ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆ ಆರೋಪಿಗಳ ಬಂಧನ, 1.68 ಕೆ.ಜಿ ಚಿನ್ನಾಭರಣ ವಶ

ಕಲಬುರಗಿ ತಾಲ್ಲೂಕಿನ ಧರ್ಮಾಪುರ ಬಳಿ ಬಸ್‌ ಅಡ್ಡಗಟ್ಟಿ ದರೋಡೆ, ಬಂಧಿತರೆಲ್ಲರೂ 27 ವರ್ಷದೊಳಗಿನವರು
Last Updated 9 ಡಿಸೆಂಬರ್ 2021, 15:40 IST
ಅಕ್ಷರ ಗಾತ್ರ

ಕಲಬುರಗಿ: ಚಿನ್ನಾಭರಣ ವ್ಯಾಪಾರಿಯೊಬ್ಬರನ್ನು ಅಪಹರಿಸಿ ₹ 85 ಲಕ್ಷ ಮೌಲ್ಯದ 1.68 ಕೆ.ಜಿ ತೂಕದ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣ ಬೇಧಿಸಿರುವ ನಗರದ ‍ಪೊಲೀಸರು, ಎಂಟು ಯುವಕರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಶಹಾಬಾದ್‌ ನಗರ ಸಮೀಪದಸೇವಾನಗರ ತಾಂಡಾದ ರವೀಂದ್ರ ಧೇನು ಜಾಧವ, ರಾಮು ರಮೇಶ ರಾಠೋಡ, ದತ್ತು ಖೂಬು ರಾಠೋಡ, ಹನುಮಾನ್‌ ತಾಂಡಾದ ಸಚಿನ್‌ ರಮೇಶ ರಾಠೋಡ, ವಿಕ್ರಮ ರಾಜು ನಾಯಕ, ಡಕ್ಕಾ ತಾಂಡಾದ ಲೋಕೇಶ ಬಿಲ್ಲು ಚವ್ಹಾಣ, ಭೀಮಶೆಪ್ಪ ನಗರದ ತಿಮ್ಮಣ್ಣ ಈರಣ್ಣ ಪವಾರ, ಸೇಡಂ ಪಟ್ಟಣದ ನಿವಾಸಿ ಮೆಹಬೂಬ್‌ ಮಹ್ಮದ್‍ ಫಿರೋಜ್ ಬಂಧಿತರು. ಈ ಎಲ್ಲರೂ 20ರಿಂದ 27 ವರ್ಷದೊಳಗಿನವರೇ ಆಗಿದ್ದಾರೆ. ಅಲ್ಲದೇ ಸಚಿನ ರಾಠೋಡ ನಗರದ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದಾನೆ.

‘ಮುಂಬೈ ನಗರದಲ್ಲಿ ಚಿನ್ನಾಭರಣ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದ, ರಾಜಸ್ಥಾನ ಮೂಲದವರಾದ ಕಿಶನ್‌ಲಾಲ್ ಗುರ್ಜರ್‌ ಧನ್ನರಾಮ ಎಂಬುವವರನ್ನು ನವೆಂಬರ್‌ 23ರಂದು ಚಿನ್ನಾಭರಣ ಮಾರಲು ಕಲಬುರಗಿ ನಗರಕ್ಕೆ ಬರುತ್ತಿದ್ದರು. ಇವರು ಬರುವ ಮಾಹಿತಿ ಕಲೆಹಾಕಿದ ಈ ಯುವಕರು ದರೋಡೆಗೆ ಸಂಚು ರೂಪಿಸಿದ್ದರು. ಮೊದಲು ಜೇವರ್ಗಿ, ಶಹಾಬಾದ್‌ ನಗರದಲ್ಲಿ ಈ ವ್ಯಾಪಾರಿ ಚಿನ್ನಾಭರಣ ಮಾರಾಟ ಮಾಡಲು ಓಡಾಡಿದ್ದನ್ನು ಆರೋಪಿಗಳು ಹಿಂಬಾಲಿಸಿ ನೋಡಿದ್ದರು.‌ ನಂತರ ಕಲಬುರಗಿಗೆ ಬರುವಾಗ ಹತ್ತಿದ್ದ ಬಸ್‌ ಬೆನ್ನಟ್ಟಿ ಬಂದ ಆರೋಪಿಗಳು, ಧರ್ಮಾಪುರ ಬಳಿ ಬಸ್‌ ನಿಲ್ಲಿಸಿ, ವ್ಯಾಪಾರಿಯನ್ನು ಬಸ್ಸಿನಿಂದ ಇಳಿಸಿ ಹೊಲದೊಳಗೆ ಕರೆದುಕೊಂಡು ಹೋಗಿ ಎಲ್ಲ ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ ತಿಳಿಸಿದರು.

‘ಬಂಧಿತ ಆರೋಪಿಗಳೆಲ್ಲರೂ ಇದೇ ಮೊದಲ ಬಾರಿಗೆ ಇಂಥ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಯಾವುದೇ ತರಹದ ಅಪರಾಧ ಕೃತ್ಯಗಳಲ್ಲಿ ತೊಡಗಿಲ್ಲ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದೂ ಅವರು ಮಾಧ್ಯಮಗಳ ಮುಂದೆ ಮಾಹಿತಿ ನೀಡಿದರು.

‘ಬಂಧಿತರ ಗುಂಪಿನಲ್ಲಿರುವ ವಿದ್ಯಾರ್ಥಿ ಸಚಿನ್‌ ಸಾಲ ಮಾಡಿಕೊಂಡಿದ್ದಾನೆ. ಸಾಲ ತೀರಿಸುವ ಸಲುವಾಗಿ ಎಲ್ಲಿಯಾದರೂ ಕಳವು, ದರೋಡೆ ಮಾಡಬೇಕು ಎಂದು ಎಂಟೂ ಸ್ನೇಹಿತರು ಸೇರಿಕೊಂಡು ಹೊಂಚು ಹಾಕಿದ್ದರು. ಅದಕ್ಕೆ ತಕ್ಕಂತೆ ಚಿನ್ನಾಭರಣ ವ್ಯಾಪಾರಿ ಕಿಶನ್‌ಲಾಲ್ ಅವರನ್ನು ದರೋಡೆ ಮಾಡಿದ್ದಾಗಿ ತನಿಖೆ ವೇಳೆ ಗೊತ್ತಾಗಿದೆ’ ಎಂದರು.

ಪೊಲೀಸರ ಚಾಕಚಕ್ಯತೆಗೆ ಪ್ರಶಂಸೆ: ಈ ಪ್ರಕರಣ ಬೇಧಿಸಲು ವಿಶೇಷ ತನಿಖಾ ದಳದ ಇನ್‍ಸ್ಪೆಕ್ಟರ್ ಶಿವಾನಂದ ಗಾಣಿಗೇರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಪೊಲೀಸ್‌ ಅಧಿಕಾರಿಗಳು ಹಾಗೂ ಕಾನ್‌ಸ್ಟೆಬಲ್‌ಗಳ ತಂಡವು ಚಾಕಚಕ್ಯತೆಯಿಂದ ತನಿಖೆ ಕೈಗೊಂಡು ಕೇವಲ 16 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ, ದರೋಡೆ ಮಾಡಿದ ಆಭರಣಗಳನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಡಾ.ವೈ.ಎಸ್‌.ರವಿಕುಮಾರ್‌ ಪ್ರಶಂಸಿಸಿದರು.

‌ಡಿಎಸ್ಪಿಗಳಾದ ಅಡ್ಡೂರು ಶ್ರೀನಿವಾಸುಲು, ಶ್ರೀಕಾಂತ ಕಟ್ಟಿಮನಿ, ಸಬ್ ಅರ್ಬನ್ ಎಸಿಬಿ ಜೆ.ಎಚ್.ಇನಾಮದಾರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್‌ಗಳಾದ ಶಿವಾನಂದ ಗಾಣಿಗೇರ (ವಿಶ್ವವಿದ್ಯಾಲಯ ಠಾಣೆ), ಚಂದ್ರಶೇಖರ ತಿಗಡಿ (ಎಂ.ಬಿ ನಗರ ಠಾಣೆ), ಅಸ್ಲಂ ಭಾಷಾ (ರೋಜಾ ಠಾಣೆ), ರಾಘವೇಂದ್ರ (ಫರಹತಾಬಾದ್‌ ಠಾಣೆ) ಕಾರ್ಯಾಚರಣೆಗೆ ಇಳಿದಿದ್ದರು. ಇವರೊಂದಿಗೆ ವಿಶ್ವವಿದ್ಯಾಲಯ ಠಾಣೆಯ ಸಿಬ್ಬಂದಿ ರಾಜು ಟಕಾಳೆ, ಅರವಿಂದ, ಸುಲ್ತಾನ್, ಶಶಿಕಾಂತ, ಪ್ರೀತಮ್, ಈರಣ್ಣ, ರಾಜಕುಮಾರ, ಸುರೇಶ, ಚನ್ನವೀರ, ಶರಣಪ್ಪ ಕೂಡ ಇದ್ದರು.‌

ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT