ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತ ರೈತ ಉದ್ಯಮಿಯಾಗಬೇಕು: ಸಚಿವ ಬಿ.ಸಿ. ಪಾಟೀಲ

ಶೀತಲೀಕರಣ ಘಟಕಕ್ಕೆ ಶಂಕುಸ್ಥಾಪನೆ
Last Updated 26 ಆಗಸ್ಟ್ 2022, 13:36 IST
ಅಕ್ಷರ ಗಾತ್ರ

ಕಲಬುರಗಿ: ‘ಕೃಷಿ ಉತ್ಪನ್ನ ಬೆಳೆಯಲಷ್ಟೆ ಸೀಮಿತವಾಗದೇ ರೈತರು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ಯಂತ್ರೋಪಕರಣಗಳ ಸಹಾಯದ ಜೊತೆಗೆ ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ಸಂಸ್ಕರಣ ಘಟಕ ಸ್ಥಾಪಿಸುವ ಮೂಲಕ ಉದ್ಯಮಿಯಾಗಬೇಕು’ ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ ಹೇಳಿದರು.

ನಗರದ ಹೊರವಲಯದ ಕೋಟನೂರ (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಶುಕ್ರವಾರ ಹೊಸದಾಗಿ ತೆರೆಯಲಾದ ಕಲಬುರಗಿ ವಿಭಾಗದ ಜಂಟಿ ಕೃಷಿ ನಿರ್ದೇಶಕ (ಜಾಗೃತ ಕೋಶ) ಕಚೇರಿ ಉದ್ಘಾಟಿಸಿ ಮತ್ತು ₹ 9.15 ಕೋಟಿ ವೆಚ್ಚದ ಶೀತಲೀಕರಣ ಘಟಕಕ್ಕೆ ಶಂಕುಸ್ಥಾನೆ ನೆರವೇರಿಸಿ ಮಾತನಾಡಿದ ಅವರು, ‘ರಾಜ್ಯದ 11 ಕಡೆ‌ ಈ ರೀತಿಯ ಘಟಕ ಸ್ಥಾಪಿಸಲಾಗುತ್ತಿದೆ’ ಎಂದರು.

‘ರೈತರು ಬೆಳೆದ ಬೆಳೆ, ತರಕಾರಿ, ಹಣ್ಣುಗಳನ್ನು ಸಂಸ್ಕರಣೆ‌ ಮಾಡಿ ನೇರವಾಗಿ ಗ್ರಾಹಕರಿಗೆ ತಲುಪಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಅಹಾರ ಸಂಸ್ಕರಣ ಘಟಕ ಸ್ಥಾಪನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಯೋಜನೆಯಡಿ ₹ 10 ಸಾವಿರ ಕೋಟಿ ಮೀಸಲಿಟ್ಟಿದ್ದಲ್ಲದೇ, ಕೃಷಿ ವಲಯಕ್ಕೆ ₹ 1 ಲಕ್ಷ ಕೋಟಿ ಒದಗಿಸಿದ್ದಾರೆ’ ಎಂದು ಹೇಳಿದರು.

‘ಇತ್ತೀಚಿನ ಅತಿವೃಷ್ಟಿಯಿಂದ ಕಲಬುರಗಿ ಜಿಲ್ಲೆಯಲ್ಲಿ 1.11 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಉಳಿದಂತೆ ಗದಗ ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್, ಧಾರವಾಡ ಜಿಲ್ಲೆಯಲ್ಲಿ 83 ಸಾವಿರ ಹೆಕ್ಟೇರ್ ಹಾನಿಯಾಗಿದೆ. ಒಣ ಬೇಸಾಯದ ಪ್ರತಿ ಹೆಕ್ಟೇರ್‌ಗೆ ₹ 6,800ರಿಂದ ₹ 13,600 ರೂ.ಗಳಿಗೆ, ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್‌ಗೆ ಕೇಂದ್ರ ನೀಡುತ್ತಿದ್ದ ಪರಿಹಾರ ಧನವನ್ನು 13 ಸಾವಿರದಿಂದ ₹ 25 ಸಾವಿರಕ್ಕೆ ಹಾಗೂ ತೋಟಗಾರಿಕೆ ಪ್ರದೇಶದ ಪ್ರತಿ ಹೆಕ್ಟೇರ್‌ಗೆ ₹ 18 ಸಾವಿರದಿಂದ ₹ 28 ಸಾವಿರಕ್ಕೆ ಹೆಚ್ಚಿಸಿದೆ. ಎನ್‌ಡಿ‌ಆರ್‌ಎಫ್ ಮಾರ್ಗಸೂಚಿ ಮೀರಿ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರವನ್ನು ನೀಡುತ್ತಿದೆ’ ಎಂದರು.

ಕೃಷಿ ಪರಿಕರಗಳ ಗುಣಮಟ್ಟ ಖಾತ್ರಿಪಡಿಸಿಕೊಂಡು ಬೀಜ ಅಧಿನಿಯಮ, ರಸಗೊಬ್ಬರ ನಿಯಂತ್ರಣ, ಕೀಟನಾಶಕ ಕಾಯ್ದೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ ಕೃಷಿ ಇಲಾಖೆ ಅಧೀನದಡಿ 2014ರಲ್ಲಿ ಜಾಗೃತ ಕೋಶ ಸ್ಥಾಪಿಸಲಾಗಿದೆ. ಈ ಕೋಶವು ಬೆಂಗಳೂರು, ಬೆಳಗಾವಿ ವಲಯದಲ್ಲಿ ಮಾತ್ರ ಇತ್ತು. ನಾನು ಅಧಿಕಾರ ವಹಿಸಿಕೊಂಡ ಮೇಲೆ ಮೈಸೂರಿನಲ್ಲಿ, ಕಲಬುರಗಿಯಲ್ಲಿ ಕಚೇರಿ ತೆರೆಯಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ‘ಕೃಷಿ ಕುಟುಂಬದಿಂದ ಬಂದಿರುವ ಬಿ.ಸಿ.ಪಾಟೀಲ ಅವರು ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಲ್ಲಿ ರಸಗೊಬ್ಬರ, ಬೀಜದ ಕೊರತೆಯಿಲ್ಲ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ರೂವಾರಿ ಇವರಾಗಿದ್ದಾರೆ’ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಸುನೀಲ ವಲ್ಯಾಪೂರೆ, ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ, ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಆಯುಕ್ತ ಬಿ.ಶರತ್, ಹೆಚ್ಚುವರಿ ನಿರ್ದೇಶಕ ದಿವಾಕರ, ಜಾಗೃತ ಕೋಶದ ಹೆಚ್ಚುವರಿ ನಿರ್ದೇಶಕ ಅನೂಪ್ ಕುಮಾರ್, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕಲಬುರಗಿ ನೂತನ ಜಾಗೃತ ಕೋಶದ ಜಂಟಿ ನಿರ್ದೇಶಕ ರಾಮಕೃಷ್ಣ ಕೆ. ಸೇರಿದಂತೆ ಮೊದಲಾದವರು ಇದ್ದರು. ಪ್ರಭಾರ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್‌ ಸ್ವಾಗತಿಸಿದರು.

‘ರೈತರೇಕೆ ಬಂದಿರಲಿಲ್ಲ’
ಕಲಬುರಗಿ ವಲಯದ ಕೃಷಿ ಜಂಟಿ ನಿರ್ದೇಶಕರ (ಜಾಗೃತ ಕೋಶ) ಕಚೇರಿ ಉದ್ಘಾಟನೆ ಹಾಗೂ ನೂತನ ಶೀತಲೀಕರಣ ಘಟಕದ ಉದ್ಘಾಟನೆಗಾಗಿ ಸ್ವತಃ ಕೃಷಿ ಸಚಿವರು ಬಂದಿದ್ದಾರೆ. ಕಾರ್ಯಕ್ರಮಕ್ಕೆ ರೈತರನ್ನೇಕೆ ಕರೆಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಗುಲಬರ್ಗಾ ವಿ.ವಿ. ಆವರಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಇಷ್ಟೊಂದು ಕಳಪೆ ಕಾರ್ಯಕ್ರಮ ಮಾಡುತ್ತೀರಿ ಎಂದು ಅಂದುಕೊಂಡಿರಲಿಲ್ಲ. ಕಾರ್ಯಕ್ರಮದ ಆಯೋಜನೆಯೂ ಸರಿಯಾಗಿರಲಿಲ್ಲ. ನೂರು ರೈತರೂ ಇರಲಿಲ್ಲ. ನಾಲ್ಕೈದು ಸಾವಿರ ರೈತರು ಕಾರ್ಯಕ್ರಮಕ್ಕೆ ಬರಬೇಕಿತ್ತು. ಈ ಬಗ್ಗೆ ಮಾಹಿತಿ ನೀಡಿರಲಿಲ್ಲವೇ ಎಂದು ಪ್ರಶ್ನಿಸಿದರು.

‘ಶೀತಲೀಕರಣ ಘಟಕ ಆರಂಭವಾಗಿದೆ ಎಂಬುದಷ್ಟೇ ಗೊತ್ತು. ಆದರೆ, ಅದರ ವಿವರಗಳೇನು? ಒಟ್ಟು ಎಷ್ಟು ಸಾಮರ್ಥ್ಯದ ಆಹಾರ ಧಾನ್ಯಗಳನ್ನು ಶೇಖರಿಸಬಹುದು. ರೈತರು ಅದನ್ನು ಬಳಸುವುದು ಹೇಗೆ ಎಂಬ ಮಾಹಿತಿಯನ್ನು ಸ್ವತಃ ಕೃಷಿ ಸಚಿವರಿಗೇ ನೀಡಿಲ್ಲ. ವೇದಿಕೆಯಲ್ಲಿದ್ದ ನಮಗೂ ಕೊಡಲಿಲ್ಲ. ಇನ್ನು ರೈತರಿಗೆ ಗೊತ್ತಾಗುವುದಾದರೂ ಹೇಗೆ’ ಎಂದರು.

ಸಚಿವರ ಈ ಮಾತಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪೂರೆ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT