ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಔದ್ಯೋಗಿಕ ಕಾರ್ಯಕ್ರಮ: ಮುರುಗೇಶ ನಿರಾಣಿ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಕೋವಿಡ್‌ ಜಿಲ್ಲಾ ಉಸ್ತುವಾರಿ ಮುರುಗೇಶ ನಿರಾಣಿ ಹೇಳಿಕೆ
Last Updated 4 ಡಿಸೆಂಬರ್ 2021, 11:13 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಆಯೋಜಿಸಿದ್ದ ‘ಉದ್ಯಮಿಯಾಗು– ಉದ್ಯೋಗ ನೀಡು’ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಚುನಾವಣೆಯ ಕಾರಣ ಮುಂದೂಡಲಾಗಿದ್ದು, ಬರುವ ಜನವರಿ ಮೊದಲ ವಾರದಲ್ಲಿ ಇದನ್ನು ಮತ್ತೆ ಆಯೋಜಿಸಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಕೋವಿಡ್‌ ಜಿಲ್ಲಾ ಉಸ್ತುವಾರಿ ಮುರುಗೇಶ ನಿರಾಣಿ ಹೇಳಿದರು.

‘ವಿಜನ್‌ ಕಲಬುರ್ಗಿ–2050 ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಡಿ ರಚಿಸಿರುವ 16 ವಿವಿಧ ಕ್ಷೇತ್ರಗಳ ತಜ್ಞರ ತಂಡದೊಂದಿಗೆ ಚರ್ಚಿಸಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಲಬುರಗಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲಾಗುವುದು. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸಾಧ್ಯವಾದಷ್ಟು ಆರ್ಥಿಕ ನೆರವು ನೀಡಲಾಗುವುದು’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಂದು ಜಿಲ್ಲೆ– ಒಂದು ಉತ್ಪಾದನೆ’ ಎಂಬ ಕಲ್ಪನೆಯಲ್ಲಿ ಈ ಭಾಗದ ಎಲ್ಲ ಸಂಪನ್ಮೂಲಗಳನ್ನೂ ಪೂರ್ಣವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಎಚ್‌ಕೆಸಿಸಿಐ ನೇತೃತ್ವದಲ್ಲಿ ಎಲ್ಲ ಉದ್ಯಮಿಗಳನ್ನು ಸೇರಿಸಿ, ಉದ್ಯೋಗ ಸೃಜನೆ ಹಾಗೂ ಉತ್ಪಾದನೆಗೆ ಬೇಕಾದ ಮಾರ್ಗೋಪಾಯ ಕಂಡುಕೊಳ್ಳಲಾಗುವುದು. ವಿಶೇಷವಾಗಿ ದಾಲ್‌ಮಿಲ್‌ಗಳನ್ನು ಉಪ ಉತ್ಪನ್ನಗಳಿಗೆ ಪ್ರೋತ್ಸಾಹಿಸಿ ಲಾಭದಾಯಕ ಮಾಡಲಾಗುವುದು’ ಎಂದರು.

‘2022ರ ನವೆಂಬರ್‌ನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ. ಆ ಸಂದರ್ಭದಲ್ಲೂ ಟಯರ್‌–1, ಟಯರ್‌–2 ಹಾಗೂ ಟಯರ್‌–3 ನಗರಗಳಿಗೆ ತಕ್ಕಂತೆ ಕೈಗಾರಿಕೋದ್ಯಮಿಗಳಿಗೆ ಹೂಡಿಕೆ ಮಾಡಲು ಪ್ರೋತ್ಸಾಹಿಸಲಾಗುವುದು. ಬೆಂಗಳೂರಿನಲ್ಲಿ ಉದ್ಯಮ ವಲಯ ಸ್ಥಾಪಿಸಲು ಉತ್ಸುಕವಾದ ಕೆಲವು ಕಂಪನಿಗಳಿಗೆ ಧಾರವಾಡ, ಕಲಬುರಗಿ ಕಡೆಗಳಲ್ಲಿ ಸ್ಥಾಪಿಸುವಂತೆ ಸಲಹೆ ನೀಡಿದ್ದೇನೆ’ ಎಂದು ತಿಳಿಸಿದರು.‌

‘ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸೇರಿಸಿ ಮೂರು ದಿನಗಳ ಪ್ರವಾಸ ಪ್ಯಾಕೇಜ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕಲಬುರಗಿ ಕೋಟೆಯ ಅಭಿವೃದ್ಧಿಯೂ ಇದರಲ್ಲಿ ಸೇರಿದ್ದು, ಅಲ್ಲಿನ ನಿವಾಸಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಭಾಗ ಕೂಡ ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ’ ಎಂದರು.

ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಪಾಟೀಲ ರದ್ದೇವಾಡಗಿ, ಮುಖಂಡರಾದ ಸಿದ್ದಾಜಿ ಪಾಟೀಲ, ಸುನೀಲ ವಲ್ಯಾಪೂರ ಇದ್ದರು.

*

‘ಕಾಂಗ್ರೆಸ್ಸಿಗರ ಆರೋಪ ಸುಳ್ಳು’

‘ನಾನು ವಿಧಾನ ಪರಿಷತ್‌ ಸದಸ್ಯನಾದ ಅವಧಿಯಲ್ಲಿ ಬಹುಪಾಲು ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇನೆ. ಕ್ಷೇತ್ರದ ಸಮಸ್ಯೆಗಳನ್ನು ಪರಿಷತ್‌ನಲ್ಲೂ ಚರ್ಚಿಸಿದ್ದೇನೆ. ಆದರೆ, ನಾನು ಒಂದೂ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಕಲಬುರಗಿ– ಯಾದಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಪ್ರತಿಕ್ರಿಯಿಸಿದರು.

‘ನಾನು ಅಧಿಕಾರಕ್ಕೆ ಲಾಲಸೆಪಟ್ಟವನಲ್ಲ. ಪಕ್ಷವು ನನ್ನ ಕೆಲಸ ನೋಡಿಯೇ ಮರಳಿ ಟಿಕೇಟ್‌ ನೀಡಿದೆ. ಗ್ರಾಮಗಳ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರು ಕೈಗೆತ್ತಿಕೊಂಡ ಕಾರ್ಯಯೋಜನೆಗಳನ್ನು ಪಂಚಾಯಿತಿಗಳಿಗೆ ಮುಟ್ಟಿಸುವುದು ನನ್ನ ಜವಾಬ್ದಾರಿ’‌ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT