ಗುರುವಾರ , ಜುಲೈ 7, 2022
25 °C

ಸಾವಯವ ಕೃಷಿಯಲ್ಲಿ ಲಾಭ: ಕೃಷಿ ಉತ್ಪನ್ನಗಳನ್ನೇ ಬ್ರ್ಯಾಂಡ್‌ ಮಾಡಿಕೊಂಡ ಜಿತೇಂದ್ರ

ತೀರ್ಥಕುಮಾರ ಬೆಳಕೋಟಾ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿರುವ ಇಲ್ಲಿನ ಜಿತೇಂದ್ರ ಮಿಶ್ರಾ ಅವರು ಕೃಷಿ ಕಾಯಕ ರೂಢಿಸಿಕೊಂಡಿದ್ದಾರೆ. ತಮ್ಮ 27 ಎಕರೆ ಜಮೀನಿನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆದು, ಸಾವಯವ ಪದ್ಧತಿಯಿಂದಲೇ ಕೃಷಿ ಮಾಡಿ ಲಾಭ ಗಳಿಸುತ್ತಿದ್ದಾರೆ.

ಆರು ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಆಲೆಮನೆಯಲ್ಲಿ ತಯಾರಿಸುವ ಸಾವಯಲವ ಬೆಲ್ಲಕ್ಕೆ ಹೆಚ್ಚು ಬೇಡಿಕೆ ಇದೆ. ಸುಣ್ಣದ ಪುಡಿ, ದೇಶಿ ಬೆಂಡಿ ಲಾಡಿ, ಔಡಲ ಪುಡಿ ಮಿಶ್ರಣ ಮಾಡುವುದು ಇವರು ಕಂಡುಕೊಂಡ ವಿಶೇಷ ಮಾದರಿ. ಕೆ.ಜಿ.ಗಳ ಲೆಕ್ಕದಲ್ಲಿ ಬೆಲ್ಲದ ಮುದ್ದೆ ಮಾಡಲಾಗುತ್ತದೆ. ಡಬ್ಬಿಗಳಲ್ಲಿ ಶೇಖರಿಸಿ ಬೆಲ್ಲದ ಪಾಕ ಸಹ ಮಾರಾಟ ಮಾಡಲಾಗುತ್ತದೆ.

‘ಬೆಲ್ಲವನ್ನು ಜನರು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಕಬ್ಬು ಕಾರ್ಖಾನೆಗೆ ಕಳುಹಿಸಿದರೆ ಟನ್‌ಗೆ ₹ 2300 ದೊರೆಯುತ್ತದೆ. ಒಂದು ಟನ್‌ ಕಬ್ಬಿನಲ್ಲಿ ನಾವು 1 ಕ್ವಿಂಟಲ್‌ ಬೆಲ್ಲ ತಯಾರಿಸುತ್ತೇವೆ. ಕ್ವಿಂಟಲ್‌ ಬೆಲ್ಲಕ್ಕೆ ₹ 6 ಸಾವಿರ ಇದೆ. ₹ 2 ಸಾವಿರ ನಿರ್ವಹಣೆ ವೆಚ್ಚ ಕಳೆದರೂ ₹4 ಸಾವಿರ ಆದಾಯವಾಗುತ್ತದೆ. ಎಕರೆಗೆ 40 ಟನ್‌ ಕಬ್ಬು ಬೆಳೆಯುತ್ತೇನೆ. ಇದನ್ನೆಲ್ಲ ಕಾರ್ಖಾನೆಗೆ ಕಳುಹಿಸಿದರೆ ಕೇವಲ ₹1 ಲಕ್ಷ ಬರುತ್ತಿತ್ತು. ಬೆಲ್ಲ ಮಾಡಿ ಗ₹ 2.40 ಲಕ್ಷ ಗಳಿಸಿದ್ದೇನೆ. ₹ 1.80 ಲಕ್ಷ ಉಳಿತಾಯವಾಗಿದೆ. ಅಲ್ಲದೇ, ದನಗಳಿಗೆ ಸತ್ವಯುತ ಮೇವು, ಗೊಬ್ಬರ, 25 ಜನ ಕಾರ್ಮಿಕರಿಗೆ ಉದ್ಯೋಗ ಒದಗಿಸಿದ ಸಾರ್ಥಕತೆ ನನಗಿದೆ. ಇವರೆಲ್ಲರಿಗೂ ಸಮವಸ್ತ್ರ ಒದಗಿಸಿದ್ದೇನೆ’ ಎಂದು ರೈತ ಜೀತೇಂದ್ರ ಮಿಶ್ರಾ ಸಂತಸ ವ್ಯಕ್ತಪಡಿಸಿದರು.

ತೊಗರಿ, ಹೆಸರು, ಉದ್ದು ಬೆಳೆಯುವ ಇವರು ತೊಗರಿ ಬೇಳೆ, ಉದ್ದು, ಹೆಸರು ಕಾಳುಗಳನ್ನು ಕೆ.ಜಿಗಳ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಹೀಗಾಗಿ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಆದಾಯ ಬರುತ್ತಿದೆ. ಜಾನುವಾರುಗಳಿಗೆ ಚುನ್ನಿ ಸಿಗುತ್ತದೆ. ಮೂಸಂಬಿ, ಮಾವು, ಸೀಬೆ, ನೇರಳೆ, ನಿಂಬೆ ನಾಟಿ ಮಾಡಲಾಗಿದ್ದು ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡಿ ಮಾರಾಟ ಮಾಡಲಾಗುತ್ತದೆ. ನಿಂಬೆ ಉಪ್ಪಿನಕಾಯಿ ಸಿದ್ಧಪಡಿಸಲು ಯೋಚಿಸಲಾಗಿದೆ. ಅರಣ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು 14,000 ತೇಗದ ಸಸಿ ನೆಟ್ಟಿದ್ದು ಸದ್ಯ 800 ಗಿಡಗಳು ಬೆಳೆದು ನಿಂತಿವೆ. ಕೃಷಿ ಹೊಂಡ ತೋಡಿಸಿದ್ದು ಇದರಿಂದ ಬೋರ್‌ವೆಲ್‌ ಬಾವಿಗಳಿಗೆ ನೀರು ಮರು ಪೂರಣವಾಗುತ್ತದೆ.

ಮಾರುಕಟ್ಟೆ ವ್ಯವಸ್ಥೆ: ‘ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಸಲಹೆ, ಮಾರ್ಗದರ್ಶನದಲ್ಲಿ ‘ಮಿಶ್ರಾ ಸಾವಯವ ಕೃಷಿ ಉತ್ಪಾದನೆ’ ಎಂದು ಉತ್ಪನ್ನಗಳಿಗೆ ಬ್ರ್ಯಾಂಡ್‌ ಒದಗಿಸಲಾಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿಕೊಂಡಿದ್ದಾರೆ. ಹಣ್ಣು, ಬೇಳೆ, ಬೆಲ್ಲ, ಸೇರಿದಂತೆ ಅವರಲ್ಲಿ ಲಭ್ಯ ಇರುವ ಉತ್ಪನ್ನ ಹಾಗೂ ಅದರ ಬೆಲೆ ಮಾಹಿತಿಯನ್ನೊಳಗೊಂಡ ಫೋಟೊ, ವಿಡಿಯೊ ಹಂಚಿಕೊಳ್ಳುತ್ತೇನೆ. ಸಮೀಪದಲ್ಲಿದ್ದವರು ನಮ್ಮಲ್ಲಿಗೆ ಬಂದು ಕೊಂಡ್ಯೊಯ್ಯುತ್ತಾರೆ. ಕೋರಿಯರ್‌ ಮೂಲಕವೂ ಕಳುಹಿಸಲಾಗುತ್ತದೆ’ ಎಂದು ಹೇಳುತ್ತಾರೆ.

ಮಿಶ್ರಾಗೆ ‘ಕೃಷಿ ಪಂಡಿತ’ ಪ್ರಶಸ್ತಿ
ಕಮಲಾಪುರದ ಪ್ರಗತಿಪರ ರೈತ ಜೀತೇಂದ್ರ ಹೀರಾಲಾಲ್‌ ಮಿಶ್ರಾ ಅವರಿಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ 2021-2022ನೇ ಸಾಲಿನ ’ಕೃಷಿ ಪಂಡಿತ‘ ಪ್ರಶಸ್ತಿ ಲಭಿಸಿದೆ.

ಸಮಗ್ರ ಕೃಷಿಯಲ್ಲಿ ಸಾಧನೆಗೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 2010 ರಲ್ಲಿ ಸನ್ಮಾನಿಸಲಾಗಿತ್ತು. 2021 ಜನವರಿ 26 ತಾಲ್ಲೂಕು ಆಡಳಿತ ವತಿಯಿಂದ ಸನ್ಮನಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು