ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಾಲ್ಲೂಕಿನಲ್ಲಿ ಜನಸಂಪರ್ಕ ಸಭೆ

ಮತದಾರರಿಗೆ ನೊಬೆಲ್ ಪಾರಿತೋಷ ಕೊಟ್ಟರೂ ಕಡಿಮೆ; ಜಾಧವ
Last Updated 25 ಮೇ 2019, 19:53 IST
ಅಕ್ಷರ ಗಾತ್ರ

ಕಲಬುರ್ಗಿ: ಒಂಬತ್ತು ಬಾರಿ ವಿಧಾನಸಭೆ, ಎರಡು ಬಾರಿ ಲೋಕಸಭೆ ಸೇರಿ 11 ಚುನಾವಣೆಯಲ್ಲಿ ಸತತ ಜಯಗಳಿಸಿದ್ದ ಹಾಗೂ ‘ಸೋಲಿಲ್ಲದ ಸರದಾರ’ ಎಂದೇ ಖ್ಯಾತಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪರಾಭವಗೊಳಿಸಿರುವ ಡಾ.ಉಮೇಶ ಜಾಧವ ಕಲಬುರ್ಗಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ತಮ್ಮದೇಯಾದ ಕನಸುಗಳನ್ನು ಇಟ್ಟುಕೊಂಡಿದ್ದಾರೆ.

ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಸದಾ ಸ್ಪಂದಿಸುವುದು, ಕೇಂದ್ರದಿಂದ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು, ಗುಳೆ ತಪ್ಪಿಸುವುದು, ಸ್ಥಳೀಯವಾಗಿ ಉದ್ಯೋಗ ದೊರಕಿಸುವುದು ಅವರ ಪ್ರಮುಖ ಆದ್ಯತೆಗಳಾಗಿವೆ.
ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

*ಸೋಲಿಲ್ಲದ ಸರದಾರ ಖರ್ಗೆ ಅವರನ್ನು ಮಣಿಸಿ ಗೆಲುವು ಸಾಧಿಸಿದ್ದೀರಲ್ಲ, ಈ ಬಗ್ಗೆ ಏನು ಹೇಳುತ್ತೀರಿ?

–ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಸೋಲಿಸಿಲ್ಲ. ಅದು ಕ್ಷೇತ್ರದ ಮತದಾರರ ನಿರ್ಣಯ. ನನ್ನ ಪ್ರಾಮಾಣಿಕ ಹೋರಾಟಕ್ಕೆ ಮತದಾರರು ಸಾಥ್ ಕೊಟ್ಟಿದ್ದಾರೆ. ಬಿಜೆಪಿಯ ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ನಾಯಕರು ನನಗೆ ಬೆಂಬಲವಾಗಿ ನಿಂತಿದ್ದಾರೆ.

*ಖರ್ಗೆ ಅವರ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುತ್ತೀರಾ?

–ಖಂಡಿತ ಮುಂದುವರಿಸುತ್ತೇನೆ. ಅಷ್ಟೇ ಅಲ್ಲ, ಅವರ ಸಲಹೆ, ಮಾರ್ಗದರ್ಶನವನ್ನೂ ಪಡೆಯುತ್ತೇನೆ. ರಾಜಕಾರಣದಲ್ಲಿ ಅವರಿಗೆ 50 ವರ್ಷಗಳ ಅನುಭವವಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು ಎಂಬುದು ನನ್ನ ಆಶಯವಾಗಿದೆ. ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸುತ್ತೇನೆ.

*ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಏನು ಮಾಡುತ್ತೀರಿ?

–ಕಲಬುರ್ಗಿಯಲ್ಲಿ ಸಂಸದರ ಕಚೇರಿಯನ್ನು ತೆರೆಯುತ್ತೇನೆ. ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸುತ್ತೇನೆ. ದಿನವಿಡೀ ಅಲ್ಲೇ ಇದ್ದು, ಕ್ಷೇತ್ರದ ಜನರ ಅಹವಾಲು ಆಲಿಸುತ್ತೇನೆ. ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತೇನೆ. ಮತದಾರರ ನಿರೀಕ್ಷೆ ಮೀರಿ ಕೆಲಸ ಮಾಡುತ್ತೇನೆ. ಜನರು ಯಾವುದೇ ಸಮಯದಲ್ಲಿ ನನ್ನನ್ನು ನೇರವಾಗಿ ಭೇಟಿಯಾಗಬಹುದು. ಮಧ್ಯವರ್ತಿಗಳ ಮೂಲಕ ಬರುವ ಅವಶ್ಯಕತೆ ಇಲ್ಲ.

*ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿಮ್ಮ ಯೋಜನೆಗಳೇನು?

–ಕ್ಷೇತ್ರದಲ್ಲಿ ಸೂರಿಲ್ಲದ ಜನರಿಗೆ ಸೂರು, ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ತಕ್ಷಣದ ಯೋಜನೆಗಳಾಗಿವೆ. ಕಾರ್ಖಾನೆಗಳನ್ನು ಆರಂಭಿಸಿ ಗುಳೆ ತಪ್ಪಿಸುತ್ತೇನೆ. ಹವಾನಿಯಂತ್ರಕ (ಎಸಿ), ಮೋಟಾರ್ ಪಂಪ್, ಮೊಬೈಲ್ ದುರಸ್ತಿ ಸೇರಿದಂತೆ ಗ್ರಾಮೀಣ ಪ್ರದೇಶದ ಯುವಕರಿಗೆ ಕೌಶಲ ತರಬೇತಿ ಕೊಡಿಸುವತ್ತ ಗಮನ ಹರಿಸುತ್ತೇನೆ. ಒಂದು ಹಳ್ಳಿಯಿಂದ 20–25 ಯುವಕರು ತರಬೇತಿ ಪಡೆದರೆ ಅವರ ಬಾಳು ಹಸನಾಗುತ್ತದೆ. ಸ್ಥಳೀಯ ಜನರು ತಮ್ಮ ಕೆಲಸಗಳಿಗಾಗಿ ನಗರ ಪ್ರದೇಶಕ್ಕೆ ಬುರುವುದು ತಪ್ಪುತ್ತದೆ. ಹೈನುಗಾರಿಕೆ ತರಬೇತಿ ಕೊಡಿಸಿ, ಸ್ವ ಉದ್ಯೋಗ ಆರಂಭಿಸಲು ನೆರವಾಗುತ್ತೇನೆ.

*ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೀರಾ?

– ಇಲ್ಲ. ಸಚಿವ ಸ್ಥಾನವನ್ನು ನಾನು ಬಯಸಿಲ್ಲ. ಆದರೆ, ನನ್ನ ಅರ್ಹತೆ ನೋಡಿ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೇನೆ. ಇಂತದ್ದೇ ಖಾತೆ ಬೇಕು ಎಂದು ಕೇಳುವುದಿಲ್ಲ. ಕೊಟ್ಟಿರುವ ಖಾತೆಯನ್ನು ನಿಭಾಯಿಸುತ್ತೇನೆ. ಒಂದು ವೇಳೆ ಸಂಸದನಾಗಿಯೇ ಕೆಲಸ ಮಾಡು ಎಂದರೂ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT