ಭಾನುವಾರ, ಸೆಪ್ಟೆಂಬರ್ 27, 2020
27 °C
ಕೊರೊನಾ ಹತೋಟಿಗೆ ಸಕಲ ಉತ್ನ: ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿಕೆ

ಕ್ಷಿಪ್ರ ಸ್ಪಂದನೆಗೆ ‘ಕೋವಿಡ್‌ ಸುರಕ್ಷಾ ಚಕ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೋವಿಡ್ ಸೋಂಕಿತರಿಗೆ ತುರ್ತಾಗಿ ಸ್ಪಂದಿಸಲು ಮತ್ತು ಕ್ಷಿಪ್ರವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ‘ಕೋವಿಡ್‌ ಸುರಕ್ಷಾ ಚಕ್ರ’ ಎಂಬ ನೂತನ ಸಹಾಯವಾಣಿಯನ್ನು ಶೀಘ್ರ ಆರಂಭಿಸಲಾಗುವುದು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

‘ಈ ಬಗ್ಗೆ ಈಗಾಗಲೇ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ಮೂರು ದಿನಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ. ವೈರಸ್ ಇರುವುದು ದೃಢಪಟ್ಟವರು, ಕೂಡಲೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದರೆ, ಅವರಿಗೆ ಆಂಬುಲೆನ್ಸ್ ಕಳುಹಿಸಿ ಕೊಡುವುದು, ಎಲ್ಲಿ ಬೆಡ್ ಖಾಲಿ ಇದೆಯೋ ಅಲ್ಲಿಗೆ ದಾಖಲು ಮಾಡುವುದು, ಮತ್ತು ತುರ್ತು ಚಿಕಿತ್ಸಾ ಸೇವೆಗಳನ್ನು ಕಲ್ಪಿಸಲಾಗುವುದು’ ಎಂದು ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

‘ಗಂಟಲು ದ್ರವ ಪರೀಕ್ಷೆಗೆ ಕೊಟ್ಟವರ ವರದಿ ವಿಳಂಬವಾಗದಂತೆ ನೋಡಿಕೊಳ್ಳುವುದು, ಲಕ್ಷಣಗಳು ಇಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸಾ ಸಲಹೆ ನೀಡುವುದು, ವೈದ್ಯರನ್ನು ಭೇಟಿ ಮಾಡಿಸಿ ಸಲಹೆಯಂತೆ ಔಷಧ ಕಿಟ್‍ಗಳನ್ನು ಮನೆಗೆ ತಲುಪಿಸುವುದು...ಮುಂತಾದ ಸೇವಾಕಾರ್ಯಗಳನ್ನು ಈ ಸಹಾಯವಾಣಿ ಕೇಂದ್ರ ಮಾಡಲಿದೆ’ ಎಂದರು.

‘ವೆಂಟಿಲೇಟರ್ ಸೇರಿದಂತೆ ಅಡ್ವಾನ್ಸ್ ಲೈಫ್ ಸಪೋರ್ಟ್‌ ಸಲಕರಣೆಗಳು ಇರುವ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಹೆಚ್ಚು ಅನುಕೂಲ ಆಗಲಿದೆ. ತುರ್ತು ಸ್ಥಿತಿಯಲ್ಲಿರುವ ರೋಗಿಗೆ ಆಕ್ಸಿಜನ್‌ ವ್ಯವಸ್ಥೆಯೂ ಇದರಲ್ಲಿ ಇರಲಿದೆ’ ಎಂದು ಹೇಳಿದರು.

‘ಜಿಲ್ಲೆಯ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಸೋಂಕಿತರ ಮೇಲೆ ನಿಗಾ ಇರಿಸುವುದು, ಪ್ರತಿದಿನ ಅವರ ಆರೋಗ್ಯ ವಿಚಾರಿಸುವುದು. ಪ್ರತಿದಿನ ಕೋವಿಡ್-19 ಪಾಸಿಟಿವ್ ಬರುವ ವರದಿಗಳ ವಿವರ ಸಂಗ್ರಹಿಸಿ ಫಾಲೋಅಪ್ ಮಾಡುವುದು...ಮುಂತಾದ ಎಲ್ಲ ಬಗೆಯ ಮಾಹಿತಿಗಳನ್ನು ಸಹಾಯವಾಣಿಯಿಂದ ಪಡೆದುಕೊಳ್ಳಬಹುದು’ ಎಂದು ಶಾಸಕರೂ ಆದ ದತ್ತಾತ್ರೇಯ ತಿಳಿಸಿದರು.

ಮಾದರಿ ಸಂಗ್ರಹಕ್ಕೆ ಮೊಬೈಲ್‌ ವ್ಯಾನ್‌

ಕಲಬುರ್ಗಿ: ‘ಸೋಂಕು ಲಕ್ಷಣಗಳು ಕಂಡುಬಂದವರು ಹಾಗೂ ನೇರ ಸಂಪರ್ಕಿತರು ಈಗ ಮಾದರಿ ನೀಡಲು ಜಿಮ್ಸ್‌ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗಿದೆ. ಇದರಿಂದ ಹೆಚ್ಚು ತೊಂದರೆ ಆಗುತ್ತದೆ. ಇದನ್ನು ತ‍ಪ್ಪಿಸುವ ಉದ್ದೇಶದಿಂದ ಗಂಟಲು ಮಾದರಿ ಸಂಗ್ರಹಿಲು ಪ್ರತ್ಯೇಕ ಮೊಬೈಲ್‌ ವ್ಯಾನ್‌ಗಳನ್ನು ವ್ಯವಸ್ಥೆ ಮಾಡಲಾಗುವುದು’ ಎಂದು ಶಾಸಕ ದತ್ತಾತ್ರೇಯ ತಿಳಿಸಿದರು.

‘ಇದಕ್ಕಾಗಿ ಕಲಬುರ್ಗಿ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಮೂರು ಹಾಗೂ ಉಳಿದ ತಾಲ್ಲೂಕಿಗೆ ತಲಾ ಒಂದು  ಒಂದು ವಾಹನ ಕಲ್ಪಿಸಲಾಗುವುದು’ ಎಂದರು.

‘ಈ ಕುರಿತು ಮಂಡಳಿಯ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಬಿ.ಶರತ್ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ವೈದ್ಯರಿಂದಲೂ ಸಲಹೆ ಪಡೆದಿದ್ದೇನೆ. ಇದರಿಂದ ಪರೀಕ್ಷೆ ಮಾಡಿಸಿಕೊಳ್ಳಲು ಪರದಾಡುವುದನ್ನು ತಪ್ಪಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.