ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬೈಪಾಸ್ ರಿಂಗ್ ರಸ್ತೆಗೆ ಅನುಮೋದನೆ ನೀಡಬೇಕು: ಉಮೇಶ ಜಾಧವ್

Last Updated 22 ಜುಲೈ 2022, 4:33 IST
ಅಕ್ಷರ ಗಾತ್ರ

ಕಲಬುರಗಿ: ‘ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಕಲಬುರಗಿ ನಗರದ ಹೊರವಲಯದಲ್ಲಿ ಹೊಸ ಬೈಪಾಸ್ ರಿಂಗ್ ರಸ್ತೆ ಅಗತ್ಯವಿದ್ದು, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಕೂಡಲೇ ಇದಕ್ಕೆ ಅನುಮೋದನೆ ನೀಡಬೇಕು’ ಎಂದು ಸಂಸದ ಡಾ. ಉಮೇಶ ಜಾಧವ್ ಮನವಿ ಮಾಡಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ‘ಕಲಬುರಗಿ ನಗರವು ಈಗಿರುವ ವರ್ತುಲ ರಸ್ತೆಯನ್ನು ಮೀರಿ ಬೆಳೆದಿದೆ. ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌)-150ಇ, ಎನ್‌ಎಚ್‌-50 ಮತ್ತು ಎನ್‌ಎಚ್‌-
150 ಮಾರ್ಗಗಳಲ್ಲಿ ಸಂಚಾರ ದಟ್ಟಣೆಯಲ್ಲೇ ಜನರು ಪ್ರಯಾಣಿಸುತ್ತಿದ್ದಾರೆ. ಭಾರೀ ಸಂಚಾರ ದಟ್ಟಣೆ ಕಂಡುಬರುತ್ತಿದೆ’ ಎಂದಿದ್ದಾರೆ.

‘ಪ್ರಯಾಣಿಕರ ಸುರಕ್ಷತೆ, ಸುಗಮ ಸಂಚಾರ ಮತ್ತು ದಟ್ಟಣೆ ಮುಕ್ತ ಸಂಚಾರಕ್ಕೆ ನಗರಕ್ಕೆ ಹೊಸ ಬೈಪಾಸ್ ಅಗತ್ಯವಿದೆ. ಉದ್ದೇಶಿತ ಹೊಸ ಬೈಪಾಸ್ ಎನ್‌ಎಚ್-150ಇ (ಕಲಬುರಗಿ–ಅಫಜಲಪುರ) ವೃತ್ತದಿಂದ0.0ಕಿ.ಮೀ.ನಿಂದ ಆರಂಭಗೊಂಡು ಎನ್‌ಎಚ್‌-50(ಕಲಬುರಗಿ-ಜೇವರ್ಗಿ ವಿಭಾಗ) ಜೊತೆಗೆ 41.43 ಕಿ.ಮೀ.ನಲ್ಲಿ ಕೊನೆಗೊಳ್ಳುತ್ತದೆ’ ಎಂದು ಹೇಳಿದ್ದಾರೆ.

‘ಪ್ರಸ್ತಾವಿತ ಬೈಪಾಸ್ ಸರಕು ಸಾಗಾಣೆಯ ನಾಲ್ಕು ಲೈನ್‌ ಮಾರ್ಗವಾಗಿದೆ. ಎನ್‌ಎಚ್-150ಇ, ಎನ್‌-50 ಅನ್ನು ಎನ್‌ಎಚ್‌-150 ಮೂಲಕ ಸಂಪರ್ಕಿಸುವ ಜೋಡಣೆ ರಸ್ತೆಗೆ ಸಚಿವಾಲಯ ಈಗಾಗಲೇ ಅನುಮೋದನೆ ನೀಡಿದೆ. ಈಗ ಅದು ಹೆದ್ದಾರಿ ಸಚಿವಾಲಯದ ಯೋಜನಾ ವಿಭಾಗದಲ್ಲಿ ಬಾಕಿ ಉಳಿದಿದ್ದು, ಪ್ರಸ್ತುತ ವಾರ್ಷಿಕ ಯೋಜನೆಯಲ್ಲಿ ವೆಚ್ಚವನ್ನು ಒಳಗೊಂಡಂತೆ ಅನುಮೋದಿಸಬೇಕಾಗಿದೆ. ಹೆದ್ದಾರಿ ಸಚಿವಾಲಯವು ಬೈಪಾಸ್‌ ರಸ್ತೆ ನಿರ್ಮಾಣ ಘೋಷಣೆ ಹೊರಡಿಸುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವು ಭೂಸ್ವಾಧೀಕ್ಕಾಗಿ ಶೇ 50ರಷ್ಟು ವೆಚ್ಚ ಭರಿಸುವುದಾಗಿ ಒಪ್ಪಿಕೊಂಡಿದೆ. ಹೀಗಾಗಿ, ಈ ಯೋಜನೆಯನ್ನು ಶೀಘ್ರವಾಗಿ ಅನುಮೋದಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ನಾನು ನಿಮ್ಮ ಮೂಲಕ ಒತ್ತಾ
ಯಿಸುತ್ತೇನೆ’ ಎಂದು ಕೋರಿದ್ದಾರೆ.

‘ಸಿಸಿಐ ಕಾರ್ಖಾನೆ ಪುನರಾರಂಭಿಸಿ’
ಕಲಬುರಗಿ ಜಿಲ್ಲೆಯ ‘ಸೇಡಂ ತಾಲ್ಲೂಕಿನ ಕುರಕುಂಟಾದ ಇಲ್ಲಿರುವ ಸಿಸಿ‌ಐ (ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ಕಾರ್ಖಾನೆ ಪುನಃ ಪ್ರಾರಂಭಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು’ ಎಂದು ಡಾ.ಉಮೇಶ ಜಾಧವ್ ಕೋರಿದರು.

ಲೋಕಸಭೆಯಲ್ಲಿ ಮಾತನಾಡಿದ ಅವರು, ‘1998ರಲ್ಲಿ ಸಿಸಿಐ ಕಾರ್ಖಾನೆ ಉತ್ಪಾದನೆ ಸ್ಥಗಿತಗೊಳಿಸಿದ ಬಳಿಕ 2006ರಲ್ಲಿ ಕೇಂದ್ರ ಸರ್ಕಾರ ಸಹ ತನ್ನ ಹೂಡಿಕೆ ಹಿಂಪಡೆಯಿತು. ಇದರಿಂದ ಕಾರ್ಖಾನೆಯನ್ನೇ ನಂಬಿ ಬದುಕುತ್ತಿದ್ದ 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ’ ಎಂದರು.

‘2019ರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಬಳಿಕ ಕೈಗಾರಿಕಾ ಸಚಿವರು ಕಾರ್ಯದರ್ಶಿಗಳ ಮಟ್ಟದ ಸಭೆಯನ್ನು ಕರೆದರು. ಇದರ ಪರಿಣಾಮವಾಗಿ 2020ರ ಸೆಪ್ಟೆಂಬರ್‌ನಲ್ಲಿ ಮಾಲಿನ್ಯ ಮಂಡಳಿಯ ಅಧಿಕಾರಿಗಳು 3 ದಿನ ಜನರಿಂದ ಅಭಿಪ್ರಾಯ ಪಡೆಯಿತು. ಈ ಪ್ರದೇಶದಲ್ಲಿ ಸುಣ್ಣದ ಕಲ್ಲಿನ ಗಣಿಗಾರಿಕೆ ಪ್ರಾರಂಭಿಸಲು ಯಾವುದೇ ಆಕ್ಷೇಪಣೆಗಳು ಬರಲಿಲ್ಲ. ಆದರೂ ಕಾರ್ಖಾನೆ ಪುನರಾರಂಭ ಆಗುತ್ತಿಲ್ಲ’ ಎಂದರು. ‘ಈ ಭಾಗದ ಜನರು ತಮ್ಮ ಜೀವನೋಪಾಯಕ್ಕೆ ಕಾರ್ಖಾನೆ ಆರಂಭವಾಗಲಿದೆ ಎಂಬ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಇಲ್ಲಿ ಹೇರಳ ಪ್ರಮಾಣದಲ್ಲಿ ಎಂದರೆ 2 ದಶಲಕ್ಷ ಟನ್‌ಗಳಷ್ಟು ಸುಣ್ಣದ ಕಲ್ಲು ಇದೆ. ಸಿಮೆಂಟ್ ಕಾರ್ಖಾನೆ ಪ್ರಾರಂಭವಾದರೂ 100 ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯಲಿದೆ’ ಎಂದು ಮನವರಿಕೆ ಮಾಡಿದರು. ಕ್ಲಿಂಕರ್ಸ್ ಪ್ರಕ್ರಿಯೆಗೆ ಕೇಂದ್ರ ಸರ್ಕಾರವು ಮಂಜೂರು ಮಾಡಿದ್ದರೆ, ನೇರ ಮತ್ತು ಪರೋಕ್ಷವಾಗಿ 2000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ಆದ್ದರಿಂದ ಕ್ಲಿಂಕರ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಸಿಸಿಐಎಲ್‌ನಲ್ಲಿನ ಹೂಡಿಕೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸುವಂತೆ’ ಲೋಕಸಭೆಯಲ್ಲಿ ಸಂಸದರು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT