ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಪಿಂಚಣಿದಾರರ ಬ್ಯಾಂಕ್‌ ಖಾತೆಗೆ ಹಣ ಪಾವತಿಗೆ ಸಂಸದ ಖೂಬಾ ಸೂಚನೆ

ಆಳಂದ, ಚಿಂಚೋಳಿ ತಾಲ್ಲೂಕಿನ ಅಧಿಕಾರಿಗಳೊಂದಿಗೆ ಸಭೆ
Last Updated 28 ಆಗಸ್ಟ್ 2020, 12:34 IST
ಅಕ್ಷರ ಗಾತ್ರ

ಕಲಬುರ್ಗಿ: ಡಿಜಿಟಲ್ ಇಂಡಿಯಾ ಸಾಕಾರಗೊಳಿಸಲು ಮತ್ತು ಸಾಮಾಜಿಕ ಪಿಂಚಣಿ ಪಡೆಯಲು ವೃದ್ಧರು ಇಲಾಖೆಗಳಿಗೆ ತಿರುಗಾಡುವುದನ್ನು ಹಾಗೂ ಮಾನವ ಸಂಪರ್ಕವನ್ನು ಕಡಿಮೆಗೊಳಿಸಲು ಖಾತೆಗಳಿಗೆ ನೇರ ಪಾವತಿ (ಡಿಬಿಟಿ) ಮೂಲಕ ಫಲಾನುಭವಿಗಳ ಖಾತೆಗೆ ಪಿಂಚಣಿ ಜಮಾ ಆಗುವಂತೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಬೀದರ್ ಸಂಸದ ಭಗವಂತ ಖೂಬಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ಐವಾನ್–ಇ-ಶಾಹಿ ಅತಿಥಿಗೃಹದಲ್ಲಿಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಳಂದ ಮತ್ತು ಚಿಂಚೋಳಿ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಪಿಂಚಣಿ ವಿಭಾಗ ಮತ್ತು ಅಂಚೆ ಇಲಾಖೆಯು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬೀದರ್ ಜಿಲ್ಲೆಯಲ್ಲಿ ಈ ಕಾರ್ಯ ಈಗಾಗಲೆ ಆರಂಭಿಸಲಾಗಿದೆ ಎಂದರು.

ಆಳಂದ ಮತ್ತು ಚಿಂಚೋಳಿ ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ತೊಗರಿ, ಉದ್ದು, ಹೆಸರು ಹಾಗೂ ಹತ್ತಿ ಬೆಳೆಗಳು ನಾಶವಾಗಿದ್ದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ವಿಮೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಬೆಳೆ ನಾಶದ ಬಗ್ಗೆ ಕೃಷಿ ಅಧಿಕಾರಿಗಳು ವಿಮೆ ಸಂಸ್ಥೆಗೆ ಕೂಡಲೇ ಮಾಹಿತಿ ನೀಡಬೇಕು. ವಿಮಾ ಸಂಸ್ಥೆಯವರು ಕೃಷಿ ಇಲಾಖೆಯ ಪಿ.ಆರ್.ಗಳ ಸಹಾಯ ಪಡೆದು ಎಲ್ಲಾ ರೈತರಿಗೆ ವಿಮೆ ಮೊತ್ತ ಪಾವತಿಸಬೇಕು ಎಂದು ನಿರ್ದೇಶನ ನೀಡಿದರು.

ಫಸಲ್ ಬಿಮಾ ಯೋಜನೆಯಡಿ ಚಿಂಚೋಳಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ರೈತರ ನೋಂದಣಿಯಾಗದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಂಸದ ಖೂಬಾ, ಈ ಸಂಬಂಧ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಚಿಂಚೋಳಿ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ಆಳಂದ ತಾಲ್ಲೂಕಿನಲ್ಲಿ ಬಾಕಿ ಇರುವ 735 ಜನ ರೈತರ ನೋಂದಣಿ ಕಾರ್ಯ ಬೇಗ ಮುಗಿಸಬೇಕು. ಅಂಚೆ ಇಲಾಖೆಯ ಐ.ಪಿ.ಪಿ.ಬಿ. ನಲ್ಲಿ ಬ್ಯಾಂಕ್ ಖಾತೆಗೆ ತೆಗೆಯಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಸಹಾಯಕ ನಿರ್ದೇಶಕಿ ಮಧುಮತಿ, ಜಿಲ್ಲೆಯಲ್ಲಿ 3,06,000 ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿದ್ದು, ಈ ಪೈಕಿ 1,88,870 ಜನರಿಗೆ ಡಿ.ಬಿ.ಟಿ. ಮೂಲಕ ವೇತನ ಪಾವತಿಸಲಾಗುತ್ತಿದೆ. 41 ಸಾವಿರಗಳ ಖಾತೆಗೆ ಆಧಾರ್ ಜೋಡಣೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.

ಆಳಂದ ಮತ್ತು ಚಿಂಚೋಳಿ ಕೃಷಿ ಸಹಾಯಕ ನಿರ್ದೇಶಕರು ತಮ್ಮ ತಾಲ್ಲೂಕುಗಳಲ್ಲಿ ಆದ ಬಿತ್ತನೆ ಪ್ರಮಾಣ ಮತ್ತು ಮಳೆಯಿಂದ ಹಾನಿಗೊಳಗಾದ ಬೆಳೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆಸಿದ ಸಂಸದರು ಕೂಡಲೆ ಜಂಟಿ ಸರ್ವೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.

ಬೀದರ್–ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಕಪ್ಪು ಪಟ್ಟಿಯಲ್ಲಿ ಸೇರಿದ್ದರಿಂದ ಕೆಲಸ ನಿಂತು ಆರು ತಿಂಗಳಾಗಿದ್ದು, ಅಲ್ಲಲ್ಲಿ ಗುಂಡಿ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಗುಂಡಿ ಮುಚ್ಚಿಸಬೇಕು. ಇದಲ್ಲದೆ ಕಮಲನಗರ ರಸ್ತೆಯಲ್ಲಿ ಬರುವ ಅರಣ್ಯ ಮೀಸಲು ಪ್ರದೇಶದಲ್ಲಿ ಬರುವ ಗುಂಡಿ ಮುಚ್ಚಲು ಸಹ ಕ್ರಮ ವಹಿಸಬೇಕು ಎಂದು ಸಂಸದರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಾಗಪ್ಪ ಅವರಿಗೆ ಸೂಚಿಸಿದರು.

ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಬಿ.ಆರ್.ನನಜಗಿ, ಖಜಾನೆ ಇಲಾಖೆಯ ಜಂಟಿ ನಿರ್ದೇಶಕ ಅಶೋಕ, ಆಳಂದ ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT