ಗುರುವಾರ , ಜೂನ್ 30, 2022
25 °C
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್

ಮೂರನೇ ಅಲೆ ತಡೆಗೆ ಕೈಗೊಂಡ ಕ್ರಮವೇನು: ಅಜಯ್‌ಸಿಂಗ್‌ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪ್ರಧಾನಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರ ವಿಜಯ ರಾಘವನ್ ಅವರು ಕೊರೊನಾ ಮೂರನೇ ಅಲೆ ಜುಲೈ ಅಂತ್ಯದ ವೇಳೆಗೆ ಬರಲಿದೆ ಎಂದು ಹೇಳಿದ್ದಾರೆ. ಇನ್ನು ಎರಡೇ ತಿಂಗಳು ಸಮಯವಿದ್ದು ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಪ್ರಶ್ನಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರನೇ ಅಲೆಯು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಆರು ವರ್ಷದೊಳಗಿನವರೆಗೆ 2,23,241 ಮಕ್ಕಳು ಹಾಗೂ 6ರಿಂದ 14 ವರ್ಷದೊಳಗಿನ 5,35,715 ಮಕ್ಕಳಿದ್ದಾರೆ. ಇಎಸ್‌ಐಸಿ ಹಾಗೂ ಜಿಮ್ಸ್‌ನಲ್ಲಿ ತಲಾ 40 ಮಕ್ಕಳ ಬೆಡ್‌ಗಳಿವೆ. ಅದರಲ್ಲಿ ತಲಾ 10 ಐಸಿಯು ಬೆಡ್‌ಗಳಿವೆ. ಆದ್ದರಿಂದ ಈಗಿನಿಂದಲೇ ಜಿಲ್ಲಾಡಳಿತ ಮಕ್ಕಳ ಬೆಡ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕೊರೊನಾ ಸೋಂಕಿನಿಂದ ಸಂಭವಿಸುವ ಸಾವುಗಳನ್ನು ತಡೆಯಲು ಸರ್ಕಾರ ಮುಖ್ಯವಾಗಿ ಎಲ್ಲರಿಗೂ ಲಸಿಕೆಯನ್ನು ಕೊಡಿಸಬೇಕು. ಆದರೆ, ಜಿಲ್ಲೆಯಲ್ಲಿ ಗುರಿಗೆ ತಕ್ಕಷ್ಟು ಲಸಿಕೆ ಪೂರೈಕೆಯಾಗುತ್ತಿಲ್ಲ. ಜೇವರ್ಗಿಯಲ್ಲಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಎರಡು ಸಮುದಾಯ ಆರೋಗ್ಯ ಕೇಂದ್ರಗಳಿವೆ. ಸುಮಾರು 20 ಸಾವಿರ ಜನರಿಗೆ ಲಸಿಕೆ ಹಾಕಬೇಕಾಗಿದೆ. ಆದರೆ, ಜಿಲ್ಲೆಗೆ 2 ಸಾವಿರ ಲಸಿಕೆ ಹಂಚಿಕೆಯಾಗಿವೆ. ಹೀಗಾದರೆ ಎಲ್ಲರಿಗೂ ದೊರೆಯುವುದು ಯಾವಾಗ ಎಂದು ಪ್ರಶ್ನಿಸಿದರು.

‘ಮಕ್ಕಳಿಗೆ ಸೋಂಕು ಹರಡುವುದನ್ನು ತಪ್ಪಿಸಲು ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡಬೇಕು. ಅದಕ್ಕೂ ಮೊದಲು ಜಿಲ್ಲೆಯಲ್ಲಿ ಅಗತ್ಯವಿರುವಷ್ಟು ಲಸಿಕೆ ದಾಸ್ತಾನು ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಹಿಂದೆ ಬೀಳಬಾರದು. ಇತ್ತೀಚೆಗೆ ಮುಖ್ಯಮಂತ್ರಿ ಅವರೊಂದಿಗೆ ನಡೆದ ವಿಡಿಯೊ ಸಂವಾದದಲ್ಲಿ ಇದೇ ವಿಚಾರವನ್ನು ಹೇಳಿದ್ದೇನೆ’ ಎಂದು ಅವರು ಹೇಳಿದರು.

ಮಾಜಿ ಶಾಸಕ ಬಿ.ಆರ್. ಪಾಟೀಲ, ಶಾಸಕಿ ಖನೀಜ್ ಫಾತಿಮಾ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಠೋಡ, ಮುಖಂಡ ಸುಭಾಷ್ ರಾಠೋಡ  ಇದ್ದರು.

ಪತ್ರಕರ್ತರಿಗೆ ವಿಮೆ ಯೋಜನೆ
ಕೊರೊನಾ ವಾರಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಪತ್ರಕರ್ತರಿಗೆ ಧರ್ಮಸಿಂಗ್ ಫೌಂಡೇಶನ್‌ ವತಿಯಿಂದ ಹಿರಿಯ ಪತ್ರಕರ್ತ ದಿ.ಜಯತೀರ್ಥ ಕಾಗಲಕರ್ ಅವರ ಸ್ಮರಣಾರ್ಥ ಪತ್ರಕರ್ತರಿಗೆ ವಿಮಾ ಯೋಜನೆ ರೂಪಿಸಲಾಗಿದೆ ಎಂದು ಡಾ. ಅಜಯ್ ಸಿಂಗ್ ತಿಳಿಸಿದರು.

ಎಷ್ಟೋ ಪತ್ರಕರ್ತರಿಗೆ ಆರ್ಥಿಕ ಸಂಕಷ್ಟ ಇರುತ್ತದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಖರ್ಚು ಭರಿಸಲು ಸಾಧ್ಯವಾಗುವುದಿಲ್ಲ. ಇದನ್ನು ಗಮನಿಸಿ ಆರೋಗ್ಯ ವಿಮೆ ಮಾಡಿಸಲಾಗುತ್ತಿದೆ. ಈ ವಿಮೆಯು ಕೋವಿಡ್‌ ಅಷ್ಟೇ ಅಲ್ಲದೇ ಇತರೆ ಕಾಯಿಲೆಗಳ ಚಿಕಿತ್ಸೆಯನ್ನೂ ಭರಿಸುತ್ತದೆ ಎಂದರು. ಜಯತೀರ್ಥ ಕಾಗಲಕರ್ ಅವರ ಪತ್ನಿ ಮಂಜುಳಾ ಅವರಿಗೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಡಾ. ಅಜಯ್ ಸಿಂಗ್ ಅವರು ₹ 1 ಲಕ್ಷ ಹಾಗೂ ಅಲ್ಲಮಪ್ರಭು ಪಾಟೀಲ ವೈಯಕ್ತಿಕವಾಗಿ ₹ 20 ಸಾವಿರ ನೆರವು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು