೆ ಹೊರಟಿದ್ದೇನೆ. ಹಲವು ವರ್ಷಗಳಿಂದ ಯಡ್ರಾಮಿಯಲ್ಲಿ ವ್ಯಾಪಾರ ಮಾಡಿಕೊಂಡು ಇದ್ದೆ. ಮತ್ತೆ ವಾಪಸ್‌ ಬರುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ’ ಎಂದು ಪುನೀತ್‌ ಹೇಳಿದರು.

‘ಬೀದರ್‌ನ ಶಾಹೀನ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದೆವು. ಲಾಕ್‌ಡೌನ್‌ ಪರಿಣಾಮ ರೈಲುಗಳೆಲ್ಲ ಬಂದ್‌ ಆಗಿದ್ದರಿಂದ ನಮ್ಮೂರಿಗೆ ಹೋಗಲು ಆಗಿರಲಿಲ್ಲ. ಶಾಲೆ ಪ್ರಾರಂಭವಾಗುವುದನ್ನು ನೋಡಿಕೊಂಡು ವಾಪಸಾಗುತ್ತೇವೆ’ ಎಂದು ಉತ್ತರ ಪ್ರದೇಶದ ಬಲರಾಮಪುರಕ್ಕೆ ಹೊರಟಿದ್ದ ವಿದ್ಯಾರ್ಥಿ ಶಂಜಾಬ್‌ ತಿಳಿಸಿದರು. ಅವರೊಂದಿಗೆ ಒಟ್ಟು 30 ವಿದ್ಯಾರ್ಥಿಗಳು ಉತ್ತರ ಪ್ರದೇಶಕ್ಕೆ ತೆರಳಿದರು.

‘ರೈಲು ಇರುವುದು ಗೊತ್ತಿರಲಿಲ್ಲ. ಮಧ್ಯಾಹ್ನ ಯಾರೋ ಹೇಳಿದರು. ಕೂಡಲೇ ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡು ಇಲ್ಲಿಗೆ ಬಂದೆವು. ರೈಲು ಸಿಗುವುದೋ ಇಲ್ಲವೋ ಎಂಬುದು ಖಾತ್ರಿ ಇರಲಿಲ್ಲ. ನಮ್ಮ ಅದೃಷ್ಟ ಚೆನ್ನಾಗಿದೆ’ ಎಂದು ಲಖನೌ ಸಮೀಪದ ಗ್ರಾಮವೊಂದಕ್ಕೆ ಪತಿ ಪಂಕಜ್ ಸಿಂಗ್‌ ಹಾಗೂ ಇಬ್ಬರು ಮಕ್ಕಳೊಂದಿಗೆ ತೆರಳುತ್ತಿದ್ದ ನಿಮ್ಮಿದೇವಿ ತಿಳಿಸಿದರು.

ಅಂತಿಮ ಕ್ಷಣದಲ್ಲಿ ಬಂದವರಿಗೂ ಅವಕಾಶ
ಲಾಕ್‌ಡೌನ್‌ನಿಂದ ಸಿಲುಕಿಕೊಂಡಿದ್ದ ಇಬ್ಬರು ಮಕ್ಕಳು ಸೇರಿದಂತೆ 22 ಜನರು ರೈಲು ಉತ್ತರ ಪ್ರದೇಶಕ್ಕೆ ಹೊರಟಿರುವ ಮಾಹಿತಿ ತಿಳಿದು ಕೊನೆ ಗಳಿಗೆಯಲ್ಲಿ ಬಂದರು. 1450 ಜನರಷ್ಟೇ ಹೊರಡುತ್ತಾರೆ ಎಂದು ಲೆಕ್ಕ ಹಾಕಿದ್ದ ಜಿಲ್ಲಾಡಳಿತಕ್ಕೆ ಅವರನ್ನು ಕಳಿಸುವುದೇ, ಬೇಡವೇ ಎಂಬ ಗೊಂದಲ ಮೂಡಿತು. ಉತ್ತರ ಪ್ರದೇಶಕ್ಕೆ ಮತ್ತೊಂದು ರೈಲು ಸದ್ಯದಲ್ಲೇ ಹೊರಡುವುದು ಅನುಮಾನ ಎಂಬುದನ್ನು ಅರಿತು ಅವರನ್ನೂ ಕಳಿಸಿಕೊಡಲು ಜಿಲ್ಲಾಧಿಕಾರಿ ಶರತ್ ಬಿ. ಸೂಚನೆ ನೀಡಿದರು.

ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು 22 ಜನರ ಹೆಸರು, ಫೋನ್‌ ನಂಬರ್‌ಗಳನ್ನು ಪಡೆದು ಅವರಿಗೂ ಟಿಕೆಟ್‌ಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT