ಶನಿವಾರ, ಜೂನ್ 19, 2021
28 °C
ಉಸ್ತುವಾರಿ ಸಚಿವ ಮುರಗೇಶ ನಿರಾಣಿ ಭರವಸೆ

ಕಮಲಾಪುರ: ಶೀಘ್ರ 100 ಹಾಸಿಗೆಯ ಆಸ್ಪತ್ರೆ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ತಾಲ್ಲೂಕು ಕೇಂದ್ರವಾಗಿರುವ ಕಮಲಾಪುರದಲ್ಲಿ 100 ಹಾಸಿಗೆಯ ಆಸ್ಪತ್ರೆ ಶೀಘ್ರ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರಗೇಶ ನಿರಾಣಿ ಭರವಸೆ ನೀಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುವುದರೊಂದಿಗೆ ಅಗತ್ಯ ಮಾಹಿತಿ ಪಡೆದರು.

ಶಾಸಕ ಬಸವರಾಜ ಮತ್ತಿಮೂಡ, ಸಂಸದ ಉಮೇಶ ಜಾಧವ್ ಕಮಲಾಪುರದಲ್ಲಿ 100 ಹಾಸಿಗೆಯ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಅವಶ್ಯಕತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಈಗಾಗಲೇ ನಾವು ಈ ಕುರಿತು ನಿರ್ಣಯ ಕೈಗೊಂಡಿದ್ದೇವೆ. ಸಂಬಂಧಪಟ್ಟ ಎಲ್ಲರ ಜೊತೆ ಚರ್ಚಿಸಿ ಅತಿ ಶೀಘ್ರ ಹುದ್ದೆಗಳು ಭರ್ತಿ, ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಸದ್ಯ ಐಸೋಲೇಶನ್, ಆಮ್ಲಜನಕ, ವೆಂಟಲೇಟರ್ ಬೆಡ್‍ಗಳ ವ್ಯವಸ್ಥೆಗೂ ಕ್ರಮ ಕೈಗೊಳ್ಳುತ್ತೇವೆ ಎಂದರು.

ಅಂತರರಾಜ್ಯ, ಬೆಂಗಳೂರಿನಂತಹ ದೊಡ್ಡ ನಗರಗಳಿಂದ ಆಗಮಿಸುವವರು ಆರ್‌ಟಿಪಿಸಿಆರ್ ವರದಿ ಪಡೆಯಬೇಕು. ಹೊರಗಿನಿಂದ ಆಗಮಿಸುವವರು, ಹೋಮ್ ಐಸೋಲೇಶನ್‍ಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಗ್ರಾಮೀಣ ಪ್ರದೇಶದಲ್ಲಿ ಸೊಂಕು ಹರಡುತಿದೆ. ಅಲ್ಲಿಯ ಶಾಲೆ ಕಟ್ಟಡಗಳನ್ನೆ ಕೋವಿಡ್ ಆರೈಕೆ ಕಂದ್ರಗಳನ್ನಾಗಿಸಿ, ಸೊಂಕಿತರನ್ನು ಇರಿಸಬೇಕು. ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಇಲ್ಲ. ಶಹಬಾದ್‍ನಲ್ಲಿ ಇಎಸ್‍ಐ ಆಸ್ಪತ್ರೆ 3 ವಾರದಲ್ಲೆ ಆರಂಭಗೊಳ್ಳಲಿದೆ ಎಂದರು.

ಸಂಸದ ಉಮೇಶ ಜಾಧವ್, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಅಮರನಾಥ ಪಾಟೀಲ, ದೊಡ್ಡಪಗೌಡ ಪಾಟೀಲ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಭಾಶ ಬಿರಾದಾರ, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಸಂಗಮೇಶ ವಾಲಿ, ಗೋರಖನಾಥ ಶಾಕಾಪೂರ, ಎಸ್‍ಸಿ ಮೂರ್ಚಾ ಅಧ್ಯಕ್ಷ ಸುರೇಶ ರಾಠೋಡ್, ಕಾಂಗ್ರೆಸ್ ಮುಖಂಡ ಗುರುರಾಜ ಮಾಟೂರ, ಅಬ್ದುಲ್ ಸತ್ತಾರ, ಅಮೃತ ಗೌರೆ, ನಾಗರಾಜ ಕಲ್ಯಾಣ, ಜಿಲ್ಲಾ ಆರೋಗ್ಯಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಮಾರುತಿ ಕಾಂಬಳೆ, ತಹಶೀಲ್ದಾರ ಅಂಜುಮ ತಬಸುಮ್, ಸಿಪಿಐ ಶಂಕರಗೌಡ ಪಾಟೀಲ, ಶಿವಕುಮಾರ ದೋಶೆಟ್ಟಿ, ಶಶಿಧರ ಮಾಕಾ, ಸಾಗರ ಗುತ್ತೇದಾರ, ಪ್ರಶಾಂತ ಮಾನಕಾರ ಇದ್ದರು.

‘ಮಹಾಗಾಂವನಲ್ಲಿ 50 ಹಾಸಿಗೆಯ ಆಸ್ಪತ್ರೆ’

ಮಹಾಗಾಂವನಲ್ಲಿ 50 ಹಾಸಿಗೆಯ ಆಸ್ಪತ್ರೆ ನಿರ್ಮಿಸುವುದಾಗಿ ಸಚಿವ ಮುರಗೇಶ ನಿರಾಣಿ ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ ತಿಳಿಸಿದರು.

ಮಹಾಗಾಂವ ಕ್ರಾಸ್ ಆಯಾಕಟ್ಟಿನ ಸ್ಥಳವಾಗಿದ್ದು, ಹೆದ್ದಾರಿ ಮೇಲಿನ ಅಫಘಾತ ಸೇರಿದಂತೆ, ಸುತ್ತಲಿನ ಗ್ರಾಮಗಳ ರೋಗಿಗಳಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಸದ್ಯ 4 ಬೆಡ್‍ಗಳ 4 ಖಾಸಗಿ ಆಸ್ಪತ್ರೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಹಾಗಾಂವ ಕ್ರಾಸ್‍ನ ಜಾಗ ಸಹ ಇದೆ. ಹೀಗಾಗಿ ನಾವು 100 ಹಾಸಿಗೆಯ ಆಸ್ಪತ್ರೆ ನಿರ್ಮಿಸುವಂತೆ ಮನವಿ ಮಾಡಿದ್ದು, 50 ಹಾಸಿಗೆಯ ಆಸ್ಪತ್ರೆ ನಿರ್ಮಿಸುವುದಾಗಿ ಅವರು ತಿಳಿಸಿದ್ದಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.