ಮಂಗಳವಾರ, ಡಿಸೆಂಬರ್ 7, 2021
20 °C
ರೈತ ಹೋರಾಟಗಾರ ದಿ. ಮಾರುತಿ ಮಾನಪಡೆ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ವಿಚಾರ ಸಂಕಿರಣ

‘ದೇಶ ಮಾರಲು ಹೊರಟಿರುವ ಪ್ರಧಾನಿ ಮೋದಿ’: ಯು. ಬಸವರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಳೆದ ಏಳು ವರ್ಷಗಳ ದುರಾಡಳಿತದಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕಿಳಿದಿದ್ದು, ಇದನ್ನು ಸರಿಪಡಿಸಲು ಯಾವುದೇ ಸೂಕ್ತ ಯೋಜನೆ ರೂಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯ ಬೆವರಿನಿಂದ ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಸಿಪಿಐ (ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ರೈತ, ಕಾರ್ಮಿಕ ಹೋರಾಟಗಾರರಾಗಿದ್ದ ದಿ. ಮಾರುತಿ ಮಾನಪಡೆ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಪಕ್ಷದಿಂದ ಆಯೋಜಿಸಿದ್ದ ಜನ ಚಳವಳಿಗಳ ಅಗತ್ಯತೆ, ಸವಾಲು ಮತ್ತು ಸಾಧ್ಯತೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಜನರನ್ನು ಮರಳು ಮಾಡಲು ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಹೇಳುವ ಬದಲು ನಗದೀಕರಣ (ಮಾನಟೈಸೇಷನ್) ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಸರ್ಕಾರಿ ವಲಯದ ಸಂಸ್ಥೆಗಳನ್ನು ಮಾರುವ ಮೂಲಕ ₹ 6 ಲಕ್ಷ ಕೋಟಿ ಹಣವನ್ನು ಪಡೆಯಲು ಮುಂದಾಗಿದ್ದಾರೆ. ಜನರು ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳ ಮೂಲಕ ವರ್ಷಕ್ಕೆ ₹ 35 ಲಕ್ಷ ಕೋಟಿಯಷ್ಟು ಭಾರಿ ಮೊತ್ತದ ಹಣವನ್ನು ಕಟ್ಟುತ್ತಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದರು.

ದೇಶದ 117 ಕೋಟಿ ಜನರ ತಲಾದಾಯ ಇಂದಿಗೂ ₹ 10ಕ್ಕಿಂತ ಕಡಿಮೆ ಇದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅದೇ ಸಂದರ್ಭದಲ್ಲಿ ದೇಶದ ದೊಡ್ಡ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರ ಸಂಸ್ಥೆಗಳ ಹಾಗೂ ವೈಯಕ್ತಿಕ ಆದಾಯ ಸಾವಿರಾರು ಪಟ್ಟು ಹೆಚ್ಚಾಗಿದೆ. ಅಂಬಾನಿ, ಅದಾನಿ ಪ್ರತಿ ಗಂಟೆಗೆ ₹ 120 ಕೋಟಿ ಗಳಿಕೆ ಮಾಡುತ್ತಿದ್ದಾರೆ. ಆದರೆ, ಅದೇ ಸಂದರ್ಭದಲ್ಲಿ ಪ್ರತಿ ನಿಮಿಷಕ್ಕೆ 12 ಜನ ಹಸಿವಿನಿಂದ ಸಾಯುತ್ತಿದ್ದಾರೆ. ಇಷ್ಟೊಂದು ತಾರತಮ್ಯವೇಕೆ? ಜನಪರ ಯೋಜನೆ ಜಾರಿಗೊಳಿಸುವುದಾಗಿ ಅಧಿಕಾರಕ್ಕೆ ಬಂದ ಮೋದಿ ಅವರು ಈಗ ಉದ್ಯಮಿಗಳ ಪರ ನೀತಿಗಳನ್ನು ಜಾರಿಗೊಳಿಸುತ್ತಿದ್ದಾರೆ. ಬಡವರೆಲ್ಲ ಎಲ್ಲಿ ಹೋಗಬೇಕು’ ಎಂದು ಪ್ರಶ್ನಿಸಿದರು.

ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ನಿತ್ಯಾನಂದ ಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನೂರಾರು ರೈತ ಸಂಘಟನೆಗಳು ದೆಹಲಿ ಹೊರವಲಯದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಒಂದು ವರ್ಷ ಆಗುತ್ತಲಿದೆ. ರೈತರ ಬೇಡಿಕೆಗಳ ಬಗ್ಗೆ ಮೋದಿ ಸರ್ಕಾರ ಕಿವುಡಾಗಿದೆ. ಅದಕ್ಕಾಗಿ ಎಲ್ಲ ಬಗೆಯ ದುರಾಡಳಿತದಿಂದ ಮುಕ್ತಿ ಹೊಂದಲು ರೈತ ಹೋರಾಟವೊಂದೇ ಆಶಾಕಿರಣವಾಗಿದೆ. ಆದ್ದರಿಂದ ಈ ಹೋರಾಟದಲ್ಲಿ ಕಾರ್ಮಿಕರು ದೊಡ್ಡ ಸಂಖ್ಯೆಯನ್ನು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

‘ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಮಿತಿ ಮೀರಿವೆ. ಸಮಾಜ ಘಾತುಕ ಶಕ್ತಿಗಳ ಕೈ ಮೇಲಾಗುತ್ತಿದೆ. ಇದನ್ನು ತಡೆಯಲು ಎಲ್ಲರೂ ಒಂದಾಗಬೇಕಾದ ಅಗತ್ಯವಿದೆ’ ಎಂದರು.

ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ‘ಮಾರುತಿ ಮಾನಪಡೆ ಅವರು ಅಂಬಲಗಿ ಎಂಬ ಚಿಕ್ಕ ಗ್ರಾಮದಲ್ಲಿ ಜನಿಸಿ ತಮ್ಮ ಬದ್ಧತೆಯಿಂದಾಗಿ ರಾಜ್ಯದಾದ್ಯಂತ ಹೆಸರು ಮಾಡಿದ್ದರು. ಅವರ ಅಗಲಿಕೆ ರಾಜ್ಯದ ರೈತ ಚಳವಳಿಗೆ ದೊಡ್ಡ ನಷ್ಟವಾಗಿದೆ’ ಎಂದು ವಿಷಾದಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಕೆ. ನೀಲಾ, ಶ್ರೀಮಂತ ಬಿರಾದಾರ, ಗೌರಮ್ಮ ಪಾಟೀಲ, ನಾಗಯ್ಯ ಸ್ವಾಮಿ, ಮೇಘರಾಜ ಕಠಾರೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು