ಶಾಸಕ ಜಾಧವ ಕ್ಷೇತ್ರಕ್ಕೆ ವಾಪಸ್‌; ಹೆಚ್ಚಿದ ಕುತೂಹಲ

7
ಬೆಟಸೂರಲ್ಲಿ ಉಮೇಶ ಅವರ ತಂದೆಯ ಪುಣ್ಯತಿಥಿ, ಸಿದ್ಧಗಂಗಾ ಶ್ರೀಗೆ ಶ್ರದ್ಧಾಂಜಲಿ ಇಂದು

ಶಾಸಕ ಜಾಧವ ಕ್ಷೇತ್ರಕ್ಕೆ ವಾಪಸ್‌; ಹೆಚ್ಚಿದ ಕುತೂಹಲ

Published:
Updated:
Prajavani

ಕಲಬುರ್ಗಿ: ಕಾಂಗ್ರೆಸ್‌ನೊಂದಿಗೆ ‘ಮುನಿಸಿಕೊಂಡಿರುವ’ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಅವರು ಕ್ಷೇತ್ರಕ್ಕೆ ಮರಳಿದ್ದು, ಅವರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಉಮೇಶ ಅವರ ತಂದೆ ಗೋಪಾಲರಾವ ಜಾಧವ ಅವರ ಪುಣ್ಯಸ್ಮರಣೆ ಜ.24ರಂದು ಬೆಳಿಗ್ಗೆ 10.30ಕ್ಕೆ ಕಾಳಗಿ ತಾಲ್ಲೂಕಿನ ಬೆಟಸೂರ (ಎಂ) ತಾಂಡಾದಲ್ಲಿ ಜರುಗಲಿದೆ. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಮಾರಂಭವನ್ನೂ ಇದರೊಟ್ಟಿಗೆ ಹಮ್ಮಿಕೊಳ್ಳಲಾಗಿದೆ. ವಿವಿಧ ಧರ್ಮಗುರುಗಳನ್ನೂ ಈ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

‘ಪ್ರತಿ ವರ್ಷ ತಂದೆಯ ಪುಣ್ಯಸ್ಮರಣೆಯನ್ನು ಕಲಬುರ್ಗಿಯ ಮನೆಯಲ್ಲಿ ಮಾಡುತ್ತಿದ್ದರು. ಈ ಬಾರಿ ಸ್ವಗ್ರಾಮದಲ್ಲಿ ಹಮ್ಮಿಕೊಂಡಿದ್ದಾರೆ. ಶಾಸಕರ ಮುಂದಿನ ನಡೆಯ ಬಗ್ಗೆ ಆಪ್ತ ಕಾರ್ಯಕರ್ತರೊಂದಿಗೆ ಅನೌಪಚಾರಿಕ ಚರ್ಚೆಯೂ ನಡೆಯಲಿದೆ’ ಎನ್ನುವುದು ಅವರ ಬೆಂಬಲಿಗರು ಹೇಳುವ ಮಾತು.

ಕದಡಿದ ಮನ: ‘ನನ್ನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿಲಾಗುತ್ತಿದೆ’ ಎಂದು ಉಮೇಶ ಜಾಧವ ಹೇಳುತ್ತಿದ್ದರೆ, ಶಾಸಕರ ನಡೆಯಿಂದ ಮುಜುಗುರಕ್ಕೀಡಾಗಿರುವ ಜಿಲ್ಲಾ ಕಾಂಗ್ರೆಸ್‌ ಸಹ ‘ನಿರ್ಲಕ್ಷ್ಯದ ಅಸ್ತ್ರ’ ಪ್ರಯೋಗಿಸಿದೆ.

‘ಕಲಬುರ್ಗಿಯಲ್ಲಿ ಈಚೆಗೆ ನಡೆದ ಸಮಾರಂಭದ ಫ್ಲೆಕ್ಸ್‌ನಲ್ಲಿ ಉಮೇಶ ಜಾಧವ ಅವರ ಚಿತ್ರ ಮಾಯವಾಗಿತ್ತು. ಉಮೇಶ ಅವರ ಮುಂದಿನ ನಿರ್ಧಾರ ಏನೇ ಆಗಿರಲಿ. ನಾವಂತೂ ಅವರಿಂದ ಅಂತರ ಕಾಯ್ದುಕೊಂಡಿದ್ದೇವೆ ಎಂಬುದು ಇದರ ಸಂಕೇತವಾಗಿತ್ತು’ ಎಂದು ಜಿಲ್ಲಾ ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದರು.

ಏತನ್ಮಧ್ಯೆ, ‘ಉಮೇಶ ಜಾಧವ ಅವರು ಹೇಳಿದ ಅಧಿಕಾರಿಗಳನ್ನು ಅವರ ಕ್ಷೇತ್ರಕ್ಕೆ ವರ್ಗಾಯಿಸಿದ್ದೇವೆ. ಅವರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ಹೋಗುವುದಾದರೆ ಹೋಗಲಿ, ಆದರೆ, ವಿನಾಕಾರಣ ನನ್ನ ಮೇಲೆ ಗೂಬೆ ಕೂಡಿಸಿ ಹೋಗುವುದು ಬೇಡ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಖಡಾಖಂಡಿತವಾಗಿ ಹೇಳಿಯಾಗಿದೆ.

‘ಸಚಿವ ಪ್ರಿಯಾಂಕ್‌ ಸುಳ್ಳು ಹೇಳುತ್ತಿದ್ದಾರೆ. ಅವರ ಹಸ್ತಕ್ಷೇಪ ನಿಜ. ಶಾಸಕರು ಬಂದ ನಂತರ ಎಲ್ಲವನ್ನೂ ಹೇಳುತ್ತಾರೆ’ ಎಂದು ಕೇಳಿಕೆ ನೀಡಿರುವ ರಾಮಚಂದ್ರ ಜಾಧವ ‘ಈ ಕದನ’ ಇಲ್ಲಿಗೆ ನಿಂತಿಲ್ಲ ಎಂಬ ಸುಳಿವು ನೀಡಿದ್ದಾರೆ.

ಆದರೆ, ಉಮೇಶ ಜಾಧವ ಅವರು ಯಾವ ವಿಷಯಕ್ಕೂ ಪ್ರತಿಕ್ರಿಯಿಸದೆ ‘ಜಾಣ ನಡೆ’ ಅನುಸರಿಸಿದ್ದಾರೆ.

10 ದಿನಗಳ ಅವಧಿಯಲ್ಲಿ ಜಿಲ್ಲೆಯ ರಾಜಕೀಯದಲ್ಲಿ ಸಾಕಷ್ಟು ಕೆಸರೆರಚಾಟ ನಡೆದಿದೆ. ಕದಡಿದ ನೀರಿನಂತಾಗಿರುವ ಮನಗಳು ಮತ್ತೆ ಒಂದಾಗಲಿವೆಯೇ? ಉಮೇಶ ಜಾಧವ ತೊಡೆತಟ್ಟಿ ‘ದೊಡ್ಡ ಕುಸ್ತಿ’ಗೆ ಆಖಾಡಕ್ಕೆ ಇಳಿಯಲಿದ್ದಾರೆಯೇ? ಈ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ದೊರೆಯಬೇಕಿದೆ.

ಮುಂಬೈನಲ್ಲಿ ಮತದಾರರೊಂದಿಗೆ ಸಭೆ
‘ಚಿಂಚೋಳಿ ಕ್ಷೇತ್ರದ 10 ಸಾವಿರಕ್ಕೂ ಹೆಚ್ಚು ಮತದಾರರು ವರ್ಷಕ್ಕೆ ನಾಲ್ಕಾರು ತಿಂಗಳು ಮುಂಬೈಗೆ ಕೆಲಸಕ್ಕೆ ಹೋಗಿರುತ್ತಾರೆ. ಶಾಸಕರು ಬುಧವಾರ ಮುಂಬೈನಲ್ಲಿ ಅವರೊಟ್ಟಿಗೆ ಸಭೆ ನಡೆಸಿದರು’ ಎಂದು ಶಾಸಕರ ಸಹೋದರ, ರಾಮಚಂದ್ರ ಜಾಧವ ತಿಳಿಸಿದರು.

‘ನಿಮಗೆ ಮತ್ತು ಸಮಾಜಕ್ಕೆ ಒಳ್ಳೆಯದಾಗಬೇಕು. ನಿಮಗೆ ಸರಿ ಅನ್ನಿಸುವ ನಿರ್ಧಾರ ಕೈಗೊಳ್ಳಿ. ನಿಮ್ಮ ಜೊತೆ ನಾವಿರುತ್ತೇವೆ ಎಂದು ಮುಂಬೈ ಸಭೆಯಲ್ಲಿ ಇದ್ದವರು ಹೇಳಿದರು’ ಎಂದು ಅವರು ಹೇಳಿದರು.

‘ಬೆಟಸೂರ ತಾಂಡಾದಲ್ಲಿ ನಡೆಯುವ ಪುಣ್ಯತಿಥಿ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ಉಮೇಶ ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !