ಶನಿವಾರ, ಅಕ್ಟೋಬರ್ 24, 2020
18 °C

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ‌ಸಲೀಸು: ಈಶ್ವರಪ್ಪ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಶಿಕ್ಷಕರ ಮತಕ್ಷೇತ್ರದ ‌ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸಲೀಸಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ ಅವರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಮೋಶಿ ಅವರು ಆಕಸ್ಮಿಕವಾಗಿ ಸೋತಿದ್ದಾರೆ.  ಈ ಬಾರಿ ಒಂಬತ್ತು ಜನ ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದು, ಪಕ್ಷದ ಅಭ್ಯರ್ಥಿಯನ್ನು ಗೆಲುವು ದಡ ಮುಟ್ಟಿಸಲಿದ್ದಾರೆ. ಈಶಾನ್ಯ ಕ್ಷೇತ್ರದ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಪಕ್ಷದ ಅಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್ ಅವರು ನನ್ನನ್ನು ಸೇರಿದಂತೆ ಸಚಿವೆ ಶಶಿಕಲಾ ಜೊಲ್ಲೆ, ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರನ್ನು ನೇಮಕ ಮಾಡಿದ್ದಾರೆ. ಬುಧವಾರ ಯಾದಗಿರಿ ಹಾಗೂ ‌ರಾಯಚೂರು‌ ಜಿಲ್ಲೆಗಳಲ್ಲಿ ಪ್ರಚಾರ ಸಭೆಗಳು‌ ನಿಗದಿಯಾಗಿದ್ದು, ಮುಂದಿನ ಬುಧವಾರ ಮತ್ತೆ ಜಿಲ್ಲೆಗೆ ಭೇಟಿ ನೀಡಿ ಚುನಾವಣಾ ‌ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದರು.

ಸಿದ್ದರಾಮಯ್ಯ, ಡಿಕೆಶಿ ಬಣದ ನಡುವೆ ತಿಕ್ಕಾಟ: ರಾಜ್ಯ ಕಾಂಗ್ರೆಸ್ ನಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ‌ಡಿ.ಕೆ. ಶಿವಕುಮಾರ್ ಬಣಗಳ ಮಧ್ಯೆ ತಿಕ್ಕಾಟ ನಡೆದಿದೆ. ರಾಷ್ಟ್ರೀಯ ಕಾಂಗ್ರೆಸ್ ನ 23 ಪ್ರಮುಖ‌ ನಾಯಕರು ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ‌ಪ್ರಶ್ನಿಸಿ ಪತ್ರ ಬರೆದಿದ್ದಾರೆ ಎಂದರು.

ಕೇಂದ್ರದಲ್ಲಿ ನರೇಂದ್ರ ‌ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ‌ಮೆಚ್ಚಿ ಪಕ್ಷ ‌ಸೇರ್ಪಡೆಯಾಗುವವರ ಸಂಖ್ಯೆ ‌ಹೆಚ್ಚುತ್ತಿದೆ. ಹೀಗಾಗಿ ಚುನಾವಣೆಯಲ್ಲಿ‌ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ ‌ಎಂದರು.

ಅಕ್ರಮ ಆಸ್ತಿ ಮಾಡದೇ ಇದ್ದರೆ ಡಿ.ಕೆ.ಶಿವಕುಮಾರ್ ಅವರು ಸಿಬಿಐ ದಾಳಿಗೆ ಹೆದರುವ ಅವಶ್ಯಕತೆ ‌ಇಲ್ಲ.‌  ಡಿ.ಕೆ.ಶಿವಕುಮಾರ್ ಧೈರ್ಯವಾಗಿ ‌ತನಿಖೆ ಎದುರಿಸಿ‌ ಪ್ರಾಮಾಣಿಕ ‌ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
 ‌
ಅಭ್ಯರ್ಥಿ ಶಶೀಲ್ ನಮೋಶಿ, ಕಲ್ಯಾಣ ಕರ್ನಾಟಕ ‌ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ‌ರಸ್ತೆ ಸಾರಿಗೆ ಸಂಸ್ಥೆ ‌ಅಧ್ಯಕ್ಷ ರಾಜಕುಮಾರ ‌ಪಾಟೀಲ ತೆಲ್ಕೂರ, ಶಾಸಕ ಬಸವರಾಜ ‌ಮತ್ತಿಮೂಡ, ಮಹಾನಗರ ಬಿಜೆಪಿ ಅಧ್ಯಕ್ಷ ‌ಸಿದ್ದಾಜಿ ಪಾಟೀಲ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ‌ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು